ಮಾರ್ಚ್ ಅಂತ್ಯದೊಳಗೆ ಅಂಗನವಾಡಿ ಕಟ್ಟಡಗಳ ಕಾಮಗಾರಿಗಳ ಪೂರ್ಣಗೊಳಿಸಲು

 ತುಮಕೂರು :

       ವಿವಿಧ ಯೋಜನೆಗಳಡಿ ನಿರ್ಮಾಣವಾಗುತ್ತಿರುವ ಅಂಗನವಾಡಿ ಕಟ್ಟಡಗಳ ನಿರ್ಮಾಣ ಕಾಮಗಾರಿಗಳನ್ನು ಮಾರ್ಚ್-2021ರ ಅಂತ್ಯದೊಳಗಾಗಿ ಗುಣಮಟ್ಟದೊಂದಿಗೆ ಪೂರ್ಣಗೊಳಿಸಿ, ಮಕ್ಕಳ ಬಳಕೆಗೆ ಇಲಾಖೆಗೆ ಹಸ್ತಾಂತರ ಮಾಡಲು ನಿರ್ಮಾಣ ಏಜೆನ್ಸಿಗಳಾದ ನಿರ್ಮಿತಿ ಕೇಂದ್ರ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್‍ಕುಮಾರ್ ಕಟ್ಟುನಿಟ್ಟಿನ ಸೂಚನೆ ನೀಡಿದರು.

      ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅನುಷ್ಠಾನವಾಗುತ್ತಿರುವ ಐ.ಸಿ.ಡಿ.ಎಸ್ ಕಾರ್ಯಕ್ರಮ ಸೇರಿದಂತೆ ವಿವಿಧ ಯೋಜನೆ/ಕಾರ್ಯಕ್ರಮಗಳ 2020-21ನೇ ಸಾಲಿನ 3ನೇ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

       2020-21ನೇ ಸಾಲಿನಲ್ಲಿ ಜಿಲ್ಲೆಯ ಅಂಗನವಾಡಿ ಕಟ್ಟಡಗಳ ನಿರ್ವಹಣೆಗೆ ಬಿಡುಗಡೆಯಾಗಿರುವ 170 ಲಕ್ಷ ರೂ ಅನುದಾನವನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಉತ್ತಮ ಗುಣಮಟ್ಟದ ಸಾಮಾಗ್ರಿಗಳನ್ನು ಬಳಸಿಕೊಂಡು ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಬೇಕು. ನರೇಗಾ ಯೋಜನೆಯಡಿ ಶಿರಾ ಮತ್ತು ತುಮಕೂರು ಗ್ರಾಮಾಂತರದಲ್ಲಿ ಹೆಚ್ಚಿನ ಸಂಖ್ಯೆಯ ಅಂಗನವಾಡಿ ಕಟ್ಟಡಗಳ ಕಾಮಗಾರಿಗಳು ಪ್ರಗತಿ ಹಂತದಲ್ಲಿದ್ದು, ಅವುಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕರಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಪ್ರಸ್ತುತ 176 ಅಪೌಷ್ಟಿಕ ಮಕ್ಕಳಿದ್ದು, ಇವುಗಳಲ್ಲಿ ವಿವಿಧ ಸ್ವರೂಪದ ಗಂಭೀರ ಖಾಯಿಲೆಗಳಿಂದ ಬಳಲುತ್ತಿರುವ ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕ ಮಟ್ಟದ ಸುಧಾರಣೆಗೆ ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮದಡಿ ಹೆಚ್ಚಿನ ಚಿಕಿತ್ಸೆಗೆ ಕ್ರಮವಹಿಸಲು ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳಿಗೆ ಸೂಚಿಸಿದರು.

      ಕೌಟುಂಬಿಕ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಇತ್ಯರ್ಥಗೊಳಿಸಿ, ಸೂಕ್ತ ಪರಿಹಾರ ದೊರಕಿಸಿ, ದೌರ್ಜನ್ಯಕ್ಕೊಳಪಟ್ಟ ಮಹಿಳೆಯರಿಗೆ ರಕ್ಷಣೆ ನೀಡಬೇಕು. ಮಹಿಳೆಯರ ಮೇಲಿನ ಕೌಟುಂಬಿಕ ಹಿಂಸೆ ನಿಯಂತ್ರಣಕ್ಕೆ ಅಧಿಕಾರಿಗಳು ಕ್ರೀಯಾಶೀಲರಾಗಿ ಕೆಲಸ ಮಾಡಬೇಕು. ಪ್ರಕರಣ ದಾಖಲಾದ ಬಳಿಕ ಸಮಸ್ಯೆ ಇತ್ಯರ್ಥಕ್ಕೆ ಅವರು ಬರದಿದ್ದರೆ, ದೌರ್ಜನ್ಯಕ್ಕೊಳಪಟ್ಟ ಮಹಿಳೆಯರ ಮನೆಗೆ ನೀವೇ ಭೇಟಿ ನೀಡಿ ಸಮಸ್ಯೆ ಆಲಿಸಿ ಮನೆಯಲ್ಲಿಯೇ ಸಮಾಲೋಚನೆ ಮಾಡುವಂತೆ ನಿರ್ದೇಶಿಸಿದರು.

       ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿ ದಾಖಲಾದ ಪ್ರಕರಣಗಳನ್ನು ಬಾಕಿ ಉಳಿಸಿಕೊಳ್ಳದೇ ಇತ್ಯರ್ಥಗೊಳಿಸಬೇಕು. ಇಲ್ಲವೇ ಎಫ್‍ಐಆರ್ ದಾಖಲಿಸಬೇಕು. ಸಂರಕ್ಷಣಾಧಿಕಾರಿಗಳ ಹಂತದಲ್ಲಿಯೇ ಪ್ರಕರಣಗಳನ್ನು ಉಳಿಸಿಕೊಂಡು ನೋಟಿಸ್ ಕಳುಹಿಸಿ ಸುಮ್ಮನಾಗಬಾರದು. ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಮಸ್ಯೆಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್. ನಟರಾಜು ಅವರಿಗೆ ತಿಳಿಸಿದರು.

      ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿ ಒಟ್ಟು 105 ಪ್ರಕರಣಗಳು ದಾಖಲಾಗಿವೆ. 27 ಪ್ರಕರಣಗಳನ್ನು ಸಮಾಲೋಚನೆಯಿಂದ ಇತ್ಯರ್ಥಗೊಳಿಸಲಾಗಿದೆ. ಉಳಿದ 78 ಪ್ರಕರಣಗಳು ನ್ಯಾಯಾಲಯ ಮತ್ತು ಸಂರಕ್ಷಣಾಧಿಕಾರಿಗಳ ಹಂತದಲ್ಲಿದ್ದು, ಈ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.

     ಸಾಂತ್ವನ ಯೋಜನೆಯಡಿ ಕೌಟುಂಬಿಕ ಕಲಹದಡಿ ದಾಖಲಾಗಿರುವ ಪ್ರಕರಣಗಳ ಇತ್ಯರ್ಥಗೊಳಿಸಲು ಮತ್ತು ವರದಕ್ಷಿಣೆ ನಿಷೇಧ ಕಾಯ್ದೆ ಹಾಗೂ ಸಖಿ ಒನ್ ಸ್ಟಾಪ್ ಸೆಂಟರ್, ಸ್ಥೈರ್ಯನಿಧಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು.

     ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ(ಅಭಿವೃದ್ಧಿ) ರಮೇಶ್, ಆರ್.ಸಿ.ಹೆಚ್. ಅಧಿಕಾರಿ ಕೇಶವರಾಜ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರರು, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರು ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಸ್ವಯಂ ಸೇವಾಸಂಸ್ಥೆಯ ಪ್ರತಿನಿಧಿಗಳು ಹಾಜರಿದ್ದರು.

(Visited 7 times, 1 visits today)

Related posts

Leave a Comment