ಶ್ರೀಮಹಾಲಕ್ಷ್ಮೀ ದೇವಿಯ ವೈಭವದ ಬ್ರಹ್ಮರಥೋತ್ಸವ

ಕೊರಟಗೆರೆ :  

     ರಾಜ್ಯದ ಸುಪ್ರಸಿದ್ಧ ಐತಿಹಾಸಿಕ ದೇವಸ್ಥಾನ ಕಲ್ಪತರು ನಾಡಿನ ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ದೇವಿಯ ಪುಣ್ಯಕ್ಷೇತ್ರದಲ್ಲಿ ಕಾರ್ತಿಕಮಾಸದ ಕಡೆಯ ಶುಕ್ರವಾರ ಶ್ರೀಮಹಾಲಕ್ಷ್ಮೀ ದೇವಿಯ ವೈಭವದ ಬ್ರಹ್ಮರಥೋ ತ್ಸವ, ಲಕ್ಷದೀಪೋತ್ಸವ ಮತ್ತು ಮುತ್ತಿನಪಲ್ಲಕ್ಕಿ ಉತ್ಸವವು ಬಹಳ ವಿಜೃಂಭಣೆಯಿಂದ ನೆರವೇರಿತು.

      ಪ್ರತಿವರ್ಷದಂತೆ ಕಲ್ಪತರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿ ತೀತಾ ಗ್ರಾಪಂ ವ್ಯಾಪ್ತಿಯಲ್ಲಿ ಸುಪ್ರಸಿದ್ದಿ ಪಡೆದಿರುವ ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ಕ್ಷೇತ್ರಕ್ಕೆ ಲಕ್ಷದೀಪೋತ್ಸವದ ಕಾರ್ಯಕ್ರಮದಲ್ಲಿ ಅಜ್ಞಾನವೆಂಬ ಕತ್ತಲನ್ನು ತೊಡೆದೋಡಿಸಿ ಸುಜ್ಞಾನವೆಂಬ ಬೆಳಕು ಚೆಲ್ಲುವ, ಬದುಕನ್ನೆ ಜ್ಯೋತಿಯಂತೆ ಪ್ರಕಾಶಮಾನಗೊಳಿಸುವ ಈ ದೀಪೋತ್ಸವದ ವೈಭವ ಕಣ್ತುಂಬಿಕೊಳ್ಳಲು ಸಹಸ್ರಾರು ಭಕ್ತರು ಆಗಮಿಸಿದ್ದರು.

      ಮಹಾಲಕ್ಷ್ಮೀ ದೇವಿಯ ವೈಭವದ ಲಕ್ಷದೀಪೋತ್ಸವದ ಪ್ರಯುಕ್ತ ದೇವಾಲಯಕ್ಕೆ ವಿಶೇಷ ಹೂವಿನ ಅಲಂಕಾರ, ವಿದ್ಯುತ್ ಅಲಂಕಾರ, ದೇವಿಗೆ ಬೆಳಿಗ್ಗೆ 7.00ಗಂಟೆಗೆ ಪಂಚಾಮೃತ ಅಭಿಷೇಕ, ಹೋಮಹವನ, ವಿಶೇಷ ಪೂಜೆ, ಮದ್ಯಾಹ್ನ 12.00ಕ್ಕೆ ಬ್ರಹ್ಮರಥೋತ್ಸವ, ಸಂಜೆ 5.15ಕ್ಕೆ ಲಕ್ಷದೀಪೋತ್ಸವ, ರಾತ್ರಿ 7.00ಗಂಟೆಗೆ ಗೊರವನಹಳ್ಳಿ, ನರಸಯ್ಯನಪಾಳ್ಯ ಮತ್ತು ಗೊಲ್ಲರಹಟ್ಟಿ ಗ್ರಾಮಸ್ಥರು ಆರತಿ ಸೇವೆ ಹಾಗೂ ರಾತ್ರಿ 8.00ಗಂಟೆಗೆ ಮುತ್ತಿನಪಲ್ಲಕ್ಕಿ ಉತ್ಸವ ನಡೆದು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ದರ್ಶನ ಪಡೆದು ಶ್ರೀ ಮಹಾಲಕ್ಷ್ಮೀ ತಾಯಿಯ ಕೃಪೆಗೆ ಪಾತ್ರರಾದರು.

       ರಾಜ್ಯಾದ್ಯಂತ ಕೋವಿಡ್19 ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮಧುಗಿರಿ ಉಪವಿಭಾಗಾದಿಕಾರಿಗಳು ಲಕ್ಷದೀಪೋತ್ಸವ ಸರಳವಾಗಿ ಆಚರಣೆ ಮಾಡಲು ಸೂಚಿಸಿದರೂ ಕೂಡ ಕೊರೋನಾ ಭೀತಿಯ ನಡುವೆಯು ದೂರದ ಊರುಗಳಿಂದ ಬಂದ ಭಕ್ತಜನ ಲಕ್ಷ್ಮೀ ದೇವಿಯ ದರ್ಶನ ಮಾಡಿ ದೇವರಲ್ಲಿ ತಮ್ಮ ಇಷ್ಟಾರ್ಥಗಳು ಈಡೇರುವಂತೆ ಬೇಡಿಕೊಂಡು ಪುನೀತರಾದರು.

      ಕಾರ್ಯಕ್ರಮದಲ್ಲಿ ಕೋಳಾಲ ಉಪತಹಶೀಲ್ದಾರ್ ಮಧುಸೂದನ್, ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೆಶಕ ಹೆಚ್.ಯು.ತಲಾವಾರ್, ಗುತ್ತಿಗೆದಾರ ಟಿ.ಎನ್.ಅಶೋಕ, ಆನೇಕಲ್ ರುದ್ರಪ್ಪ, ಮಾಜಿ ಜಿಪಂ ಅಧ್ಯಕ್ಷ ಕೃಷ್ಣಮೂರ್ತಿ, ಶ್ರೀಲಕ್ಷ್ಮೀಪ್ರಸಾದ್, ಸಿಬ್ಬಂದಿಗಳಾದ ರಮೇಶ್, ಕೇಶವಮೂರ್ತಿ, ಸೋಮಶೇಖರ್, ರಂಗಶಾಮಯ್ಯ ಸೇರಿದಂತೆ ಇತರರು ಇದ್ದರು.

 

(Visited 4 times, 1 visits today)

Related posts

Leave a Comment