ಯಾವುದೇ ದಬ್ಬಾಳಿಕೆಯಿಲ್ಲದೆ ಸ್ವಯಂ ಪ್ರೇರಿತವಾಗಿ ಕೆಲಸ ಮಾಡುವುದು ಗೃಹರಕ್ಷಕದಳ

ತುಮಕೂರು :  

     ಪೊಲೀಸ್ ಇಲಾಖೆಗೆ ಸಹಾಯಕವಾಗಿ ಕೆಲಸ ನಿರ್ವಹಿಸುವ ಗೃಹರಕ್ಷಕ ದಳದ ಕಾರ್ಯ ಶ್ಲಾಘನೀಯವಾದುದು ಎಂದು 7ನೇ ಅಧಿಕ ಸತ್ರ ಜಿಲ್ಲಾ ನ್ಯಾಯಾಧೀಶರಾದ ಎಸ್. ಸುಧೀಂದ್ರನಾಥ್ ತಿಳಿಸಿದರು.

      ಜಿಲ್ಲಾ ಗೃಹರಕ್ಷಕದಳದ ಕಚೇರಿ ಆವರಣದಲ್ಲಿ ಗುರುವಾರ ಅಖಿಲ ಭಾರತ ಗೃಹರಕ್ಷಕ ದಳದ ದಿನಾಚರಣೆ-2020 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಯಾವುದೇ ದಬ್ಬಾಳಿಕೆ ಇಲ್ಲದೆ ಸ್ವಯಂ ಪ್ರೇರಿತವಾಗಿ ಸಮಾಜ ಸೇವೆ ಮಾಡುವಂತಹ ಗೃಹರಕ್ಷಕದಳ ಸಾಮಾನ್ಯ ನಾಗರೀಕರಿಗೆ ವಿಶೇಷ ಅಭಿಮಾನ, ಗೌರವವಿದೆ ಎಂದರು.

      ವಿವಿಧ ಇಲಾಖೆಗಳಿಗೆ ಸಹಾ ಪಂಚಾಬ್, ರಾಜಸ್ತಾನ ರಾಜ್ಯಗಳ ಗಡಿ ಭಾಗದಲ್ಲಿ ಬಾರ್ಡರ್ ಸೆಕ್ಯುರಿಟಿಯಾಗಿ ಕೆಲಸ ನಿರ್ವಹಿಸುವಂತಹ ಯೋಧರಿಗೂ ಸಹ ಸಹಾಯಕರಾಗಿ ಗೃಹರಕ್ಷಕದಳದ ಸಿಬ್ಬಂದಿ ಕೆಲಸ ನಿರ್ವಹಿಸುತ್ತಾರೆ. ಹೋಂಗಾಡ್ರ್ಸ್ ದೇಶದ ಒಳಗಷ್ಟೇ ಅಲ್ಲ, ದೇಶದ ಗಡಿ ಭಾಗದ ರಕ್ಷಣೆಯನ್ನೂ ಹೊತ್ತಿದ್ದಾರೆ. ಇದು ಹೋಂಗಾಡ್ರ್ಸ್ ದಳದ ವಿಶೇಷ ಎಂದು ಹೇಳಿದರು.

      ಕರ್ತವ್ಯ ಸಮಗ್ರತೆ, ನಿಷ್ಠೆಗೆ ಹೋಂಗಾಡ್ರ್ಸ್ ಹೆಸರುವಾಸಿ, ಇಲ್ಲಿ ಸಮಾಜದ ಎಲ್ಲಾ ವರ್ಗದವರೂ ಇರುತ್ತಾರೆ. ವೈದ್ಯರು, ಇಂಜಿಯರುಗಳು, ವಕೀಲರು ಎಲ್ಲಾ ವರ್ಗದವರೂ ಇರುತ್ತಾರೆ, ಹೀಗೆ ಮೇಲ್ಮಟ್ಟದ ದೃಷ್ಟಿಕೋನ, ಶೈಲಿ ಗೃಹರಕ್ಷಕ ದಳಕ್ಕೆ ಇರುತ್ತದೆ ಇರುತ್ತದೆ ಎಂದರು.

      ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ಜೆ.ಉದೇಶ್ ಮಾತನಾಡಿ, ಇತ್ತೀಚೆಗೆ ನಡೆದ ಶಿರಾ ಉಪಚುನಾವಣೆ ಮತ್ತು ಕೋವಿಡ್-19 ಲಾಕ್ ಡೌನ್ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆ ವೇಳೆಯಲ್ಲಿ ಪೊಲೀಸರಿಗೆ ಹೆಗಲುಕೊಟ್ಟು ಕೆಲಸ ನಿರ್ವಹಿಸಿದ ಗೃಹರಕ್ಷಕ ದಳ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

      ಪೊಲೀಸ್, ಅಗ್ನಿಶಾಮಕದಳ ಮತ್ತು ಗೃಹರಕ್ಷಕದಳ ಸಿಬ್ಬಂದಿ ಈ ಮೂವರು ಖಾಕಿ ತೊಟ್ಟು ತೋಳು ಮಡಚಿರುವ ಉದ್ಧೇಶ ಶಿಸ್ತಿನ ಸಂಕೇತವಾಗಿದೆ. ಹೀಗಾಗಿ ಯಾವುದೇ ಸಮಯದಲ್ಲೂ ನಾಡು ಮತ್ತು ರಾಷ್ಟ್ರ ರಕ್ಷಣೆಗೆ ಸದಾ ಸಿದ್ಧರಿರುತ್ತೇವೆ ಎಂಬ ಸಂದೇಶವನ್ನು ಸಾರುತ್ತದೆ ಎಂದರು. ವೃತ್ತಿ ಧರ್ಮ ಮತ್ತು ವೃತ್ತಿ ನಿಷ್ಠೆ ಎರಡೂ ಬೇರೆ ಬೇರೆಯಾದರೂ ಒಂದೇ ನಾಣ್ಯದ ಎರಡು ಮುಖವಿದ್ದಂತೆ, ಗೃಹರಕ್ಷಕರು ಸ್ವಯಂ ಸೇವಕರಾಗಿರುವುದರಿಂದ ಎಲ್ಲಾ ಇಲಾಖೆಗಳಲ್ಲೂ ಕರ್ತವ್ಯ ನಿಷ್ಠೆಯಿಂದ ಕೆಲಸ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಗೃಹರಕ್ಷಕರಿಗೆ ವೈಯಕ್ತಿಕ ಬದುಕು, ವೃತ್ತಿ ಜೀವನದ ಬದುಕು ಎರಡೂ ಒಂದೇ ಆಗಿರಬೇಕು, ಆದ್ದರಿಂದ ಖಾಕಿಗೆ ಕೆಟ್ಟ ಹೆಸರು ತರುವಂತಹ ಕೆಲಸ ಮಾಡದೆ ಉತ್ತಮ ಕೆಲಸ ನಿರ್ವಹಣೆ ಮಾಡಬೇಕೆಂದು ಕರೆ ನೀಡಿದರು. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಹಾಲಿಂಗಪ್ಪ ಎಸ್.ಲಂಗೋಟಿ ಮಾತನಾಡಿ, ಗೃಹರಕ್ಷಕದಳ, ಅಗ್ನಿಶಾಮಕ ಮತ್ತು ಸಿವಿಲ್ ಡಿಫೆನ್ಸ್ ಈ ಮೂರು ಇಲಾಖೆಗಳು ಕೂಡಿ ಕರ್ತವ್ಯ ನಿರ್ವಹಿಸಿದರೆ ಉತ್ತಮ ಫಲಿತಾಂಶ ಕಾಣಬಹುದು ಎಂದರು.

     ಪೊಲೀಸ್, ಆರ್‍ಟಿಒ, ಸಂಚಾರಿ ಠಾಣೆ, ಕಾರಾಗೃಹ ಮುಂತಾದ ಇಲಾಖೆಗಳಿಗೆ ಸಹಾಯಕರಾಗಿ ಕೆಲಸ ನಿರ್ವಹಿಸುವ ಗೃಹರಕ್ಷಕ ದಳ ಸಿಬ್ಬಂದಿ ಶಿಸ್ತನ್ನು ರೂಢಿಸಿಕೊಳ್ಳಬೇಕೆಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗೃಹರಕ್ಷಕದಳದ ಜಿಲ್ಲಾ ಕಮಾಂಡೆಂಟ್ ಆರ್.ಪಾತಣ್ಣ ಮಾತನಾಡಿ, ಪೊಲೀಸರ ಇಲಾಖೆಯೊಂದಿಗೆ ಗೃಹ ರಕ್ಷಕರೂ ಉತ್ತಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಗೃಹ ರಕ್ಷಕರು ಸಹ ಸಮಾಜದಲ್ಲಿ ಶಿಸ್ತನ್ನು ಕಾಪಾಡಲು ಶ್ರಮಿಸುತ್ತಿದ್ದಾರೆ ಎಂದರು.

      ಸಮಾಜದಲ್ಲಿ ಜಾತಿ, ಧರ್ಮ ಮತ್ತು ವೃತ್ತಿಯನ್ನು ಲೆಕ್ಕಿಸದೆ, ಯಾವುದೇ ತಾರತಮ್ಯವಿಲ್ಲದೆ, ಎಲ್ಲಾ ಜನರಿಗೆ ಗೃಹರಕ್ಷಕರು ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೊರೊನಾ ವೈರಸ್ ಬಿಕ್ಕಟ್ಟಿನ ಸಮಯದಲ್ಲಿ ಸಮಾಜಕ್ಕಾಗಿ ಮಾಡಿರುವ ಸೇವಾ ಮನೋಭಾವನೆ ನಿಜವಾಗಿಯೂ ಸ್ಪೂರ್ತಿದಾಯಕವಾಗಿದೆ. ಆರೋಗ್ಯಕರ ದೇಶವನ್ನು ರಚಿಸಲು ನಾವೆಲ್ಲರೂ ಕೈಜೋಡಿಸೋಣ ಎಂದು ಹೇಳಿದರು.

      ಪ್ರಭಾರ ಘಟಕಾಧಿಕಾರಿ ಪ್ರಕಾಶ್ ಮೂರ್ತಿ ಗೃಹರಕ್ಷಕ ದಳದ ವಾರ್ಷಿಕ ಕಾರ್ಯನಿರ್ವಹಣ ವರದಿ ಮಂಡಿಸಿದರು. ಸಹಾಯಕ ಬೋಧಕ ವೈ.ಎನ್.ಸುರೇಶ್ ಪ್ರತಿಜ್ಞಾ ವಿಧಿ ಬೋಧಿಸಿದರು. ಇದೇ ಸಂದರ್ಭದಲ್ಲಿ ತುಮಕೂರು ಪೊಲೀಸ್ ಉಪವಿಭಾಗದ ಡಿವೈಎಸ್ಪಿ ತಿಪ್ಪೇಸ್ವಾಮಿ, ನಿವೃತ್ತ ಅಧೀಕ್ಷಕಿ ಎಂ.ಚಂದ್ರಕಲಾ, ಡಿಎಆರ್ ಸಹಾಯಕ ಸಬ್‍ಇನ್ಸ್‍ಪೆಕ್ಟರ್ ಸೈಯದ್ ಜಂಷೀರ್, ನಿವೃತ್ತ ಗೃಹರಕ್ಷಕರಾದ ರಂಗಸ್ವಾಮಿಗೌಡ, ಹೆಚ್.ಮುದ್ದಯ್ಯ, ಚಂದ್ರಪ್ಪ ಅವರನ್ನು ಸನ್ಮಾನಿಸಲಾಯಿತು.

(Visited 4 times, 1 visits today)

Related posts

Leave a Comment