ಗೋಮಾಳ ಜಮೀನು ಉಳಿಸುವಂತೆ 5 ಗ್ರಾಮಗಳ ಗ್ರಾಮಸ್ಥರ ಪ್ರತಿಭಟನೆ

ಗುಬ್ಬಿ :

      ಮೂಲಭೂತ ಸರ್ಕಾರಿ ಸವಲತ್ತುಗಳನ್ನು ಅನುಷ್ಠಾನಗೊಳಿಸಲು ಮೀಸಲಿಟ್ಟ 9 ಎಕರೆ ಸರ್ಕಾರಿ ಗೋಮಾಳ ಜಮೀನು ಪ್ರಭಾವಿ ಕುಟುಂಬವೊಂದಕ್ಕೆ ಮಂಜೂರು ಮಾಡಿರುವುದನ್ನು ಖಂಡಿಸಿ ಸೋಮವಾರ ತಾಲ್ಲೂಕಿನ ನಿಟ್ಟೂರು ಹೋಬಳಿ ಓಬಳಾಪುರದಲ್ಲಿ ಗುಬ್ಬಿ ಮತ್ತು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗಡಿಭಾಗದ ಐದು ಗ್ರಾಮದ ನಿವಾಸಿಗಳು ದಿಢೀರ್ ಪ್ರತಿಭಟಿಸಿ ಗೋಮಾಳ ಜಮೀನು ಉಳಿಸುವಂತೆ ಆಗ್ರಹಿಸಿದರು.

      ಕಳೆದ 20 ವರ್ಷಗಳಿಂದ ಗಣಿಬಾದಿತ ಪ್ರದೇಶಗಳಾದ ಗುಬ್ಬಿ ತಾಲ್ಲೂಕಿನ ಓಬಳಾಪುರ, ಗುಡ್ಡದಹಟ್ಟಿ, ಹೊಸಹಟ್ಟಿ, ಹಾಗೂ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕರಡಿ, ರಾಂಪುರ, ತೀರ್ಥಪುರ ಹೀಗೆ ಅನೇಕ ಗ್ರಾಮಗಳು ಮೊದಲನಿಂದಲೂ ಮೂಲ ಸವಲತ್ತು ವಂಚಿತ ಗ್ರಾಮಗಳಾಗಿವೆ. ಇಲ್ಲಿಯ ಸಮಸ್ಯೆಗಳ ಪಟ್ಟಿ ಹೇಳತೀರದಾಗಿದೆ. ಕುಡಿಯುವ ನೀರಿನ ಅಭಾವದಿಂದ ಎಲ್ಲವೂ ಸಮಸ್ಯೆಯಿಂದಲೇ ಕೂಡಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಸೌಲಭ್ಯಗಳಾದ ಶಾಲೆ, ಅಂಗನವಾಡಿ, ಹೆರಿಗೆ ಆಸ್ಪತ್ರೆ, ನ್ಯಾಯಬೆಲೆ ಅಂಗಡಿ ಹೀಗೆ ಅನೇಕ ಸರ್ಕಾರಿ ಕಟ್ಟಡಗಳ ನಿರ್ಮಾಣಕ್ಕೆ ಓಬಳಾಪುರ ಗ್ರಾಮದ ಸರ್ವೆ ನಂಬರ್ 6 ರಲ್ಲಿ 9 ಎಕರೆ ಗೋಮಾಳ ಮೀಸಲಾಗಿಟ್ಟುಕೊಂಡಿದ್ದೇವು. ಆದರೆ ಪ್ರಭಾವಿ ಕುಟುಂಬದ ಸದಸ್ಯರು ಈ ಜಮೀನು ಬಗರ್‍ಹುಕುಂ ಮಂಜೂರು ಮಾಡಿಸಿಕೊಂಡಿರುವುದು ಅಚ್ಚರಿ ತಂದಿದೆ. ಸುಮಾರು ಆರು ಗ್ರಾಮಗಳಿಗೆ ಅವಶ್ಯವಿರುವ ಈ ಜಮೀನು ಗೋಮಾಳವಾಗಿಯೇ ಉಳಿಸಬೇಕು. ಬಳಸುವುದಾದರೆ ಸರ್ಕಾರಿ ಸವಲತ್ತುಗಳಿಗೆ ಮಾತ್ರ ಬಳಸಬೇಕು ಎಂದು ಸ್ಥಳೀಯ ಮುಖಂಡ ಹಿರೇಜುಂಜಯ್ಯ ಆಗ್ರಹಿಸಿದರು.

      ಏಕಾಏಕಿ ಗೋಮಾಳ ಜಮೀನು ಅಚ್ಚಕಟ್ಟು ಮಾಡಿಕೊಳ್ಳಲು ಮುಂದಾದ ಪ್ರಭಾವಿ ಕುಟುಂಬ ಎರಡು ದಿನಗಳ ಹಿಂದೆಯಷ್ಟೇ ಈ ಸ್ಥಳಕ್ಕೆ ಕಾಲಿಟ್ಟಿದೆ. ಈ ಸ್ಥಳದಲ್ಲಿ ಜಾನುವಾರುಗಳ ಮೇವು ಇದೆ. ನೂರಾರು ದನಕರುಗಳ ಆಹಾರದ ಹುಲ್ಲುಗಾವಲು ಇದಾಗಿದ್ದು, ಮುಖ್ಯ ರಸ್ತೆ ಬದಿಯಲ್ಲಿರುವ ಕಾರಣ ಇದರ ಮೇಲೆ ಕಣ್ಣು ಬಿದ್ದಿದೆ. ಈ ಜತೆಗೆ ಗೋಕಟ್ಟೆಯನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಕಟ್ಟೆಯ ಬದಿಯಲ್ಲಿ ಪಂಚಾಯಿತಿ ಕೊರೆಸಿದ ಬೋರ್‍ವೆಲ್ ಸಹ ನಮ್ಮದು ಎನ್ನುವ ಪ್ರಭಾವಿಗಳು ಹಣದಾಸೆ ತೋರಿ ಅಧಿಕಾರಿಗಳಿಂದ ದಾಖಲೆ ಮಾಡಿಸಿಕೊಂಡಿದ್ದಾರೆ. ಆದರೆ ವಾಸ್ತವದಲ್ಲಿ ಆರು ಗ್ರಾಮಗಳ ಮೂರು ಸಾವಿರ ಮಂದಿಗೆ ಅನುಕೂಲ ಮಾಡಲು ಮೀಸಲಿಟ್ಟ ಸ್ಥಳದಲ್ಲಿ ಸರ್ಕಾರಿ ಆಸ್ಪತ್ರೆ, ಶಾಲೆ, ಅಂಗನವಾಡಿ ಇಂತಹ ಕಟ್ಟಡ ಮಾತ್ರ ನಿರ್ಮಾಣವಾಗಬೇಕು. ಜತೆಗೆ ಗುಡಿಸಲು ಕುಟುಂಬಗಳೇ ಹೆಚ್ಚಾಗಿರುವ ಕಾರಣ ನಿವೇಶನ ರಹಿತರಿಗೆ ನಿವೇಶನ ಇಲ್ಲಿ ಹಂಚಿ ನವಗ್ರಾಮ ನಿರ್ಮಾಣ ಮಾಡಬೇಕು ಎಂದು ಮುಖಂಡ ಕೆ.ಎಸ್.ಗೋವಿಂದರಾಜು ಆಗ್ರಹಿಸಿದರು.

      ಗಣಿಭಾದಿತ ಪ್ರದೇಶವೆಂದು ಗುರುತಿಸಿಕೊಂಡ ಈ ಗಡಿ ಗ್ರಾಮಗಳು ಇತ್ತ ಗುಬ್ಬಿಗೂ ದೂರವಾಗಿದೆ. ಅತ್ತ ಚಿಕ್ಕನಾಯಕನಹಳ್ಳಿಗೂ ದೂರವಿದೆ. ಈ ಮಧ್ಯೆ ಯಾವುದೇ ಮೂಲ ಸವಲತ್ತುಗಳಿಲ್ಲದೇ ಕುಗ್ರಾಮಗಳಾಗಿವೆ. ಗುಡ್ಡಪ್ರದೇಶಗಳಾದ ಇಲ್ಲಿ ನೀರಿನ ಸಮಸ್ಯೆ ಸಾಕಷ್ಟಿದೆ. ಗೋಮಾಳ ಹಾಗೂ ಗೋಕಟ್ಟೆ ಮಧ್ಯೆ ಕೊರೆದ ಬೋರ್‍ವೆಲ್ ಎಲ್ಲಾ ಗ್ರಾಮಗಳಿಗೂ ನೀರುಣಿಸಲಿದೆ. ಇಂತಹ ಬೋರ್‍ವೆಲ್ ನನ್ನದು ಎನ್ನುವ ಕುಟುಂಬಕ್ಕೆ ಸಾಥ್ ನೀಡುವ ಅಧಿಕಾರಿಗಳು ಜಾಣಮೌನ ವಹಿಸಿದ್ದಾರೆ. ಎರಡು ದಿನಗಳ ಹಿಂದೆ ಜೆಸಿಬಿ ಯಂತ್ರ ತಂದು ಗೋಮಾಳವನ್ನು ಅಚ್ಚಕಟ್ಟು ಮಾಡಿಕೊಂಡ ಕುಟುಂಬ ದಾಖಲೆ ತೋರುತ್ತಿದೆ. ಆದರೆ ವಾಸ್ತವದಲ್ಲಿ ಅಧಿಕಾರಿಗಳು ಗ್ರಾಮದ ಒಳಿತಿಗೆ ಮೀಸಲಿದ್ದ ಜಮೀನು ಹೇಗೆ ಮಂಜೂರು ಮಾಡಿದರು ಎಂದು ಕೆಂಡಕಾರಿದ ಗ್ರಾಮಸ್ಥರು ಈ ಬಗ್ಗೆ ಉಪವಿಭಾಗಾಧಿಕಾರಿಗಳು, ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿದೆ. ಈ ಸ್ಥಳ ಮೀಸಲಾಗಿಟ್ಟು ಗೋಮಾಳ ಉಳಿಸಿಕೊಡಬೇಕು. ಇಲ್ಲವಾದಲ್ಲಿ ಪಾದಯಾತ್ರೆ ನಡೆಸಿ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸುತ್ತೇವೆ. ಈ ಕಾರ್ಯಕ್ಕೆ ಆರು ಗ್ರಾಮಗಳ ಸಾವಿರಾರು ಗ್ರಾಮಸ್ಥರು ಬೆಂಬಲ ನೀಡಲಿದ್ದಾರೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

      ಎರಡು ತಾಲ್ಲೂಕಿನ ಗಡಿಭಾಗವಾದ ಇಲ್ಲಿನ ದುಸ್ಥಿತಿ ಅಧಿಕಾರಿಗಳಿಗೆ ತಿಳಿದಿದೆ. ಗಣಿಯಿಂದಾಗಿ ಸಾಕಷ್ಟು ಸಮಸ್ಯೆ ಎದುರಿಸಿದ್ದ ನಮಗೆ ಗಣಿಬಾದಿತ ಪ್ರದೇಶದ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಮಂಜೂರು ಮಾಡಿ ಸರ್ಕಾರಿ ಸವಲತ್ತು ಒದಗಿಸಬೇಕು. ಆಧುನಿಕ ಆಸ್ಪತ್ರೆ, ಉತ್ತಮ ರಸ್ತೆ, ನೂತನ ಶಾಲೆ, ಅಂಗನವಾಡಿ ಜತೆಗೆ ಸಮುದಾಯಭವನ ನಿರ್ಮಾಣ ಮಾಡಲು ಮೀಸಲಿರುವ ಹಣವನ್ನು ಬಳಸಿ ಗೋಮಾಳದಲ್ಲಿ ನವಗ್ರಾಮ ನಿರ್ಮಾಣ ಮಾಡಿಕೊಡಬೇಕು. ಈ ಕೆಲಸ ಸರ್ಕಾರ ತುರ್ತು ನಡೆಸಬೇಕು. ಎಲ್ಲಾ ಜನಾಂಗವೂ ಇಲ್ಲಿ ನೆಲೆಕಂಡಿವೆ. ಇರುವ ಅಲ್ಪಸ್ಪಲ್ಪ ಜಮೀನಿನಲ್ಲಿ ಬೇಸಾಯ ಮಾಡಲಾಗದೇ ಹೈನುಗಾರಿಕೆ ನಂಬಿಕೊಂಡ ಕುಟುಂಬಗಳಿಗೆ ಗೋಮಾಳ ಅಗತ್ಯವಾಗಿದೆ. ಎಲ್ಲವನ್ನೂ ಮಂಜೂರು ಮಾಡುವ ಅಧಿಕಾರಿಗಳು ಒಂದೇ ಕುಟುಂಬದ ಸದಸ್ಯರಿಗೆ 9 ಎಕರೆ ಪ್ರದೇಶ ಹೇಗೆ ಮಂಜೂರು ಮಾಡಿದರು ಎಂದು ಕಿಡಿಕಾರಿದರು. ಅಧಿಕಾರಿಗಳ ವಿರುದ್ದ ಘೋಷಣೆ ಕೂಗಿದರು.

     ಈ ಸಂದರ್ಭದಲ್ಲಿ ಮುಖಂಡರಾದ ಮಂಜುನಾಥ್, ವೆಂಕಟೇಶ್, ಗಿರಿಯಪ್ಪ, ಕೃಷ್ಣಮೂರ್ತಿ, ಜೀತೇಂದ್ರ, ಬಸವರಾಜು, ಶಿವಲಿಂಗಯ್ಯ, ದೊಡ್ಡಜುಂಜಯ್ಯ, ಮರಿಯಣ್ಣ, ಈರಣ್ಣ, ಪ್ರಕಾಶ್, ತಿಮ್ಮಯ್ಯ, ದಯಾಳ್‍ಗೌಡ, ರಾಜಣ್ಣ ಇತರರು ಇದ್ದರು.

(Visited 5 times, 1 visits today)

Related posts