ಸಮರ್ಪಕವಾಗಿ ಕಾರ್ಯನಿರ್ವಹಿಸದ ಇಂಜಿನಿಯರ್‍ಗಳ ಅಮಾನತ್ತಿಗೆ ಸಚಿವರ ಶಿಫಾರಸ್ಸು!

ತುಮಕೂರು:

      ಗ್ರಾಮೀಣ ಪ್ರದೇಶಗಳಲ್ಲಿ ಜನ-ಜಾನವಾರುಗಳ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಸಮರ್ಪಕವಾಗಿ ಕಾರ್ಯನಿರ್ವಹಿಸದ ಇಂಜಿನಿಯರ್‍ಗಳನ್ನು ಅಮಾನತ್ತು ಮಾಡಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಜಿಲ್ಲಾ ಪಂಚಾಯತ್ ಸಿಇಓ ಶುಭಾ ಕಲ್ಯಾಣ್ ಅವರಿಗೆ ಕಡಕ್ ನಿರ್ದೇಶನ ನೀಡಿದರು.

      ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿಂದು ಜರುಗಿದ ಮುಂದುವರೆದ ಕೆಡಿಪಿ ಸಭೆ ಅಧ್ಯಕ್ಷತೆವಹಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕಂದಾಯ, ಆಹಾರ ಮತ್ತು ನಾಗರಿಕ ಸರಬರಾಜು, ಲೋಕೋಪಯೋಗಿ, ರಾಷ್ಟ್ರೀಯ ಹೆದ್ದಾರಿ-206, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ, ಮೀನುಗಾರಿಕೆ, ಜವಳಿ ಮತ್ತು ಕೈಮಗ್ಗ, ರೇಷ್ಮೆ, ಕೃಷಿ ಮಾರುಕಟ್ಟೆ, ಡಿಸಿಸಿ ಬ್ಯಾಂಕ್, ತುಮಕೂರು-ರಾಯದುರ್ಗ ರೈಲ್ವೆ ಯೋಜನೆಗಳು, ಅಬಕಾರಿ, ಜಿಲ್ಲಾ ಉದ್ಯೋಗ ವಿನಿಮಯ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ, ಕಾರ್ಮಿಕ, ಕೆ.ಎಸ್.ಆರ್.ಟಿ.ಸಿ., ಮತ್ತಿತರ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಇಂಜಿನಿಯರುಗಳು ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಬೇಕೆಂದರಲ್ಲದೆ ಆ ಪ್ರದೇಶದಲ್ಲಿರುವ ಜನಸಂಖ್ಯೆ, ಕೊಳವೆ ಬಾವಿಗಳ ಸಂಖ್ಯೆ, ನೀರಿನ ಮೂಲ, ಸಮಸ್ಯೆಗಳ ಮಾಹಿತಿಯನ್ನು ಕೂಡಲೇ ಒದಗಿಸಬೇಕೆಂದು ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಚೆನ್ನವೀರಸ್ವಾಮಿಗೆ ಸೂಚನೆ ನೀಡಿದರಲ್ಲದೆ, ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದಾದ ಗ್ರಾಮಗಳ ಬಗ್ಗೆ ಸಲ್ಲಿಸಿರುವ ಮಾಹಿತಿ ಸುಳ್ಳಿನಕಂತೆ ಎಂದು ಬೇಸರ ವ್ಯಕ್ತಪಡಿಸಿದರು.

      ಕೆಡಿಪಿ ಸಭೆಗೆ ಒದಗಿಸುವ ಮಾಹಿತಿ ನಿಖರವಾಗಿರಬೇಕು. ಮಾಹಿತಿಯಲ್ಲಿ ಲೋಪವಿದ್ದರೆ ಸಂಬಂಧಿಸಿದ ಅಧಿಕಾರಿಗಳನ್ನು ಮನೆಗೆ ಕಳುಹಿಸುತ್ತೇನೆಂದು ಎಚ್ಚರಿಕೆ ನೀಡಿದ ಸಚಿವರು, ಜಿಲ್ಲೆಯಲ್ಲಿ ವಿವಿಧ ವಸತಿ ಯೋಜನೆಗಳಡಿ ಮಂಜೂರಾದ ಸುಮಾರು 40ಸಾವಿರ ಮನೆಗಳು ನಿರ್ಮಾಣವಾಗದೆ ಬಾಕಿ ಉಳಿದಿವೆ. ಈ ಪೈಕಿ 24977 ಮನೆಗಳು ತಳಪಾಯ, ಗೋಡೆ, ಛಾವಣಿ ಹಂತದಲ್ಲಿದ್ದರೆ ಉಳಿದ 15955 ಮನೆಗಳ ನಿರ್ಮಾಣ ಕಾರ್ಯ ಇನ್ನೂ ಕೈಗೆತ್ತಿಕೊಳ್ಳದೆ ಇರಲು ಕಾರಣವೇನೆಂದು ಕೇಳಿದಾಗ ಸಂಬಂಧಿಸಿದ ಅಧಿಕಾರಿ ಉತ್ತರಿಸಲು ತಡವರಿಸಿದರು.

      ನಂತರ ಕಂದಾಯ ಇಲಾಖೆ ಪ್ರಗತಿ ಪರಿಶೀಲಿಸಿದ ಸಚಿವರು, ಸರ್ಕಾರ ನೀಡುತ್ತಿರುವ ವಿವಿಧ ಪಿಂಚಣಿ ಸೌಲಭ್ಯಕ್ಕಾಗಿ ಸಲ್ಲಿಸಿರುವವರ ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿರಲು ಕಾರಣವೇನೆಂದು ಮಾಹಿತಿ ಕೇಳಿದಾಗ ಉತ್ತರಿಸಿದ ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಜಿಲ್ಲೆಯಲ್ಲಿ ವೃದ್ಧಾಪ್ಯ ವೇತನ, ವಿಧವಾ, ಅಂಗವಿಕಲ, ಮನಸ್ವಿನಿ, ಮತ್ತು ಸಂಧ್ಯಾ ಸುರಕ್ಷಾ ಯೋಜನೆ ಸೇರಿದಂತೆ ಒಟ್ಟು 35356 ಫಲಾನುಭವಿಗಳು ಪಿಂಚಣಿ ಪಡೆಯುತ್ತಿದ್ದು, ಲಾಕ್‍ಡೌನ್ ಹಿನ್ನೆಲೆಯಲ್ಲಿ ಅಂಚೆ ಕಛೇರಿ ಮೂಲಕ ಪಾವತಿಯಾಗುವ ಪಿಂಚಣಿದಾರರಿಗೆ ಮಾತ್ರ ಸಕಾಲದಲ್ಲಿ ಪಿಂಚಣಿ ಪಾವತಿಯಾಗಿಲ್ಲ. ಉಳಿದಂತೆ ನೇರವಾಗಿ ಖಾತೆಗೆ ಜಮೆಯಾಗುವವರಿಗೆ ಪಿಂಚಣಿ ಪಾವತಿಯಾಗಿದೆ ಎಂದು ಮಾಹಿತಿ ನೀಡಿದರು.

      ಜಿಲ್ಲೆಯ ಎಲ್ಲಾ ತಹಶೀಲ್ದಾರರು ಪ್ರತಿವಾರ ಕಡ್ಡಾಯವಾಗಿ ಪಿಂಚಣಿ ಅದಾಲತ್‍ಗಳನ್ನು ನಡೆಸಿ ಪಿಂಚಣಿ ಕೋರಿ ಸ್ವೀಕರಿಸಿದ ಅರ್ಜಿಗಳನ್ನು 45 ದಿನಗಳೊಳಗಾಗಿ ವಿಲೇವಾರಿ ಮಾಡಬೇಕು. ಯಾವುದೇ ಅರ್ಜಿಯನ್ನು ಬಾಕಿ ಉಳಿಸಿಕೊಳ್ಳುವಂತಿಲ್ಲ. ಪಿಂಚಣಿ ಮಾಡಿಸಿಕೊಡುತ್ತೇನೆಂದು ಬಡವರಿಂದ ಮಧ್ಯವರ್ತಿಗಳು ಹಣ ವಸೂಲಿ ಮಾಡುತ್ತಿದ್ದು, ಹೋಬಳಿವಾರು ಪಿಂಚಣಿ ಅದಾಲತ್‍ಗಳನ್ನು ನಡೆಸಿ ಮಧ್ಯವರ್ತಿಗಳನ್ನು ಸಂಪರ್ಕಿಸದಿರಲು ಜನರಿಗೆ ಅಧಿಕಾರಿಗಳು ಅರಿವು ಮೂಡಿಸಬೇಕೆಂದರು. ಶಿರಾ, ಪಾವಗಡ, ಮಧುಗಿರಿ, ಚಿಕ್ಕನಾಯಕನಹಳ್ಳಿ, ಕೊರಟಗೆರೆ ತಾಲ್ಲೂಕುಗಳಲ್ಲಿ ಪಿಂಚಣಿ ಅದಾಲತ್‍ಗಳು ಕಡಿಮೆ ಸಂಖ್ಯೆಯಲ್ಲಿ ಏರ್ಪಡಿಸಿರುವುದು ನಿರಾಶೆ ತಂದಿದೆ ಎಂದರು.

      ಲಾಕ್‍ಡೌನ್ ಅವಧಿಯಲ್ಲಿ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ನೇರವಾಗಿ ವಿತರಣೆ ಮಾಡಬೇಕಿದ್ದ ಆಹಾರದ ಕಿಟ್‍ಗಳನ್ನು ರಾಜಕಾರಣಿಗಳಿಗೆ, ಖಾಸಗಿಯವರಿಗೆ ನೀಡಿ ಅಧಿಕಾರಿಗಳು ಅಕ್ರಮ ಎಸಗಿದ್ದಾರೆ. ರಾಜಕಾರಣಿಗಳು ಈ ಕಿಟ್ ಮೇಲೆ ತಮ್ಮ ಹೆಸರನ್ನು ಮುದ್ರಿಸಿ ವಿತರಿಸಿರುವುದು ಕಂಡು ಬಂದಿದೆ. ಇದರಿಂದ ಅಧಿಕಾರಿಗಳು ಸರ್ಕಾರಕ್ಕೆ ವಂಚನೆ ಮಾಡಿದ್ದಾರೆಂದು ದೂರುಗಳು ಕೇಳಿ ಬಂದಿವೆ ಎಂದು ಕಾರ್ಮಿಕ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕೋವಿಡ್-19 ಲಾಕ್‍ಡೌನ್ ಅವಧಿಯಲ್ಲಿ ಅಬಕಾರಿ ಇಲಾಖೆ ನಡೆಸಿದಷ್ಟು ಭ್ರಷ್ಟತೆ ಯಾವ ಇಲಾಖೆಯೂ ತೋರಿಲ್ಲ. ಇಲಾಖೆ ಅಧಿಕಾರಿಗಳು ಲಿಕ್ಕರ್ ಅಂಗಡಿಗಳೊಂದಿಗೆ ಶಾಮೀಲಾಗಿ ಹಣವನ್ನು ಲೂಟಿ ಮಾಡಿದ್ದಾರೆ. ಮದ್ಯವನ್ನು ಹಣವಿಲ್ಲದವರಿಗೂ ಒಂದಲ್ಲ, ಎರಡಲ್ಲ, ನಾಲ್ಕು ಪಟ್ಟು ಹೆಚ್ಚಿನ ದರಕ್ಕೆ ಮಾರಾಟ ಮಾಡಿದ್ದಾರೆ. ಲಾಕ್‍ಡೌನ್ ಘೋಷಣೆಯಾಗುವ ಮುನ್ನ ಮಾರಾಟದ ಕಡೆ ದಿನ ಸ್ಟಾಕ್ ವಿವರವನ್ನು ನಿಖರವಾಗಿ ಅಧಿಕಾರಿಗಳು ನೀಡದೆ ಜಾಣಕುರುಡರಂತೆ ವರ್ತಿಸುತ್ತಿದ್ದಾರೆ. ಕೂಡಲೇ ಅಬಕಾರಿ ಇಲಾಖೆಗೆ ಸಂಬಂಧಿಸಿದಂತೆ ನನ್ನ ಅಧ್ಯಕ್ಷತೆಯಲ್ಲಿ ಸಭೆ ಏರ್ಪಡಿಸಿ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.

      ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಸಂಜೀವರಾಜು ಸಭೆಗೆ ಮಾಹಿತಿ ನೀಡುತ್ತಾ, ಕಳೆದ ಆರ್ಥಿಕವರ್ಷದಲ್ಲಿ ಇಲಾಖೆಗೆ ಗುರಿ ನೀಡಲಾಗಿದ್ದ ರಾಜ್ಯ ಹೆದ್ದಾರಿ ರಸ್ತೆ ಹಾಗೂ ಜಿಲ್ಲಾ ಮತ್ತು ಇತರೆ ರಸ್ತೆ ಕಾಮಗಾರಿಗಳು ಪೂರ್ಣಗೊಂಡಿದ್ದು, ಶೇ. 100ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಿದರು.

      ತುಮಕೂರು-ರಾಯದುರ್ಗ ರೈಲ್ವೆ ಯೋಜನೆ ಪ್ರಗತಿ ಪರಿಶೀಲಿಸಿದ ಸಚಿವರು, ಅಧಿಕಾರಿಗಳಿಂದ ಮಾಹಿತಿ ಪಡೆದರು. ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಟ್‍ಫಾರಂ ಅನ್ನು ಅವೈಜ್ಞಾನಿಕವಾಗಿ ನಿರ್ಮಿಸದೆ ಪ್ರಯಾಣಿಕರು ರೈಲು ಹತ್ತಿ-ಇಳಿಯಲು ಅನುಕೂಲವಾಗುವಂತೆ ನಿರ್ಮಿಸಬೇಕು ಎಂದು ಸಲಹೆ ನೀಡಿದರು.

      ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳು ಬಹುಪಾಲು ಕಚ್ಚಾರಸ್ತೆಗಳಾಗಿ ಮಾರ್ಪಾಡಾಗಿವೆ. ಹಾಳಾದ ರಸ್ತೆಗಳ ದುರಸ್ತೆಗೆ ಕ್ರಮವಹಿಸಬೇಕೆಂದರಲ್ಲದೆ ರಸ್ತೆ ಅಭಿವೃದ್ಧಿಗಾಗಿ ಭೂಸ್ವಾಧೀನ ಪ್ರಕ್ರಿಯೆ ಕೂಡ ವಿಳಂಬವಾಗಿದೆ. ಭೂಸ್ವಾಧೀನಕ್ಕೊಳಗಾಗುವ ಪ್ರದೇಶಗಳಲ್ಲಿರುವ ಅಡಿಕೆ-ತೆಂಗಿನ ಗಿಡಗಳ ಮಾಹಿತಿ ಸಂಗ್ರಹಿಸಿ ವರದಿ ನೀಡಬೇಕೆಂದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗೆ ನಿರ್ದೇಶಿಸಿದರು.

      ಗ್ರಾಮೀಣ ಪ್ರದೇಶದ ರಸ್ತೆ ಅಭಿವೃದ್ಧಿ ಯೋಜನೆಯಡಿ ಮಂಜೂರಾದ ಕಾಮಗಾರಿಗಳ ಪೈಕಿ ಏಳೆಂಟು ಕಾಮಗಾರಿಗಳನ್ನು ಒಬ್ಬನೇ ಗುತ್ತಿಗೆದಾರರಿಗೆ ನೀಡಲಾಗುತ್ತಿದೆ. ಇದರಿಂದ ಗುಣಮಟ್ಟ ನಿರೀಕ್ಷಿಸಲು ಸಾಧ್ಯವಿಲ್ಲ. ಅರ್ಹ ಗುತ್ತಿಗೆದಾರರಿಗೆ ಮಾತ್ರ ಕಾಮಗಾರಿ ಗುತ್ತಿಗೆ ನೀಡಬೇಕು ಎಂದು ಅಧಿಕಾರಿಗೆ ಸೂಚನೆ ನೀಡಿದರು.

      ಜಿಲ್ಲೆಯಲ್ಲಿ ಗಾರ್ಮೆಂಟ್ಸ್ ನೌಕರರ ಅನುಕೂಲಕ್ಕಾಗಿ ಅವಶ್ಯಕತೆ ಇರುವ ಕಡೆ ಬಸ್ ವ್ಯವಸ್ಥೆ ಮಾಡಬೇಕೆಂದು ಕೆಎಸ್.ಆರ್.ಟಿ.ಸಿ. ಅಧಿಕಾರಿಗೆ ನಿರ್ದೇಶನ ನೀಡಿದರು.

      ಸಭೆಯಲ್ಲಿ ಶಾಸಕ ಜ್ಯೋತಿಗಣೇಶ್, ತುರುವೇಕೆರೆ ಶಾಸಕ ಜಯರಾಂ, ಜಿ.ಪಂ. ಅಧ್ಯಕ್ಷೆ ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಸ್ಥಾಯಿಸಮಿತಿ ಅಧ್ಯಕ್ಷೆ ಮಂಜುಳ, ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ, ಜಿ.ಪಂ. ಉಪಕಾರ್ಯದರ್ಶಿ ರಮೇಶ್, ಭೂಬಾಲನ್, ಮತ್ತಿತರರು ಉಪಸ್ಥಿತಿರಿದ್ದರು.

  

(Visited 5 times, 1 visits today)

Related posts

Leave a Comment