ಕೇಂದ್ರ ಸರ್ಕಾರದ 7 ವರ್ಷದ ಸಾಧನೆ ಶೂನ್ಯ : ಪರಮೇಶ್ವರ್

ತುಮಕೂರು: 

      ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 7 ವರ್ಷದ ಸಾಧನೆ ಶೂನ್ಯವಾಗಿದ್ದು, ದೇಶದ ಆರ್ಥಿಕತೆ ಉತ್ತಮ ಪಡಿಸುವಲ್ಲಿ, ಯುವಕರಿಗೆ ಉದ್ಯೋಗ ಸೃಷ್ಠಿಸುವಲ್ಲಿ, ರೈತರ ಹಿತ ಕಾಪಾಡುವಲ್ಲಿ ಸಂಪೂರ್ಣ ವೈಫಲ್ಯವಾಗಿದೆ. ಎಲ್ಲ ಕ್ಷೇತ್ರಗಳ ಅಭಿವೃದ್ಧಿಯಲ್ಲೂ ವಿಫಲವಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಜಿ. ಪರಮೇಶ್ವರ್ ಟೀಕಿಸಿದರು.
2014 ರಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾದಾಗ ದೇಶದ ಜನ ಹೊಸ ಚಿಂತನೆ, ಹೊಸ ಯೋಜನೆ, ಆವಿಷ್ಕಾರಗಳ ನಿರೀಕ್ಷೆಯಲ್ಲಿದ್ದರು. ಆದರೆ ಬಹು ಬೇಗ ಆ ನಿರೀಕ್ಷೆಗಳು ಹುಸಿಯಾಗ ತೊಡಗಿದವು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನರೇಂದ್ರ ಮೋದಿಯವರು ಪ್ರಧಾನಿಯಾದ ಸಂದರ್ಭದಲ್ಲಿ ದೇಶದಲ್ಲಿ ಜಿಡಿಪಿ ಶೇ. 8.1 ರಷ್ಟಿತ್ತು. ಕ್ರಮೇಣ ಇದು ಕುಸಿಯುತ್ತಾ ಬಂದಿತು. ಈಗ ಈ ಜಿಡಿಪಿ ಮೈನಸ್‍ಗೆ ಹೋಗುವಂತಹ ಕುಸಿತವನ್ನು ಕಾಣುತ್ತಿದ್ದೇವೆ. ಇದು ಕೇಂದ್ರ ಸರ್ಕಾರದ ದೊಡ್ಡ ಸಾಧನೆಯಾಗಿದೆ ಎಂದರು.
ಒಂದು ದೇಶದ ಜಿಡಿಪಿ ಸರಿಯಾದ ಪ್ರಮಾಣದಲ್ಲಿ ಇದ್ದರೆ ಆ ದೇಶದ ಆರ್ಥಿಕತೆ ನಿಯಂತ್ರಣದಲ್ಲಿರುತ್ತದೆ ಮತ್ತು ಅಭಿವೃದ್ಧಿಯತ್ತ ಸಾಗುತ್ತಿರುತ್ತದೆ ಎಂಬುದನ್ನು ಚೀನಾ ದೇಶವನ್ನು ನೋಡಿ ತಿಳಿದುಕೊಳ್ಳಬಹುದು. ಆದರೆ ನಮ್ಮ ದೇಶದಲ್ಲಿ ಕೋವಿಡ್ ಬಂದ ನಂತರ ಕಳೆದ ಒಂದೂವರೆ ವರ್ಷದಿಂದ ಜಿಡಿಪಿ ಮತ್ತ ಅಭಿವೃದ್ಧಿ ಬಹಳಷ್ಟು ಪಾತಾಳಕ್ಕೆ ಕುಸಿದಿದೆ. ಆದರೆ ಇದನ್ನು ಒಪ್ಪಿಕೊಳ್ಳಲು ಪ್ರಧಾನಿ ಮೋದಿ, ವಿತ್ತ ಸಚಿವರು ಸೇರಿದಂತೆ ಕೇಂದ್ರದ ಬಿಜೆಪಿ ನಾಯಕರು ತಯಾರಿಲ್ಲ ಎಂದರು.

ಜಿಡಿಪಿ ಬೆಳವಣಿಗೆಯಿಂದ ದೇಶದ ಆರ್ಥಿಕ ಪರಿಸ್ಥಿತಿ ಅಳತೆ ಮಾಡುತ್ತೇವೆ. ಹಿಂದೆ ಯಾವ ರೀತಿ ಪರಿಸ್ಥಿತಿ ಇತ್ತು, ಈಗ ಯಾವ ರೀತಿ ಪರಿಸ್ಥಿತಿ ಇದೆ ಎಂಬುದನ್ನು ಊಹಿಸಬಹುದಾಗಿದೆ. ಆರ್ಥಿಕ ತಜ್ಞ ಡಾ. ಮನಮೋಹನ್‍ಸಿಂಗ್ ಅವರು
ಪ್ರಧಾನಿಯಾಗಿದ್ದಾಗ ಕಾಲದಲ್ಲಿ ಪ್ರಥಮ ಬಾರಿಗೆ ದೇಶದಲ್ಲಿ ಜಿಡಿಪಿ ಶೇ. 10.68ಕ್ಕೆ ತಲುಪಿತ್ತು. ಯಾವುದೇ ರಾಷ್ಟ್ರದಲ್ಲಿ ಎರಡು ಡಿಜಿಟ್ ಮೇಲೆ ಜಿಡಿಪಿ ಹೋಗಿದ್ದರೆ ಆ ದೇಶದ ಆರ್ಥಿಕ ವ್ಯವಸ್ಥೆ ಸಂಪೂರ್ಣವಾಗಿ ಕಂಟ್ರೋಲ್‍ನಲ್ಲಿದ್ದು, ಅಭಿವೃದ್ಧಿಯ ಕಡೆ ಗಮನಹರಿಸಲು ಸಾಧ್ಯವಾಗುತ್ತದೆ ಎಂದರು.

       ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಶೇ. 8.1 ರಷ್ಟು ಇದ್ದ ಜಿಡಿಪಿ 2019-20ರ ನಂತರ ಶೇ. 4.1ಕ್ಕೆ ಕುಸಿಯಿತು. ಇನ್ನು ಕೋವಿಡ್ 1ನೇ ಅಲೆ ಆರಂಭವಾದ ಬಳಿಕ ಜಿಡಿಪಿ ಶೇ. – 24 ಬಂತು, ಈಗ 2ನೇ ಅಲೆ ವೇಳೆ ದೇಶದ ಜಿಡಿಪಿ ಪ್ರಮಾಣ ಶೇ. – 7.5 ಇಳಿಯುವ ಮೂಲಕ ದೇಶದ ಆರ್ಥಿಕ ಪರಿಸ್ಥಿತಿ ಪಾತಾಳಕ್ಕೆ ಹೋಗಿದೆ. ಇದರೊಂದಿಗೆ ದೇಶದ ಅಭಿವೃದ್ಧಿಯೂ ಕುಂಠಿತಗೊಂಡಿದೆ ಎಂದು ಹೇಳಿದರು.

     ಬಿಜೆಪಿ ದೇಶದ ಆಡಳಿತ ಚುಕ್ಕಾಣಿ ಹಿಡಿದ 7 ವರ್ಷದಲ್ಲಿ ದೇಶದ ಆರ್ಥಿಕ ವ್ಯವಸ್ಥೆ ಕಳೆದ 40 ವರ್ಷದಲ್ಲಿ ಇಷ್ಟು ಪಾತಾಳಕ್ಕೆ ಹೋಗಿರಲಿಲ್ಲ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.

      ಮಾಜಿ ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ, ನೋಟ್ ಬ್ಯಾನ್ ವೇಳೆ 500, 1000 ಮುಖ ಬೆಲೆ ನೋಟು ಜಮೆಯಾಗಿದ್ದು ಎಷ್ಟು ಎಂದು ಇದುವರೆಗೂ ಹೇಳಿಲ್ಲ. ಕಪ್ಪುಹಣ, ಖೋಟಾನೋಟು ನೆಪದಲ್ಲಿ ನೋಟ್ ಬ್ಯಾನ್ ಆದ ಮೇಲೆ ಜಮೆಯಾಗಿದ್ದು ಎಷ್ಟು ಎನ್ನುವುದು ಗೊತ್ತಿಲ್ಲ. ಭಾರತದ ಆರ್ಥಿಕತೆ ಮೇಲೆ ಮಾಡಿದ ಮೊದಲ ದಾಳಿ ಇದು. ನಮ್ಮ ಪಾಲಿನ 12,400 ಕೋಟಿ ನೀಡುತ್ತಿಲ್ಲ. ಕೇಳಿದರೆ ಸಾಲ ಪಡೆಯಲು ಹೇಳುತ್ತಾರೆ ಎಂದು ಆರೋಪಿಸಿದರು.

     ಮಾಜಿ ಶಾಸಕ ರಫೀಕ್ ಅಹಮದ್ ಮಾತನಾಡಿ, ಕೋವಿಡ್ ಸಾಂಕ್ರಮಿಕ ಸಂದರ್ಭದಲ್ಲಿ ತುಮಕೂರು ಮಹಾನಗರ ಪಾಲಿಕೆ ಆಸ್ತಿ ತೆರಿಗೆಯನ್ನು ಶೇ.5ರಷ್ಟು ಹೆಚ್ಚಳ ಮಾಡಿದ್ದು, ಜನರು ಸಂಕಷ್ಟದಲ್ಲಿದ್ದು ಪಾಲಿಕೆ ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

     ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಟಿ.ಬಿ. ಜಯಚಂದ್ರ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ, ಮಾಜಿ ಶಾಸಕರಾದ ಎಸ್. ಷಫಿಅಹಮದ್, ಡಾ. ರಫೀಕ್‍ಅಹಮದ್, ಮುರುಳೀಧರ ಹಾಲಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ರಾಮಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.
 

(Visited 3 times, 1 visits today)

Related posts

Leave a Comment