ಬಿಎಸ್‍ವೈ ಬರಿಗೈಯಲ್ಲಿ ವಾಪಸ್ಸಾಗಿರುವುದು ಸಿ.ಎಂ.ಬದಲಾವಣೆ ಮುನ್ಸೂಚನೆ

ತುಮಕೂರು:

      ಸಚಿವ ಸಂಪುಟ ವಿಸ್ತರಣೆಯ ಪಟ್ಟಿ ಇಟ್ಟುಕೊಂಡು ಪಕ್ಷದ ಹೈಕಮಾಂಡ್‍ನ್ನು ಭೇಟಿಯಾಗಿ ಬರಿಗೈಯಲ್ಲಿ ಬಿ.ಎಸ್.ಯಡಿಯೂರಪ್ಪ ಮರಳಿರುವುದು ಮುಖ್ಯಮಂತ್ರಿ ಬದಲಾವಣೆಯ ಮುನ್ಸೂಚನೆ ಎಂದು ರಾಜ್ಯ ಅಪೇಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.

      ನಗರದ ಟಿ.ಎ.ಪಿ.ಸಿ.ಎಂ. ಮುಂಭಾಗದಲ್ಲಿ ಏರ್ಪಡಿಸಿದ್ದ ಉಕ್ಕಿನ ಮಹಿಳೆ, ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರ 103ನೇ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬಿ.ಎಸ್.ವೈ ಅವರನ್ನು ಮುಂದುವರೆಸುವ ಇರಾಧೆ ಬಿಜೆಪಿ ಪಕ್ಷಕ್ಕೆ ಇದ್ದರೆ, ಅವರು ತೆಗೆದುಕೊಂಡು ಹೋಗಿದ್ದ ಪಟ್ಟಿಗೆ ಅನುಮೋಧನೆ ನೀಡುತಿದ್ದರು.ಬಿಜೆಪಿ ಪಕ್ಷಕ್ಕೆ ಈಗ ಬಿ.ಎಸ್.ವೈ ಬೇಕಾಗಿಲ್ಲ ಎಂಬುದು ಇದರಿಂದಲೇ ಗೊತ್ತಾಗುತ್ತದೆ ಎಂದರು.

      ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಂದು ರಾಜ್ಯವನ್ನು ಪ್ರತಿನಿಧಿಸುವ ವ್ಯಕ್ತಿ. ಇಂತಹವರಿಗೆ ಕೇಂದ್ರದ ಗೃಹಸಚಿವರನ್ನು ಭೇಟಿಯಾಗಲು ಐದು ನಿಮಿಷ ಕಾಲಾವಕಾಶ ಕೊಡಲಿಲ್ಲವೆಂದರೆ, ಇದು ಕೇವಲ ಯಡಿಯೂರಪ್ಪ ಅವರಿಗೆ ಮಾಡಿದ ಅಪಮಾನವಲ್ಲ. ಇಡೀ ರಾಜ್ಯಕ್ಕೆ ಮಾಡಿದ ಅಪಮಾನ. ಇದು ಖಂಡನೀಯ ಎಂದು ಕೆ.ಎನ್.ರಾಜಣ್ಣ, ಕರ್ನಾಟಕವೆಂದರೆ ಅಷ್ಟು ತಾತ್ಸಾರವೇ ಎಂದು ಪ್ರಶ್ನಿಸಿದರು.

       ಶಿರಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ಬಿಜೆಪಿ ಪಕ್ಷ ಮತದಾರರಿಗೆ ನೀಡಿದ ಅತಿಯಾದ ಸುಳ್ಳೇ ಕಾರಣ. ಮದಲೂರು ಕೆರೆಗೆ ನೀರು ಹರಿಸುತ್ತೇವೆ, ಮುಂದಿನ ಅಧಿವೇಶನದಲ್ಲಿ ನ್ಯಾ.ಸದಾಶಿವ ಆಯೋಗದ ವರದಿ ಜಾರಿ, ಕಾಡುಗೊಲ್ಲರ ಅಭಿವೃದ್ದಿ ನಿಗಮ, ಮಾದನಾಯಕನಹಳ್ಳಿ ಬೋವಿ ಸಮುದಾಯಕ್ಕೆ ಕ್ವಾರಿ ಲೀಸ್ ಸೇರಿದಂತೆ ಹಲವಾರು ಹಸಿ ಸುಳ್ಳುಗಳನ್ನು ಸತ್ಯದ ತಲೆಯ ಮೇಲೆ ಹೊಡದಂತೆ ಹೇಳಿದರಿಂದ ಮತದಾರರು ನಂಬಿ, ಅತ್ತ ಕಡೆಗೆ ವಾಲಿದರು.ಇಂದು ಕಾಡುಗೊಲ್ಲ ಹೋಗಿ ಗೊಲ್ಲ ಅಭಿವೃದ್ದಿ ನಿಗಮದ ಪ್ರಸ್ತಾಪವಾಗುತ್ತಿದೆ.ನಿಗಮದ ಆದೇಶ ಆಗಿ ಒಂದುವರೆ ತಿಂಗಳು ಕಳೆದರೂ ಒಂದು ನೈಯಾ ಪೈಸೆ ಹಣ ನೀಡಿಲ್ಲ. ಬಿಜೆಪಿ ಮತದಾರರಿಗೆ ನೀಡಿರುವ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಹಿಂಜರಿದರೆ, ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ಕೆ.ಎನ್.ರಾಜಣ್ಣ ಎಚ್ಚರಿಸಿದರು.

      ಅಭಿವೃದ್ದಿ ಪ್ರಾಧಿಕಾರಗಳ ರಚನೆಗೆ ಸಂಬಂಧಿಸಿದಂತೆ ನಾನು ಸಿದ್ದಗಂಗಾ ಮಠದ ಶ್ರೀಸಿದ್ದಲಿಂಗಸ್ವಾಮೀಜಿಗಳ ಹೇಳಿಕೆಯನ್ನು ಒಪ್ಪುತ್ತೇನೆ. ಸರಕಾರದ ಸವಲತ್ತುಗಳು ಅರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದ ಜನಗಳಿಗೆ ಸಿಗಬೇಕೆ ಹೊರತು, ಎಲ್ಲವನ್ನು ಅನುಭವಿಸಿದವರಿಗಲ್ಲ ಎಂದ ಕೆ.ಎನ್.ಆರ್,ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ.
ಅಲ್ಲದೆ ಪ್ರಧಾನಿ ಮೋದಿಗಳ ಸಬ್‍ಕಾ ಸಾತ್, ಸಬ್‍ಕ ವಿಕಾಶ ಬರಿ ಬೋಗಳೆ,ಬಸವಕಲ್ಯಾಣ ಮತ್ತು ಬೆಳಗಾವಿ ಉಪಚುನಾವಣೆ ಸಂದರ್ಭದಲ್ಲಿ ಮರಾಠಿಗರು ನೆನಪವಾಗಿದ್ದಾರೆ.

      ಇದುವರೆಗೂ ಅವರು ನಮ್ಮ ಜೊತೆ ಇರಲಿಲ್ಲವೇ,ನವೆಂಬರ್ 1 ರಂದು ಕನ್ನಡ ರಾಜೋತ್ಸವದ ದಿನ ಕಪ್ಪು ಭಾವುಟ ಹಾರಿಸಿ, ಕರಾಳ ದಿನ ಆಚರಿಸಿದವರ ಅಭಿವೃದ್ದಿಗೆ ಪ್ರಾಧಿಕಾರ, ಇದು ನ್ಯಾಯವೇ ಎಂದು ಕೆ.ಎನ್.ರಾಜಣ್ಣ ಪ್ರಶ್ನಿಸಿದರು.

      ನಾನು ಶ್ರೀಮತಿ ಇಂದಿರಾಗಾಂಧಿ ಅವರ ಅನುಯಾಯಿ, 1971ರಲ್ಲಿ ಅವರು ತೆಗೆದುಕೊಂಡ ಸಾಮಾಜಿಕ ಕ್ರಾಂತಿಯ ನಿರ್ಣಯಗಳಿಂದ ಪ್ರಜಾ ಸೊಷಿಯಲಿಷ್ಟ್ ಪಾರ್ಟಿ ಬಿಟ್ಟು ಕಾಂಗ್ರೆಸ್ ಸೇರಿದೆ.ಇಂದಿಗೂ ಅವರ ಅನುಯಾಯಿಯಾಗಿಯೇ ಮುಂದುವರೆದಿದ್ದೇನೆ.

      ದೇಶದ ಅಭಿವೃದ್ದಿ ದೃಷ್ಟಿಯಿಂದ ಬ್ಯಾಂಕ್‍ಗಳ ರಾಷ್ಟ್ರೀಕರಣ, ರಾಜಧನ ರದ್ದು ಸೇರಿದಂತೆ ಹಲವಾರು ಐತಿಹಾಸಿಕ ನಿರ್ಧಾರಗಳು ಇಂದಿಗೂ ಮಾದರಿ. ಬಾಂಗ್ಲಾ ದೇಶದ ಉದಯ ಸೇರಿದಂತೆ ಹಲವಾರು ನಿರ್ಧಾರಗಳು ಭಾರತವನ್ನು ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿಸಲು ಸಾಧ್ಯವಾಯಿತು ಎಂದರು.

      ಕಾಂಗ್ರೆಸ್ ಪಕ್ಷಕ್ಕೆ ಇಂದು ಹೊಸ ಮುಖಗಳ ಅಗತ್ಯವಿದೆ.ದೇಶದ ಸುಮಾರು 30 ಕೋಟಿಗೂ ಹೆಚ್ಚು ಯುವ ಮತದಾರರಿದ್ದಾರೆ. ಅವರನ್ನು ಪಕ್ಷದತ್ತ ಸೆಳೆಯಬೇಕೆಂದರೆ ಪಕ್ಷದ ಹೊಸ ಮುಖಂಡರ ಅಗತ್ಯವಿದೆ ಎಂದ ಕೆ.ಎನ್.ಆರ್,ರಾಜ್ಯದ ಮುಖ್ಯಮಂತ್ರಿ ಯಾರಾಗಬೇಕು ಎಂಬ ಚರ್ಚೆ ಈಗ ಅಪ್ರಸ್ಥುತ.ಮೊದಲು 113 ಸೀಟು ಗೆಲ್ಲುವ ಕಡೆಗೆ ಎಲ್ಲಾ ಗಮನಹರಿಸಬೇಕಾಗಿದೆ.

      ಆ ನಂತರ ಪಕ್ಷದ ಹೈಕಮಾಂಡ್ ಸಿ.ಎಂ. ಯಾರಾಗಬೇಕು ಎಂದು ತೀರ್ಮಾನಿಸುತ್ತದೆ.ಕಾಂಗ್ರೆಸ್ ಪಕ್ಷದಲ್ಲಿ ಸಿ.ಎಂ. ಆಗುವ ಆರ್ಹತೆ ಇರುವ ಅನೇಕ ಮುಖಂಡರಿದ್ದಾರೆ.ಡಿ.ಕೆ.ಶಿ, ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್ ಸೇರಿದಂತೆ ಯಾರು ಬೇಕಾದರೂ ಮುಖ್ಯಮಂತ್ರಿಯಾಗಬಹುದು. ಮೊದಲು ಚುನಾವಣೆಯಲ್ಲಿ ಬಹುಮತ ಗಳಿಸುವತ್ತ ಎಲ್ಲರು ಗಮನಹರಿಸಬೇಕಾಗಿದೆ ಎಂದು ಕೆ.ಎನ್.ರಾಜಣ್ಣ ನುಡಿದರು.

      ಈ ವೇಳೆ ವಿಧಾನಪರಿಷತ್ ಸದಸ್ಯ ಹಾಗೂ ಕೆ.ಪಿಸಿಸಿ ರಾಜ್ಯ ಕಾರ್ಯದರ್ಶಿ ವೇಣುಗೋಪಾಲ್,ಸಹಕಾರ ಮಹಾಮಂಡಳದ ರಾಜ್ಯ ಅಧ್ಯಕ್ಷ ಗಂಗಣ್ಣ, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ನಾರಾಯಣಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

(Visited 5 times, 1 visits today)

Related posts

Leave a Comment