ಗೊರವನಹಳ್ಳಿಯಲ್ಲಿ ದಾಸೋಹ ಪುನರಾರಂಭ ; ಭಕ್ತರ ಸಂತಸ!!

 ಕೊರಟಗೆರೆ:

      ತಾಲ್ಲೂಕಿನ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾದ ಗೊರವನಹಳ್ಳಿ ಮಹಾಲಕ್ಷ್ಮಿ ದೇವಾಲಯದಲ್ಲಿನ ದಾಸೋಹ ಕಾರ್ಯಕ್ರಮವನ್ನು ಪುನರಾರಂಭಿಸಲಾಗಿದೆ.
ಕೊವಿಡ್ ಹಿನ್ನೆಯಲ್ಲಿ ಕಳೆದ ವರ್ಷ ಮಾರ್ಚ್ 13, 2020 ರಿಂದ ಇಲ್ಲಿನ ಪ್ರಸಾದ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿತ್ತು. ಈಚೆಗೆ ಕೊವಿಡ್ ಪ್ರಕರಣ ಕಡಿಮೆಯಾದ ಕಾರಣದಿಂದಾಗಿ ದೇವಸ್ಥಾನಕ್ಕೆ ಬರುವ ಭಕ್ತಾಧಿಗಳ ಅನುಕೂಲಕ್ಕಾಗಿ ನಿತ್ಯ ದಾಸೋಹವನ್ನು ಪುನರಾರಂಭಿಸಲಾಗಿದೆ.

      ದೇವಾಸ್ಥಾನದ ಟ್ರಸ್ಟ್ ಪದಾಧಿಕಾರಿಗಳ ನಡುವೆ ಭಿನ್ನಾಭಿಪ್ರಾಯದ ಹಿನ್ನೆಯಲ್ಲಿ ಕಳೆದ ಆರೂವರೆ ವರ್ಷಗಳ ಹಿಂದೆ ದೇವಸ್ಥಾನದ ಆಡಳಿತವನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮಧುಗಿರಿ ಉಪವಿಭಾಗಾಧಿಕಾರಿಯನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಸಂಪೂರ್ಣ ಆಡಳಿತ ಸರ್ಕಾರ ವಹಿಸಿಕೊಂಡಿತ್ತು. ಈ ಘಟನೆ ಇಡೀ ರಾಜ್ಯದ ಗಮನ ಸೆಳೆದಿತ್ತು. ಈ ಹಿನ್ನೆಯಲ್ಲಿ ಟ್ರಸ್ಟ್ ಧರ್ಮದರ್ಶಿಗಳು ಹೈಕೋರ್ಡ್ ಮೊರೆ ಹೋಗಿದ್ದರು. ಆರೂವರೆ ವರ್ಷಗಳ ನಂತರ ಮತ್ತೆ ದೇವಸ್ಥಾನದ ಆಡಳಿತವನ್ನು ಹೈಕೋರ್ಟ್ ಆದೇಶದ ಮೇರೆಗೆ ಟ್ರಸ್ಟ್ ಆಡಳಿತಕ್ಕೆ ಬಿಟ್ಟುಕೊಡಲಾಗಿದೆ.

     ಈ ಹಿಂದೆ ಟ್ರಸ್ ಆಡಳಿತದಲ್ಲಿದ್ದ ವೇಳೆ ಸ್ಥಳೀಯವಾಗಿ ಅನೇಕ ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿತ್ತು. ಆದರೆ ಆಡಳಿತ ಸರ್ಕಾರ ವಹಿಸಿಕೊಂಡ ನಂತರ ಈ ಎಲ್ಲಾ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿ ದಾಸೋಹವನ್ನು ಮಾತ್ರ ನಡೆಸುತ್ತಿತ್ತು. ಸರ್ಕಾರ ವಹಿಸಿಕೊಂಡ ನಂತರ ದಾಸೋಹ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಆಹಾರ ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬ ಬಗ್ಗೆ ಈಚೆಗೆ ಭಕ್ತಾಧಿಗಳಲ್ಲಿ ಅಪಸ್ವರ ಕೂಡ ಎದ್ದಿತ್ತು. ಹಾಗೂ ಸ್ಥಳೀಯ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೈಗೊಂಡಿದ್ದ ಪ್ರತಿಭಾ ಪುರಸ್ಕಾರ, ಉನ್ನತ ಶಿಕ್ಷಣ ಮಾಡುವ ವಿದ್ಯಾರ್ಥಿಗಳಿಗೆ ಧನಸಹಾಯ, ತಾಲ್ಲೂಕಿನ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಉಚಿತ ನೋಟ್ ಪುಸ್ತಕ ಕಾರ್ಯಕ್ರಮವನ್ನು ನಿಲ್ಲಿಸಲಾಗಿತ್ತು. ಇದರೊಂದಿಗೆ ತಾಲ್ಲೂಕು, ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಮೂಲೆಗಳಿಂದ ಬರುವ ಬಡವರಿಗೆ ಉಚಿತ ಸಾಮೂಹಿಕ ವಿವಾಹವನ್ನು ನಡೆಸುವುದರ ಜೊತೆಗೆ ವಧು-ವರರಿಗೆ ಬಟ್ಟೆ, ತಾಳಿಯನ್ನು ಉಚಿತವಾಗಿ ನೀಡುವುದರೊಂದಿಗೆ ಮದುವೆಗೆ ಬರುವ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತಿತ್ತು. ಇದರಿಂದ ಬಹಳಷ್ಟು ಬಡವರಿಗೆ ಅನುಕೂಲವಾಗುತ್ತಿತ್ತು. ಇದಲ್ಲದೇ ತಾಲ್ಲೂಕಿನ ಸಿದ್ದರಬೆಟ್ಟ ಸೇರಿದಂತೆ ತಾಲ್ಲೂಕಿನ ಯಾವುದೇ ಧಾರ್ಮಿಕ ಕ್ಷೇತ್ರದಲ್ಲಿ ನಡೆಯುವ ಸಮಾರಂಭಗಳಿಗೆ ಊಟ ಹಾಗೂ ಧನ ಸಾಹಾಯವನ್ನು ಟ್ರಸ್ಟ್ ಮಾಡುತ್ತಿತ್ತು.
ಇದಲ್ಲದೇ ಟ್ರಸ್ಟ್ ಪ್ರಾರಂಭಿಸಿರುವ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ಆ ಭಾಗದ ವಿದ್ಯಾರ್ಥಿಗಳಿಗೆ ದಾಸೋಹ, ಉಚಿತ ವಿದ್ಯಾಭ್ಯಾಸ, ವಾಹನ ಸೌಲಭ್ಯ ಸೇರಿ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಿಕೊಡಲಾಗಿತ್ತು.

      ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡಿ ಡಿಪ್ಲೊಮಾ ಕಾಲೇಜು ಕೂಡ ಪ್ರಾರಂಭಿಸಿ ಕಡಿಮೆ ವೆಚ್ಚದಲ್ಲಿ ಶಿಕ್ಷಣ ನೀಡಲಾಗುತ್ತಿತ್ತು. ಆದರೆ ಸರ್ಕಾರ ವಹಿಸಿಕೊಂಡ ನಂತರ ಸರಿಯಾಗಿ ನಿರ್ವಹಣೆ ಮಾಡದೇ ಡಿಪ್ಲೊಮಾ ಕಾಲೇಜು ಈಗ ಮುಚ್ಚಲಾಗಿದೆ. ಇದರೊಂದಿಗೆ ಪ್ರತೀ ವರ್ಷ ವರಮಹಾಲಕ್ಷ್ಮಿ ಹಬ್ಬದ ದಿನ ವಿಶೇಷ ಪೂಜೆ, ಹೋಮ, ಹವನಗಳನ್ನು ನಡೆಸಲಾಗುತ್ತಿತ್ತು. ಹಾಗೂ ಇದರ ಅಂಗವಾಗಿ ಬ್ರಹ್ಮ ರಥೋತ್ಸವ, ಮುತ್ತಿನ ಪಲ್ಲಕಿ ಉತ್ಸವ ಸೇರಿದಂತೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಈ ಭಾಗದಲ್ಲಿ ಸಾಂಸ್ಕøತಿಕವಾಗಿಯೂ ಹೆಚ್ಚು ಜನಮನ್ನಣೆ ಗಳಿಸಲಾಗಿತ್ತು. ಈ ಹಬ್ಬಕ್ಕೆ ರಾಜ್ಯದ ನಾನಾ ಮೂಲೆ ಸೇರಿದಂತೆ ಪಕ್ಕದ ರಾಜ್ಯದಿಂದಲೂ ಸಾವಿರಾರು ಭಕ್ತರು ಬಂದು ಪಾಲ್ಗೊಳ್ಳುತ್ತಿದ್ದರು.

      ಧಾರ್ಮಿಕ ಕ್ಷೇತ್ರವಾದರೂ ಧರ್ಮಸ್ಥಳ ಮಾದರಿಯಲ್ಲಿ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕøತಿಕ ಕ್ಷೇತಗಳಿಗೆ ಹೆಚ್ಚಿನ ಆದ್ಯತೆ ನೀಡಿ ಆ ಮೂಲಕ ದೇವಾಲಯದ ಟ್ರಸ್ಟ್ ಕೆಲಸ ನಿರ್ವಹಿಸುತ್ತಿತ್ತು. ಆದರೆ ಸರ್ಕಾರ ಆಡಳಿತಾಧಿಕಾರಿಯನ್ನು ನೇಮಿಸಿದ ನಂತರ ಈ ಎಲ್ಲಾ ಕಾರ್ಯಕ್ರಮಗಳು ಒಂದೊಂದಾಗಿ ಸ್ಥಗಿತಗೊಂಡಿದ್ದವು. ಇದರಿಂದಾಗಿ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆಯಲ್ಲೂ ಇಳಿಮುಖ ಕಂಡಿತ್ತು.

      ಈಗ ಮತ್ತೆ ದೇವಸ್ಥಾನದ ಆಡಳಿತವನ್ನು ಟ್ರಸ್ಟ್ ವಹಿಸಿಕೊಂಡಿದೆ. ಈ ಹಿಂದೆ ಟ್ರಸ್ಟ್ ವತಿಯಿಂದ ನಡೆಯುತ್ತಿದ್ದ ಎಲ್ಲಾ ಕಾರ್ಯಕ್ರಮಗಳು ಪುನರಾರಂಭವಾಗುತ್ತವೆ ಎಂಬ ಭರವಸೆಯಲ್ಲಿ ಈ ಭಾಗದ ಜನ ಹಾಗೂ ಭಕ್ತಾಧಿಗಳು ಕಾಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಟ್ರಸ್ಟ್ ಯಾವ ರೀತಿಯ ಕ್ರಮ ವಹಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

      ಆರೂವರೆ ವರ್ಷದ ನಂತರ ದೇವಾಲಯದ ಆಡಳಿತ ಟ್ರಸ್ಟ್ ಗೆ ದೊರಕಿದೆ. ಈ ಹಿಂದೆ ನಡೆಯುತ್ತಿದ್ದ ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಲು ಟ್ರಸ್ಟ್ ಬದ್ಧವಾಗಿದೆ. ಅದಕ್ಕೂ ಮೊದಲು ಟ್ರಸ್ಟ್ ನ ಧರ್ಮದರ್ಶಿಗಳ ಸಭೆ ಸೇರಿ ಚರ್ಚೆ ಮಾಡಿ ಯಾವ ರೀತಿ ಪುನರಾರಂಭಿಸಬೇಕೆಂಬುದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಆ ಮೂಲಕ ಹೈಕೋರ್ಟ್ ನಿಬಂಧನೆಗಳಿಗೆ ಒಳಪಟ್ಟು ಕೊವಿಡ್ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಹಿಂದಿನಂತೆ ಎಲ್ಲ ಕಾರ್ಯಕ್ರಮಗಳನ್ನು ಯಥಾವತ್ತಾಗಿ ನಡೆಸಲಾಗುವುದು.

–ಚಿಕ್ಕನರಸಪ್ಪ, ಕಾರ್ಯದರ್ಶಿ, ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್.

 

(Visited 5 times, 1 visits today)

Related posts

Leave a Comment