
ಬೆಂಗಳೂರು/ತುಮಕೂರು: “ಅಪಾರ್ಟ್ ಮೆಂಟ್ ನಿವಾಸಿಗಳ ಹಕ್ಕು ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಸಮಸ್ಯೆಗಳ ಮುಕ್ತಿಗೆ ನಮ್ಮ ಸರ್ಕಾರ ಹೆಜ್ಜೆ ಇಟ್ಟಿದೆ. ಏಕಪಕ್ಷೀಯ ನಿರ್ಧಾರ ನಮ್ಮ ಧೋರಣೆಯಲ್ಲ. ಆಸ್ತಿಯನ್ನು ನೀವು ಕೊಂಡುಕೊAಡ ಮೇಲೆ ನೀವೇ ಅದರ ಮಾಲೀಕರು. ಈ ವಿಚಾರದಲ್ಲಿ ಅನುಮಾನವಿಲ್ಲ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.
ಕರ್ನಾಟಕ ಅಪಾರ್ಟೆ್ಮಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ೨೦೨೬ ಕುರಿತು ಅಪಾರ್ಟ್ ಮೆಂಟ್ ಸಂಘಗಳ ಪ್ರತಿನಿಧಿಗಳೊಂದಿಗೆ ನೆಹರು ತಾರಾಲಯ ಸಭಾಂಗಣದಲ್ಲಿ ಬುಧವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
“ಆಗಸ್ಟ್ ೬ ರವರೆಗೆ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು, ಸಲಹೆಗಳನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವರು ಹಾಗೂ ನನಗೆ ಬರೆಯಬಹುದು. ಇದನ್ನು ವಿಧಾನಸಭೆಯಲ್ಲಿ ಮಂಡಿಸಲಾಗುವುದು. ಆಸ್ತಿ ಕೊಂಡವರಿಗೆ ಅನುಕೂಲವಾಗುವಂತೆ ಈ ವಿಧೇಯಕವನ್ನು ಜಾರಿಗೆ ತರಲಾಗುತ್ತಿದೆ. ಎಲ್ಲಾ ಪಕ್ಷದ ನಾಯಕರಿಗೂ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಅವಕಾಶ ನೀಡಲಾಗಿದೆ. ಶಾಸಕರೂ ತಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು. ಏಕಪಕ್ಷೀಯವಾಗಿ ನಾನು ನಿರ್ಧಾರ ಮಾಡಲು ಸಾಧ್ಯವಿಲ್ಲ” ಎಂದರು.
“ನಿಮ್ಮ ಯಾವುದೇ ಸಲಹೆ ಸೂಚನೆಗಳಿದ್ದರೂ ನನಗೆ ಹಾಗೂ ಕೃಷ್ಣ ಬೈರೇಗೌಡರಿಗೆ ನೀಡಿ. ನನ್ನ ಮೊಬೈಲ್ ಸಂಖ್ಯೆ ನೀಡಲು ತಿಳಿಸುತ್ತೇನೆ. ಅದಕ್ಕೆ ನಿಮ್ಮ ಸಲಹೆಗಳನ್ನು ಕಳುಹಿಸಬಹುದು. ಜೊತೆಗೆ ಡೆವಲಪರ್ ಗಳನ್ನು ಕರೆಸಿ ಅವರ ಜೊತೆಯೂ ಮಾತನಾಡಿ ಕಾನೂನು ಏನಿದೆ ಎಂದು ಮನವರಿಕೆ ಮಾಡಲಾಗುವುದು” ಎಂದರು.
“ಬೆAಗಳೂರಿನಲ್ಲಿ ೪೦ ಲಕ್ಷ ಆಸ್ತಿಗಳಿದ್ದು ಈಗಾಗಲೇ ೨೬ ಲಕ್ಷ ಆಸ್ತಿಗಳಿಗೆ ಖಾತೆ ನೀಡಲಾಗಿದೆ. ಒಂದಷ್ಟು ಜನ ಕಾನೂನುಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಮೂರು ಮಹಡಿಗಳಿಗೆ ಅನುಮತಿ ಪಡೆದು ಐದು ಮಹಡಿಗಳನ್ನು ನಿರ್ಮಾಣ ಮಾಡಿದ್ದಾರೆ. ಹೆಚ್ಚಿನವರು ಪ್ರಾಮಾಣಿಕರಿದ್ದು ಅವರು ಕಾನೂನಿನ ಅಡಿ ಕೆಲಸ ಮಾಡಿದ್ದಾರೆ” ಎಂದರು.
“ದೊಡ್ಡ, ದೊಡ್ದ ಬಿಲ್ಡರ್ ಗಳ ವಿಚಾರಕ್ಕಿಂತ ಸಣ್ಣ ಪುಟ್ಟ ಬಿಲ್ಡರ್ ಗಳು ೬೦/೮೦ ಅಥವಾ ಕಂದಾಯ ಭೂಮಿಯಲ್ಲಿ ಕಟ್ಟಡ ನಿರ್ಮಾಣ ಮಾಡಿ ಕಾನೂನು ಮುರಿಯುತ್ತಾರೆ. ಅದರ ಗುಣಮಟ್ಟ ಕೂಡ ಸರಿಯಾಗಿರುವುದಿಲ್ಲ” ಎಂದರು.
“ಒಮ್ಮೆ ಅಪಾರ್ಟ್ ಮೆಂಟ್ ನಿವಾಸಿಗಳಾದ ಮೇಲೆ ಒಪ್ಪಂದ ಮಾಡಿಕೊಳ್ಳುವಾಗಲೇ ಒಂದು ರೀತಿ, ನೋಂದಣಿ ಮಾಡಿಕೊಳ್ಳುವಾಗಲೇ ಇನ್ನೊಂದು ರೀತಿ, ಮನೆ ಸಿಕ್ಕ ಮೇಲೆಯೇ ಮತ್ತೊಂದು ರೀತಿಯಾಗಿ ಬದಲಾವಣೆ ಆಗುವುದು ನೋಡಿ ನನಗೆ ಬೇಸರವಾಗಿದೆ. ಅಪಾರ್‌ಮೆಂಟ್ ಅಸೋಸಿಯೇಷನ್ ಅಲ್ಲಿ ಒಂದಿಬ್ಬರು ತಕರಾರು ಗಿರಾಕಿಗಳು ಸೇರಿಕೊಂಡು ತೊಂದರೆ ತೊಡಕುಗಳನ್ನು ನೀಡುವುದೇ ಅವರ ಕೆಲಸವಾಗುತ್ತದೆ. ಉದಾಹರಣೆಗೆ ನನ್ನ ಅಪಾರ್ಟ್ ಮೆಂಟ್ ಅಲ್ಲಿ ನನ್ನ ಹೆಸರಿಗೆ ನೋಂದಣಿ ಮಾಡಿಕೊಳ್ಳುವ ಮೊದಲೇ ನನ್ನ ಹೆಸರನ್ನೇ ನೋಟಿಸ್ ಬೋರ್ಡ್ ಅಲ್ಲಿ ಹಾಕಿದ್ದರು. ಬೆನ್ನಿಗಾನಹಳ್ಳಿಯಲ್ಲೂ ಇದೇ ರೀತಿ ನನಗೆ ಮಾಡಿದ್ದರು. ಒಳಗೆ ನನ್ನನ್ನ ಬಿಡುವುದಿಲ್ಲ ಎಂದು ಹೇಳಿದ್ದರು. ಇಂತಹ ಅಪಾರ್ಟ್ ಮೆಂಟ್ ಅಸೋಸಿಯೇಷನ್ ಗಳು ಇಲ್ಲಿವೆ? ಎಂದರು.
“ಕಷ್ಟಪಟ್ಟು ನೀವು ಗಳಿಸಿದ ಆಸ್ತಿ ನಿಮಗೇ ಸೇರಬೇಕು ಎಂದು ಆರನೇ ಗ್ಯಾರಂಟಿಯಾಗಿ ಭೂಮಿ ಗ್ಯಾರಂಟಿ ನೀಡಿದ್ದೇವೆ. ಒಂದೇ ಒಂದು ರೂಪಾಯಿ ಲಂಚ ಪಡೆಯದೇ ನಿಮ್ಮ ಹಾಗೂ ಆಸ್ತಿಯ ಪೋಟೋ ಸಮೇತ ಇ ಖಾತೆ ನೀಡುವ ಅತ್ಯುತ್ತಮ ಯೋಜನೆಯನ್ನು ನಾವು ನೀಡಿದ್ದೇವೆ. ಇಡೀ ದೇಶದಲ್ಲಿಯೇ ಅತ್ಯುತ್ತಮ ಯೋಜನೆ ಇದಾಗಿದೆ. ದೇಶದ ಯಾವುದೇ ನಗರದಲ್ಲಿ ಇಂತಹ ಯೋಜನೆ ಇದೆಯೇ ಎಂದು ನಿಮ್ಮ ಸ್ನೇಹಿತರನ್ನು ಕೇಳಿನೋಡಿ” ಎಂದರು.
“ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ನಮ್ಮ ಸರ್ಕಾರ ಮುಂದಾಗಿದೆ. ಅದಕ್ಕೆ ಸೂಕ್ತ ಸ್ಥಳ ಹುಡುಕಲಾಗುತ್ತಿದೆ. ಬೆಂಗಳೂರು ನಿಮ್ಮೆಲ್ಲರ ಹೃದಯದಂತಿದೆ. ಜೊತೆಗೆ ಭಾರತದ ಹೃದಯದಂತೆ ಕೆಲಸ ಮಾಡುತ್ತಿದೆ” ಎಂದು ತಿಳಿಸಿದರು.


