ದೇವರಾಯನದುರ್ಗ ಜಾತ್ರೆ : ರಸ್ತೆ ಮತ್ತು ವಿದ್ಯುತ್ ಕಾಮಗಾರಿ ಪೂರ್ಣಗೊಳಿಸಲು ಗಡುವು!

ತುಮಕೂರು:

     ತುಮಕೂರು ತಾಲ್ಲೂಕಿನ ದೇವರಾಯನದುರ್ಗ ಗ್ರಾಮದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯ ರಥೋತ್ಸವ ಮಾರ್ಚ್ 9ರಂದು ಸುಮಾರು ಒಂದೂವರೆ ಲಕ್ಷ ಜನರ ಸಮ್ಮುಖದಲ್ಲಿ ನಡೆಯಲಿದ್ದು, ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ಸುರಕ್ಷಿತ ರಸ್ತೆ ಸಂಪರ್ಕ ಹಾಗೂ ವಿದ್ಯುತ್ ಕಾಮಗಾರಿಗಳನ್ನು ಇನ್ನೂ 2-3 ದಿವಸಗಳಲ್ಲಿ ಪೂರ್ಣಗೊಳಿಸಿಕೊಡಲು ಲೋಕೋಪಯೋಗಿ ಇಲಾಖೆ ಹಾಗೂ ಬೆಸ್ಕಾಂ ಇಲಾಖೆಯ ಇಂಜಿನಿಯರ್‍ಗಳಿಗೆ ಉಪವಿಭಾಗಾಧಿಕಾರಿ ಅಜಯ್ ಗಡುವು ನೀಡಿರುತ್ತಾರೆ.

      ತುಮಕೂರು ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಡೆದ ಜಾತ್ರಾ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಊರ್ಡಿಗೆರೆ ಕಡೆಯಿಂದ ಕೈಗೊಂಡಿರುವ ರಸ್ತೆ ಕಾಮಗಾರಿ ಹಾಗೂ ರಥಬೀದಿಯ ಕಾಮಗಾರಿಗಳನ್ನು ಪೂರ್ಣಗೊಳಿಸಿ ಎರಡು ಬದಿಯ ಚರಂಡಿಗಳ ಮೇಲೆ ಸ್ಲಾಬ್ ಹಾಕಲು ಅವರು ಸೂಚನೆ ನೀಡಿದರು. ಎರಡು ಇಲಾಖೆಗಳ ಇಂಜಿನಿಯರ್‍ಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಜಾಯಿಂಟ್ ಇನ್ಸ್ಪೆಕ್ಷನ್ ಮಾಡಿ ಕಾಮಗಾರಿಗಳ ಪ್ರಗತಿ ಮತ್ತು ಸುರಕ್ಷತೆಯ ಬಗ್ಗೆ ಗಮನ ಹರಿಸುವಂತೆ ಉಪವಿಭಾಗಾಧಿಕಾರಿಗಳು ಸೂಚನೆ ನೀಡಿದರು. 

      ರಥವು ಹೈಡ್ರಾಲಿಕ್ ವ್ಯವಸ್ಥೆಯಿಂದ ನಿರ್ವಹಿಸುವುದಾಗಿರುವುದರಿಂದ ಸಂಬಂಧಪಟ್ಟ ಹೈಡ್ರಾಲಿಕ್ ತಂತ್ರಜ್ಞರನ್ನು ಕರೆದು ಪರೀಕ್ಷೆ ನಡೆಸಿ ಪ್ರಾಯೋಗಿಕ ಚಾಲನೆ ನೀಡುವ ಪೂರ್ವಭಾವಿ ವ್ಯವಸ್ಥೆಯಾಗಬೇಕು. ಅದನ್ನು ಲೋಕೋಪಯೋಗಿ ಇಲಾಖೆ ಇಂಜಿನಿಯರ್‍ಗಳು ದೃಢಪಡಿಸುವಂತೆ ಸೂಚಿಸಿದರು.

      ರಸ್ತೆಯ ಬದಿಯಲ್ಲಿರುವ ಮರಗಿಡಗಳ ಕೊಂಬೆಗಳನ್ನು ಜಂಗಲ್ ಕಟಾವು ಮಾಡಲು ಅರಣ್ಯ ಇಲಾಖೆಯವರು ಕೂಡಲೇ ಕ್ರಮ ಕೈಗೊಳ್ಳಬೇಕು, ಜಾತ್ರೆಗೆ ಬರುವ ಸಾರ್ವಜನಿಕರಿಗೆ ಕುಡಿಯುವ ನೀರು ಸರಬರಾಜಿಗೆ ಇರುವ ಬೋರ್‍ವೆಲ್‍ಗಳನ್ನು ದುರಸ್ತಿಪಡಿಸುವುದು, ಟ್ಯಾಂಕರ್‍ಗಳ ಮೂಲಕ ನೀರು ಸರಬರಾಜು ಮಾಡುವಂತೆ, ವಾಟರ್ ಸ್ಯಾಂಪಲ್ ಪಡೆದು ನೀರಿನ ಶುದ್ಧತೆಯ ಬಗ್ಗೆ ಖಚಿತಪಡಿಸಿಕೊಳ್ಳುವಂತೆ ಅವರು ಸೂಚನೆ ನೀಡಿದರು.

      ಮಾರ್ಚ್ 8, 9 ಮತ್ತು 10ರಂದು ನಿರಂತರವಾಗಿ 3ಫೇಸ್ ವಿದ್ಯುತ್ ಸರಬರಾಜು ಮಾಡಲು, ರಥಬೀದಿಯಲ್ಲಿ ವಿದ್ಯುತ್ ದೀಪಗಳ ಅಳವಡಿಕೆಗೆ ವ್ಯವಸ್ಥೆ ಮಾಡಬೇಕೆಂದು ಬೆಸ್ಕಾಂ ಇಲಾಖೆ ಹಾಗೂ ಸಂಬಂಧಿಸಿದ ಗ್ರಾಮ ಪಂಚಾಯ್ತಿಯ ಪಿಡಿಒಗಳಿಗೆ ಸೂಚನೆ ನೀಡಿದರು.

       ಸಾರ್ವಜನಿಕರ ಹಿತರಕ್ಷಣೆ ದೃಷ್ಟಿಯಿಂದ ಪೊಲೀಸ್ ಇಲಾಖೆ ಬಂದೋಬಸ್ತ್‍ಗಾಗಿ ಮಹಿಳಾಪೇದೆ ಹಾಗೂ ಪುರುಷ ಪೇದೆ, ಹೋಂ ಗಾಡ್ರ್ಸ್ ಸೇರಿದಂತೆ ಸುಮಾರು 150 ಜನರನ್ನು ನಿಯೋಜಿಸುವಂತೆ, ದೇವರ ಆಭರಣ ತೆಗೆದುಕೊಂಡು ಹೋಗುವಾಗ ಹಾಗೂ ಖಜಾನೆಗೆ ಜಮಾ ಮಾಡುವಾಗ ಸೂಕ್ತ ರಕ್ಷಣೆ ನೀಡಲು, ರಥಬೀದಿಯಲ್ಲಿ ಭಕ್ತರು ಸಂಚರಿಸಲು ತೊಂದರೆಯಾಗದಂತೆ ಅಂಗಡಿಗಳ ತೆರವುಗೊಳಿಸುವ ಕಾರ್ಯ ಪೊಲೀಸ್ ಇಲಾಖೆ ಮಾಡಬೇಕೆಂದು ಸೂಚನೆ ನೀಡಿದರು.

       ಅಗ್ನಿಶಾಮಕ ದಳದವರು ಪ್ರಾಯೋಗಿಕವಾಗಿ ಕಾರ್ಯಾಚರಣೆಯ ಬಗ್ಗೆ ತಾಲೀಮು ನಡೆಸಿ ಪರೀಕ್ಷಿಸಿಕೊಳ್ಳುವಂತೆ, ಕೆ.ಎಸ್.ಆರ್.ಟಿ.ಸಿ ವತಿಯಿಂದ ಜಾತ್ರೆಗೆ ಬರುವ ಸಾರ್ವಜನಿಕರಿಗೆ ಸೂಕ್ತ ವಾಹನದ ವ್ಯವಸ್ಥೆ ಮಾಡುವಂತೆ ಅವರು ಸೂಚಿಸಿದರು. ಕೆ.ಎಸ್.ಆರ್.ಟಿ.ಸಿ. ಯಿಂದ 60 ಸಾಮಾನ್ಯ ವಾಹನ, 5 ಮಿನಿಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ನಿಗಮದ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಕುಂಬಿ ಬೆಟ್ಟದ ಮೇಲೆ ಅಂಗವಿಕಲರು ಮತ್ತು ಗಣ್ಯರ ವಾಹನಗಳನ್ನು ಹೊರತುಪಡಿಸಿ ಎಲ್ಲಾ ರೀತಿಯ ವಾಹನಗಳನ್ನು ನಿಷೇಧಿಸಬೇಕೆಂದು ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು.

      ಸಾರ್ವಜನಿಕರ ಅನುಕೂಲಕ್ಕಾಗಿ 20ಕ್ಕೂ ಹೆಚ್ಚು ತಾತ್ಕಾಲಿಕ ಮೊಬೈಲ್ ಶೌಚಾಲಯಗಳನ್ನು ಅಳವಡಿಸಿ ಅದಕ್ಕೆ ನೀರು ಸರಬರಾಜು ವ್ಯವಸ್ಥೆ ಮಾಡುವಂತೆ, ಪ್ಲಾಸ್ಟಿಕ್ ಬಳಕೆ ಕಡ್ಡಾಯವಾಗಿ ನಿಷೇಧಿಸಬೇಕು, ಜಾತ್ರಾ ಸಮಯದಲ್ಲಿ ಮದ್ಯಪಾನ, ಧೂಮಪಾನ ಕಡ್ಡಾಯವಾಗಿ ನಿಷೇಧಿಸುವಂತೆ ಪೊಲೀಸ್ ಇಲಾಖೆ ಕ್ರಮ ಜರುಗಿಸಬೇಕೆಂದು ಅವರು ತಿಳಿಸಿದರು.

     ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿಸುವಂತೆ, ವಾರ್ತಾ ಇಲಾಖೆಯಿಂದ ಸೂಕ್ತ ಪ್ರಚಾರ ನೀಡುವ ಕಾರ್ಯ ಆಗಬೇಕೆಂದು ಅವರು ಸೂಚನೆ ನೀಡಿದರು. ಆರೋಗ್ಯ ಇಲಾಖೆ ಸಾರ್ವಜನಿಕರ ಆರೋಗ್ಯದ ಬಗ್ಗೆ ಗಮನ ಹರಿಸಿ ಸೂಕ್ತ ಚಿಕಿತ್ಸೆ ಮತ್ತು ತುರ್ತುಸೇವೆ ನೀಡುವ ಕ್ರಮ ಕೈಗೊಳ್ಳಬೇಕು. ಜಾತ್ರೆಯ ವೇಳೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಗ್ರಾಮಪಂಚಾಯ್ತಿ ಕ್ರಮ ಜರುಗಿಸಬೇಕೆಂದು ಅವರು ತಿಳಿಸಿದರು.

      ಸಭೆಯಲ್ಲಿ ತುಮಕೂರು ತಾಲ್ಲೂಕು ತಹಶಿಲ್ದಾರ್ ಮೋಹನ್‍ಕುಮಾರ್, ದೇವಸ್ಥಾನ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ಸವಿತ, ಸಮಿತಿಯ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

(Visited 15 times, 1 visits today)

Related posts