ರಾಗಿ ಖರೀದಿ ಕೇಂದ್ರ : ರೈತರಿಗಾಗಿ ಕಾಯುತ್ತಿರುವ ಖರೀದಿ ಸಿಬ್ಬಂದಿ

ಹುಳಿಯಾರು:

      ಕಳೆದ 10 ದಿನಗಳ ಹಿಂದಷ್ಟೆ ರಾಗಿ ಖರೀದಿಗಾಗಿ ನೂಕುನುಗ್ಗಲು ಏರ್ಪಟ್ಟು ಗೊಂದಲ ನಿರ್ಮಾಣವಾಗಿದ್ದ ಹುಳಿಯಾರು ರಾಗಿ ಖರೀದಿ ಕೇಂದ್ರದಲ್ಲಿ ಈಗ ರೈತರಿಗಾಗಿಯೇ ಖರೀದಿ ಸಿಬ್ಬಂದಿ ಕಾಯುತ್ತಿರುವ ಸನ್ನಿವೇಶ ನಿರ್ಮಾಣವಾಗಿದೆ.

      ಹೌದು ಹುಳಿಯಾರು ಎಪಿಎಂಸಿ ಆವರಣದಲ್ಲಿ 3290 ರೂ. ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಗಾಗಿ ಸರ್ಕಾರ ನಫೆಡ್ ಕೇಂದ್ರ ತೆರೆದಿತ್ತು. ಪ್ರಾರಂಭಿಕ ಅಂತವಾದ ನೊಂದಣಿ ಪ್ರಕ್ರಿಯೆಗೆ ರೈತರು ಮುಗಿಬಿದ್ದು ಹದಿನೈದಿಪ್ಪತ್ತು ದಿನಗಳಲ್ಲೇ 4500 ರೈತರು ನೊಂದಣಿ ಮಾಡಿಸಿದರು. ಖರೀದಿ ಪ್ರಕ್ರಿಯೆ ಆರಂಭವಾದ ದಿನದಲ್ಲಿ ರಾಗಿ ಮಾರಲು ರೈತರು ನಾಮುಂದು, ತಾಮುಂದು ಎಂದು ಸಾಗರದಂತೆ ಹರಿದು ಬಂದರು.

      ಲಾರಿ, ಟ್ರ್ಯಾಕ್ಟರ್, ಟಾಟಾ ಏಸ್, ಎತ್ತಿನಗಾಡಿಗಳಲ್ಲಿ ರಾಗಿ ಚೀಲಗಳನ್ನು ತುಂಬಿಕೊಂಡು ಎಪಿಎಂಸಿ ಮಂದಿ ಜಮಾಯಿಸಿದರು. ಖರೀದಿ ಅಧಿಕಾರಿಗಳು ಬೆಳಗ್ಗೆ 8 ರಿಂದ ಸಂಜೆ 7 ಸಮೀಪಿಸುವ ತನಕ ಖರೀದಿ ಮಾಡುತ್ತಿದ್ದರೂ ಸಹ ರೈತರ ಸರತಿ ಸಾಲು ಕರಗಲಿಲ್ಲ. ರಾತ್ರಿ, ಹಗಲು, ಬಿಸಿಲು, ಮಳೆಯೆನ್ನದೆ ಸರತಿಯಲ್ಲಿ ಕಾದಿದ್ದು ರಾಗಿ ಮಾರುತ್ತಿದ್ದರು. ಈ ಸಂದರ್ಭದಲ್ಲಿ ಟೊಕನ್ ಕೊಡುವ ವಿಚಾರದಲ್ಲಿ ರೈತರಲ್ಲೇ ಭಿನ್ನ ಮಾತುಗಳನ್ನು ಕೇಳುಬಂದವು.

      ರೈತರ ಈ ಪರದಾಟ ನೋಡಲಾಗದೆ ಜಿಲ್ಲಾಧಿಕಾರಿಗಳೇ ಖುದ್ದು ರಾಗಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ಮತ್ತೊಂದು ಕೌಂಟರ್ ತೆರೆದರು, ಭಾನುವಾರವೂ ಖರೀದಿಗೆ ಸೂಚಿಸಿದರು. ಅಲ್ಲದೆ ನೊಂದಾಯಿಸಿ ಎಲ್ಲಾ ರೈತರ ರಾಗಿಯನ್ನೂ ಖರೀದಿಸುತ್ತೇವೆ ತಾಳ್ಮೆಯಿಂದಿರಿ, ಒಮ್ಮೆಲೆ ಎಲ್ಲರೂ ಬಂದು ಖರೀದಿ ಸಿಬ್ಬಂದಿಯ ಉಸಿರು ಕಟ್ಟಿಸದೆ ನಿಧಾನವಾಗಿ ಬನ್ನಿ ಎಂದು ಮನವಿ ಮಾಡಿದ್ದರು.

      ಆದರೆ ಈಗ ಬೆಳಗ್ಗೆಯಿಂದ ಸಂಜೆಯವರೆವಿಗೆ ಖರೀದಿ ಸಿಬ್ಬಂದಿ ಕಾಯುತ್ತಿದ್ದರೂ ಸಹ ರೈತರು ರಾಗಿ ತರುತ್ತಿಲ್ಲ. ದಿನಕ್ಕೆ ಒಂದಿಬ್ಬರು ರೈತರು ಮಾತ್ರ ಬರುತ್ತಿದ್ದು ನೊಂದಾಯಿಸಿದ ಉಳಿದ ರೈತರಿಗಾಗಿ ಕಾಯುವ ಸ್ಥಿತಿ ಅಧಿಕಾರಿಗಳದ್ದಾಗಿದೆ. 4500 ರೈತರು ನೊಂದಣಿ ಮಾಡಿಸಿದ್ದು ಈಗಾಗಲೇ 4100 ರೈತರು ರಾಗಿ ಮಾರಿದ್ದಾರೆ. ಉಳಿದ 400 ರೈತರು ಮಾತ್ರ ಬರಬೇಕಿದ್ದು ಮಾ.30 ಕೊನೆಯ ದಿನವಾಗಿದ್ದು ತಕ್ಷಣ ಬಂದು ರಾಗಿ ಮಾರುವಂತೆ ಖರೀದಿ ಅಧಿಕಾರಿ ಶಿವಶಂಕರ್ ತಿಳಿಸುತ್ತಾರೆ.

(Visited 4 times, 1 visits today)

Related posts

Leave a Comment