ತುಮಕೂರು : ನಾಳೆ ಜಿಲ್ಲಾದ್ಯಂತ ಲಾಕ್‍ಡೌನ್ ಜಾರಿ!!

ತುಮಕೂರು:

      ಕೋವಿಡ್-19 ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸರ್ಕಾರದ ಮಾರ್ಗಸೂಚಿಯನ್ವಯ ಮೇ 24ರಂದು ಅಗತ್ಯ ಸೇವೆ ಹೊರತುಪಡಿಸಿ ಜಿಲ್ಲಾದ್ಯಂತ ಲಾಕ್‍ಡೌನ್ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ತಿಳಿಸಿದ್ದಾರೆ.

      ಅಗತ್ಯ ಸೇವೆಗಳಿಗೆ ಮಾತ್ರ ಅನುಮತಿ: ಸರ್ಕಾರದ ಆದೇಶದಂತೆ ಲಾಕ್‍ಡೌನ್ ಅವಧಿಯಲ್ಲಿ ಅಗತ್ಯ ಸೇವೆಯಲ್ಲಿರುವವರಿಗೆ ಪಾರ್ಸಲ್ ಆಹಾರ ವಿತರಿಸುವ ಹೋಟೆಲ್‍ಗಳು, ದಿನಸಿ/ತರಕಾರಿ/ಹಾಲು/ಮಾಂಸದ ಅಂಗಡಿ, ಔಷಧ ಮಳಿಗೆ, ಆಸ್ಪತ್ರೆ/ ಕ್ಲಿನಿಕ್‍ಗಳು ಸೇರಿದಂತೆ ಅಗತ್ಯ ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ಉಳಿದಂತೆ ಯಾವುದೇ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶವಿಲ್ಲ. ವೈದ್ಯಕೀಯ ಉದ್ದೇಶ ಹಾಗೂ ತುರ್ತು ಕೆಲಸ ಹೊರತುಪಡಿಸಿ ಅನಾವಶ್ಯಕವಾಗಿ ಯಾರೂ ಹೊರಗಡೆ ತಿರುಗಾಡುವಂತಿಲ್ಲ. ಸಾರ್ವಜನಿಕರೆಲ್ಲರೂ ಸರ್ಕಾರದ ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

5 ಮಂದಿ ಗುಣಮುಖ:

      ಜಿಲ್ಲೆಯಲ್ಲಿ ಈವರೆಗೂ 24 ಕೋವಿಡ್-19 ಸೋಂಕು ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 2 ಮೃತಪಟ್ಟಿದ್ದಾರೆ ಹಾಗೂ ಐವರು ಗುಣಮುಖ ಹೊಂದಿ ಆಸ್ಪತ್ರೆಯಿಂದ ಬಿಡುಗಡೆ(ಡಿಸ್ಚಾರ್ಜ್) ಮಾಡಲಾಗಿದೆ.

      ಗುಣಮುಖರಾದ ಹಾಗೂ ಮೃತಪಟ್ಟವರನ್ನು ಹೊರತುಪಡಿಸಿ ಉಳಿದ 17 ಸೋಂಕಿತ ಪ್ರಕರಣಗಳ ಪೈಕಿ 16 ಮಂದಿ ಸೋಂಕಿತರಿಗೆ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರೆಲ್ಲರೂ ಆರೋಗ್ಯಕರವಾಗಿದ್ದು, ಯಾವುದೇ ತೊಂದರೆ ಇರುವುದಿಲ್ಲ. ಮತ್ತೋರ್ವ ಸೋಂಕಿತ ಮಹಿಳೆ ಗರ್ಭಿಣಿಯಾಗಿದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ. ಗರ್ಭಿಣಿ ಮಹಿಳೆಗೆ ಹೆರಿಗೆಯಾಗಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.

     ಹೊರ ರಾಜ್ಯಗಳಿಂದ 462 ಮಂದಿ: 

      ಈವರೆಗೂ ಹೊರ ರಾಜ್ಯಗಳಿಂದ 462 ಮಂದಿ ಜಿಲ್ಲೆಗೆ ಬಂದಿದ್ದು, ಇವರಲ್ಲಿ ಆಂಧ್ರಪ್ರದೇಶ(ಅತಿಹೆಚ್ಚು)ದಿಂದ 133, ಮಹಾರಾಷ್ಟ್ರದಿಂದ 113, ತಮಿಳುನಾಡಿನಿಂದ 103 ಜನರು ಬಂದಿದ್ದಾರೆ. ಹೊರ ರಾಜ್ಯದಿಂದ ಬಂದವರೆಲ್ಲರ ಗಂಟಲು ಸ್ರಾವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬರಬೇಕಾಗಿದೆ. ವರದಿ ಬಂದ ಕೂಡಲೇ ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

ನಿಯಂತ್ರಿತ ವಲಯದಿಂದ ಪಿಹೆಚ್ ಕಾಲೋನಿ ತೆರವು: 

      ನಗರದ ಪಿಹೆಚ್ ಕಾಲೋನಿಯನ್ನು ನಿಯಂತ್ರಿತ ವಲಯ(ಕಂಟೈನ್ಮೆಂಟ್  ಜೋನ್)ದಿಂದ ತೆರವುಗೊಳಿಸಲಾಗಿದೆ. ಕಳೆದ 28 ದಿನಗಳಿಂದ ಪಿಹೆಚ್ ಕಾಲೋನಿಯಲ್ಲಿ ಯಾವುದೇ ಕೋವಿಡ್-19 ಪ್ರಕರಣ ವರದಿಯಾಗದೆ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ನಿಯಂತ್ರಿತ ವಲಯವನ್ನಾಗಿ ಪರಿವರ್ತಿಸಿದ್ದ ಅವಧಿಯಲ್ಲಿ ಸಂಪೂರ್ಣವಾಗಿ ಸಹಕಾರ ನೀಡಿದ್ದಾರೆ ಎಂದು ಅವರು ಸ್ಥಳೀಯ ನಿವಾಸಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಯಾವುದೇ ಹೊಸ ಪ್ರಕರಣ ದಾಖಲಾಗಿಲ್ಲ:

      ಜಿಲ್ಲೆಯಲ್ಲಿ ಇಂದು ಯಾವುದೇ ಹೊಸ ಕೋವಿಡ್-19 ಪ್ರಕರಣ ದಾಖಲಾಗಿಲ್ಲ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ತುಮಕೂರು ತಾಲ್ಲೂಕಿನ ಹೆಬ್ಬೂರು ಹಾಗೂ ಸದಾಶಿವನಗರವನ್ನು ನಿಯಂತ್ರಿತ ವಲಯವನ್ನಾಗಿ ಪರಿವರ್ತಿಸಲಾಗಿದೆ. ಈ ಹಿಂದೆ ಖಾದರ್ ನಗರವನ್ನೂ ಸಹ ನಿಯಂತ್ರಿತ ವಲಯವನ್ನಾಗಿ ಪರಿವರ್ತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

(Visited 5 times, 1 visits today)

Related posts

Leave a Comment