ಕೊರೊನಾ ಲಕ್ಷಣಗಳಿದ್ದರೆ ಪರೀಕ್ಷಿಸಿಕೊಳ್ಳಿ-ಜಿಲ್ಲಾಧಿಕಾರಿ

ತುಮಕೂರು:

      ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದ್ದು, ಕೊರೊನಾ ಲಕ್ಷಣಗಳಾದ ಜ್ವರ, ಕೆಮ್ಮು, ನೆಗಡಿ, ಉಸಿರಾಟದ ತೊಂದರೆಯಿದ್ದರೆ ನಿರ್ಲಕ್ಷ್ಯಿಸದೇ ಪರೀಕ್ಷೆಗೊಳಪಡುವಂತೆ ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.

      ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರಸ್ತುತ 57 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಈ ಪೈಕಿ ಚಿಕ್ಕನಾಯಕನಹಳ್ಳಿ-2, ಗುಬ್ಬಿ-3, ಕೊರಟಗೆರೆ-1, ಕುಣಿಗಲ್-1, ಮಧುಗಿರಿ-4, ಪಾವಗಡ-5, ಶಿರಾ-15, ತಿಪಟೂರು-3, ತುಮಕೂರು-19, ತುರುವೇಕೆರೆ-4 ಇದರಲ್ಲಿ ಹೊರ ರಾಜ್ಯ/ಜಿಲ್ಲೆಗಳಿಂದ ಬಂದವರಿಂದಲೇ ಪ್ರಕರಣಗಳು ಹೆಚ್ಚಾಗಿವೆ ಎಂದರಲ್ಲದೇ ಈವರೆಗೂ 15440 ಪ್ರಕರಣಗಳನ್ನು ಪರೀಕ್ಷೆಗೊಳಪಡಿಸಿದ್ದು, 14232 ಪ್ರಕರಣಗಳು ನೆಗೆಟಿವ್ ಬಂದಿವೆ. ಈ ಪೈಕಿ 963 ಜನರ ಗಂಟಲು ದ್ರವ ಮಾದರಿ ಪರೀಕ್ಷೆಯ ವರದಿಯನ್ನು ನಿರೀಕ್ಷಿಸಲಾಗಿದೆ ಎಂದು ಅವರು ತಿಳಿಸಿದರು.

       ಜಿಲ್ಲಾಸ್ಪತ್ರೆಯಲ್ಲಿ ಈಗಾಗಲೇ ಕೋವಿಡ್-19 ಲ್ಯಾಬ್ ಅನ್ನು ಆರಂಭಿಸಲಾಗಿದ್ದು, ಇದರಲ್ಲಿಯೇ ಪರೀಕ್ಷೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದ್ದು, ಸರ್ಕಾರದನ್ವಯ ಪ್ರತಿ ತಾಲೂಕು ಪ್ರಾಥಮಿಕ ಆಸ್ಪತ್ರೆಗಳಲ್ಲಿ ಕೋವಿಡ್-19 ಕೇರ್ ಸೆಂಟರ್ ಅನ್ನು ತೆರೆದು ಸೋಂಕಿತರಿಗೆ ಚಿಕಿತ್ಸೆ ನೀಡಲಾಗುವುದು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೂಡ ಕೊರೊನಾಗೆ ಚಿಕಿತ್ಸೆ ನೀಡಲು ಅವಕಾಶ ನೀಡಲಾಗಿದೆ ಎಂದು ಅವರು ತಿಳಿಸಿದರು.

      ಆಶಾ ಕಾರ್ಯಕರ್ತೆಯರು ಮನೆಮನೆಗೆ ಈಗಾಗಲೇ ಮುರ್ನಾಲ್ಕು ಬಾರಿ ತೆರಳಿ ಆರೋಗ್ಯ ಪರೀಕ್ಷೆ ನಡೆಸಿದ್ದಾರೆ.
ಕ್ವಾರಂಟೈನ್ ಕೇಂದ್ರಗಳು ಹಾಗೂ ಕೋವಿಡ್ ಆಸ್ಪತ್ರೆಯಲ್ಲಿ ಉತ್ತಮ ಗುಣಮಟ್ಟದ ಆಹಾರ ಒದಗಿಸುವಂತೆ ಸಂಬಂಧಿಸಿದವರಿಗೆ ಸೂಚನೆ ನೀಡಿದ್ದೇನೆ. ಅಲ್ಲದೆ ಈ ಬಗ್ಗೆ ನಿಗಾವಹಿಸುವಂತೆ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್‍ಗಳಿಗೂ ನಿರ್ದೇಶನ ನೀಡಿದ್ದೇನೆ ಎಂದರು.

      ಈ ಸಂದರ್ಭದಲ್ಲಿ ಜಿಲ್ಲಾಪಂಚಾಯತಿ ಸಿಇಓ ಶುಭಾಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಕೊನ ವಂಶಿಕೃಷ್ಣ, ಡಿಹೆಚ್‍ಓ ಡಾ: ನಾಗೇಂದ್ರಪ್ಪ, ಡಿಎಸ್ ಡಾ: ವೀರಭದ್ರಯ್ಯ, ಮತ್ತಿತರರು ಹಾಜರಿದ್ದರು.

(Visited 5 times, 1 visits today)

Related posts