ರಫೇಲ್ ಖರೀದಿಯ ವಿರುದ್ಧ ಕಾಂಗ್ರೆಸ್ ಅಪಪ್ರಚಾರ : ಬಿಜೆಪಿಯಿಂದ ನಗರದಲ್ಲಿ ಪ್ರತಿಭಟನೆ

ತುಮಕೂರು:

      ರಫೇಲ್ ಯುದ್ಧ ವಿಮಾನ ಖರೀದಿಯ ಒಪ್ಪಂದದ ಬಗ್ಗೆ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

      ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಜಮಾಯಿಸಿದ ನೂರಾರು ಮಂದಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ವಿರುದ್ಧ ಘೋಷಣೆಗಳನ್ನು ಕೂಗಿದರು.

       ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಂಸದ ಜಿ.ಎಸ್. ಬಸವರಾಜು, ಬಹುಕೋಟಿ ರಫೇಲ್ ಯುದ್ಧ ವಿಮಾನ ಖರೀದಿಯ ಒಪ್ಪಂದದಲ್ಲಿ ಅವ್ಯವಹಾರಗಳು ನಡೆದಿದೆ ಎಂದು ಕಾಂಗ್ರೆಸ್ ಪಕ್ಷವು ದೇಶದಾದ್ಯಂತ ಕೇಂದ್ರ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದೆ. ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಯಾವುದೇ ರೀತಿಯ ಅವ್ಯವಹಾರಗಳು ನಡೆದಿಲ್ಲ ಎಂದರು.

      ರಫೇಲ್ ಯುದ್ಧ ವಿಮಾನವು ಗುಣಮಟ್ಟದಲ್ಲಿ ಉನ್ನತಿ ಹೊಂದಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಕಾಂಗ್ರೆಸ್ ಪಕ್ಷವು ರಕ್ಷಣಾ ವಿಷಯದಲ್ಲಿ ಹಲವು ಅವ್ಯವಹಾರ ಮಾಡಿದ್ದನ್ನು ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವನ್ನು ಅವ್ಯಹಾರದಲ್ಲಿ ಸಿಲುಕಿಸುತ್ತಿರುವುದು ಖಂಡನೀಯ ಎಂದರು.

ಈಗಾಗಲೇ ಸುಪ್ರೀಂ ಕೋರ್ಟ್ನಲ್ಲಿ ರಫೇಲ್ ಯುದ್ಧ ವಿಮಾನ ಖರೀದಿ ಅವ್ಯವಹಾರ ಕುರಿತು ತನಿಖೆಯಾಗಬೇಕೆಂದು ಕೋರಿ ಸಲ್ಲಿಸಲಾಗಿದ್ದ ಎಲ್ಲ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ನ ತ್ರಿಸದಸ್ಯ ಪೀಠ ತಿರಸ್ಕರಿಸಿದ್ದು, ಪ್ರಕರಣದ ತನಿಖೆ ಅಗತ್ಯವಿಲ್ಲ. ಈ ಡೀಲ್ನಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆದಿಲ್ಲ. ರಫೇಲ್ ಯುದ್ಧ ವಿಮಾನ ಗುಣಮಟ್ಟದಲ್ಲಿ ಯಾವುದೇ ಲೋಪ ಇಲ್ಲ. ಈ ಯುದ್ಧ ವಿಮಾನ ನಮ್ಮ ಅಗತ್ಯ ಎಂಬ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದೆ ಎಂದು ಅವರು ಹೇಳಿದರು.

      ಮುಖಂಡ ಎಸ್. ಶಿವಪ್ರಸಾದ್ ಮಾತನಾಡಿ, ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರೂ ಸಹ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರದ ವಿರುದ್ಧ ವಿನಾ ಕಾರಣ ಮಾಡುತ್ತಿರುವ ಆರೋಪ ಖಂಡನೀಯ. ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಚರ್ಚೆ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವ ಮೂಲಕ ನ್ಯಾಯಾಂಗದ ಘನತೆಯನ್ನು ಕಾಪಾಡಬೇಕು ಎಂದು ಆಗ್ರಹಿಸಿದರು.

      ಇದೇ ಸಂದರ್ಭದಲ್ಲಿ ಪ್ರತಿಭಟನಾಕಾರರು ಅಪರ ಜಿಲ್ಲಾಧಿಕಾರಿ ಚೆನ್ನಬಸಪ್ಪರವರಿಗೆ ಮನವಿ ಪತ್ರ ಅರ್ಪಿಸಿ, ರಾಷ್ಟ್ರಪತಿಗಳಿಗೆ ಕಳುಹಿಸಿಕೊಡುವಂತ ಮನವಿ ಮಾಡಿದರು.

      ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್. ಹುಲಿನಾಯ್ಕರ್, ಮುಖಂಡರಾದ ಸಿ.ಎನ್. ರಮೇಶ್, ರಾಮಾಂಜಿನಪ್ಪ, ರವೀಶಯ್ಯ, ದೊಡ್ಡಮನೆ ಗೋಪಾಲಗೌಡ, ರುದ್ರೇಶ್, ಪಾಲಿಕೆ ಸದಸ್ಯರುಗಳಾದ ಮಲ್ಲಿಕಾರ್ಜುನಯ್ಯ, ಮಂಜುಳಾ ಆದರ್ಶ, ದೀಪಶ್ರೀ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

(Visited 5 times, 1 visits today)

Related posts

Leave a Comment