ವಿದ್ಯಾವಂತ ಸಮುದಾಯ ಆಮಿಷಗಳಿಗೆ ಬಲಿಯಾಗುತ್ತಿದ್ದಾರೆ

ತುಮಕೂರು:

      ವಿದ್ಯಾವಂತ ಸಮುದಾಯ ಅಮೀಷಗಳಿಗೆ ಬಲಿಯಾಗಿ ಮತ ಚಲಾಯಿಸುತ್ತಿದ್ದಾರೆ ಎಂಬ ಆರೋಪ, ಶಿಕ್ಷಕರು ಮತ್ತು ಪದವಿಧರರ ಕ್ಷೇತ್ರಗಳ ಮತದಾರರ ಮೇಲಿದ್ದು, ಇದರಿಂದ ಹೊರಬರಲು ಆಗ್ನೇಯ ಪದವಿಧರರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಮೇಶ್‍ಬಾಬು ಅವರಿಗೆ ಮತಚಲಾಯಿಸುವಂತೆ ಕೆಪಿಸಿಸಿ ರಾಜ್ಯ ವಕ್ತಾರ ಲಕ್ಷ್ಮಣ್ ಮನವಿ ಮಾಡಿದ್ದಾರೆ.

      ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಶಿಕ್ಷಕರು ಮತ್ತು ಪದವಿಧರರಿಗೆ ಏನಾದರೂ ಕಿಂಚಿತ್ತು ಸರಕಾರದ ಸವಲತ್ತುಗಳು ನೀಡಿದ್ದರೆ,ಅದು ಕಾಂಗ್ರೆಸ್ ಪಕ್ಷದ ಸರಕಾರವಿದ್ದಾಗ ಮಾತ್ರ. ಆದರೆ ಈ ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಕಾಣಲು ಸಾಧ್ಯವಾಗುತ್ತಿಲ್ಲ.ಇದಕ್ಕೆ ಕಾರಣ ಈ ಕ್ಷೇತ್ರಗಳ ಮತದಾರರು ಅಮೀಷಗಳಿಗೆ ಸುಲಭವಾಗಿ ತುತ್ತಾಗುತ್ತಿದ್ದಾರೆ ಎಂಬ ಅಪಾದನೆಗಳು ಕೇಳಿ ಬರುತ್ತಿದ್ದು,ಇದರ ಹೊರಬರಲು ಇರುವ ಏಕೈಕ ಮಾರ್ಗವೆಂದರೆ ಈ ಸಾಲಿನಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಮೇಶ್‍ಬಾಬು ಗೆಲುವು ಎಂದರು.

      ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಿದ್ದ 6ನೇ ವೇತನ ಆಯೋಗದ ಶಿಫಾರಸ್ಸಿನಂತೆ ಶೇ28 ಬದಲು ಶೇ30ರಷ್ಟು ವೇತನವನ್ನು ಹೆಚ್ಚಳ ಮಾಡಿದರು.ಇದರಿಂದ ಒಬ್ಬ ಸರಕಾರಿ ನೌಕರರಿಗೆ ಮಾಸಿಕ 30 ಸಾವಿರದಿಂದ 60 ಸಾವಿರದ ವರೆಗೆ ವೇತನ ಹೆಚ್ಚಳವಾಯಿತು.15 ಸಾವಿರ ಕೋಟಿ ರೂಗಳಿಗೆ ಹೆಚ್ಚಿನ ಅನುದಾನವನ್ನು ನೀಡಿದರು.ಅಲ್ಲದೆ ಪಿಯು ಮತ್ತು ಹೈಸ್ಕೂಲ್ ಶಿಕ್ಷಕರಿಗೆ ಅನ್ವಯವಾಗುವ ಕುಮಾರನಾಯ್ಕ್ ವರದಿ ಅನ್ವಯ 2 ತುಟಿಭತ್ಯೆಗಳನ್ನು ನೀಡಿದರು.ಇದರ ಲಾಭವನ್ನು ರಾಜ್ಯದ 1.50 ಲಕ್ಷ ನೌಕರರು ಪಡೆದುಕೊಂಡರು.ಆದರೆ 2018ರಲ್ಲಿ ರಾಜ್ಯ ಸರಕಾರಿ ನೌಕರರಿಗೆ ಹೊಸ ಪಿಂಚಿಣಿ ಬದಲು ಹಳೆ ಪಿಂಚಿಣಿ ವ್ಯವಸ್ಥೆ ಜಾರಿಗೆ ತರುವ ಭರವಸೆ ನೀಡಿದ್ದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅಧಿಕಾರದಲ್ಲಿದ್ದರೂ ತಾವು ನೀಡಿದ್ದ ಭರವಸೆಯನ್ನು ಈಡೇರಿಸಲು ಮುಂದಾಗಿಲ್ಲ.ಇದನ್ನು ಆಗ್ನೇಯ ಪದವಿಧರರ ಕ್ಷೇತ್ರದ ಮತದಾರರು ಅರ್ಥ ಮಾಡಿಕೊಂಡು, ತಮ್ಮ ಪರವಾಗಿ ಕೆಲಸ ಮಾಡುವ ರಮೇಶ್‍ಬಾಬು ಅವರಿಗೆ ಮತ ನೀಡುವಂತೆ ಕೋರಿದರು.

     ಆಗ್ನೇಯ ಪದವಿಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮೇಶ್‍ಬಾಬು ಮಾತನಾಡಿ,ನನ್ನ ಕಳೆದ 30 ವರ್ಷಗಳ ರಾಜಕಾರಣದಲ್ಲಿ ಮತದಾರರ ಆಶೋತ್ತರಗಳಿಗೆ ಸ್ಪಂದಿಸಿ ಕೆಲಸ ಮಾಡಿದ್ದೇನೆ.ಕಳೆದ ಸಾಲಿನಲ್ಲಿ ಒಂದು ವರ್ಷದ ಅವಧಿಗೆ ಆಗ್ನೇಯ ಶಿಕ್ಷಕರ ಕ್ಷೇತ್ರದ ಶಾಸಕನಾಗಿ ಕೆಲಸ ಮಾಡುವ ಅವಕಾಶ ಲಭಿಸಿದ್ದು,ಅತ್ಯಂತ ಪ್ರಾಮಾಣಿಕವಾಗಿ ಮತದಾರರ ಕಷ್ಟ ಸುಖಃಗಳಿಗೆ ಸ್ಪಂದಿಸಿದ್ದೇನೆ.ಹಾಗಾಗಿ ಈ ಬಾರಿ ಚುನಾವಣೆಯಲ್ಲಿ ಆಗ್ನೇಯ ಪದವಿಧರರ ಕ್ಷೇತ್ರ ಮತದಾರರು ನನಗೆ ಮೊದಲ ಪ್ರಾಶಸ್ತ್ಯದ ಮತ ನೀಡಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

      ಇದುವರೆಗಿನ ಅಂಕಿ ಅಂಶಗಳ ಪ್ರಕಾರ ಕ್ಷೇತ್ರದಲ್ಲಿ ಸುಮಾರು 1.09ಲಕ್ಷ ಮತದಾರರಿದ್ದು,ತುಮಕೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಮತದಾರರಿದ್ದಾರೆ.ಎಲ್ಲಾ ಪಕ್ಷಗಳ ಮುಖಂಡರುಗಳ ಸಹ ವಯುಕ್ತಿಕವಾಗಿ ನನಗೆ ಬೆಂಬಲ ಸೂಚಿಸಿದ್ದಾರೆ.ಅಲ್ಲದೆ ಕ್ಷೇತ್ರದಲ್ಲಿ ಸ್ಪರ್ಧೆಯಲ್ಲಿರುವ ಬಹುತೇಕರು ನನ್ನ ಗೆಳೆಯರು ಮತ್ತು ಪರಿಚಿತರು.ಹಾಗಾಗಿ ಯಾರ ಬಗ್ಗೆಯೂ ವಿಮರ್ಶೆ ಮಾಡುವುದಿಲ್ಲ.ನಾನು ಮಾಡಿರುವ ಕೆಲಸಗಳು ಹಾಗೂ ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ಮುಂದಿಟ್ಟು ಮತ ಕೇಳುವುದಾಗಿ ರಮೇಶ್‍ಬಾಬು ನುಡಿದರು.

      ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ರಾಮಪ್ಪ,ಕೆಂಪರಾಜ, ಮಂಜುನಾಥ್, ಪ್ರಕಾಶ್, ವಕ್ತಾರರಾದ ಸುಜಾತ ಮತ್ತು ಪುಟ್ಟರಾಜು ಉಪಸ್ಥಿತರಿದ್ದರು.

(Visited 1 times, 1 visits today)

Related posts

Leave a Comment