ಪಾವಗಡ: ತಾಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಜೋಡಿ ಹಚ್ಚಮ್ಮನಹಳ್ಳಿ ಸರ್ವೆ ನಂಬರ್ ೮/೧ರ ವ್ಯಾಪ್ತಿಯ ಮೇಗಳಪಾಳ್ಯ ಗ್ರಾಮದ ಸಮೀಪ, ಆಂಜನೇಯ ದೇವಸ್ಥಾನದ ಹಿಂಭಾಗದಲ್ಲಿ ರೈತನ ಅಡಿಕೆ ಗಿಡಗಳನ್ನು ಕಿಡಿಗೇಡಿಗಳು ಕಡಿದು ನಾಶಪಡಿಸಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ವೈ.ಎನ್.ಹೊಸಕೋಟೆ ಗ್ರಾಮದ ರೈತ ಹೆಚ್.ಪಿ. ಕೃಷ್ಣಪ್ಪ (ಗ್ಯಾಸ್ ಕಿಷ್ಟಪ್ಪ) ಅವರು ಒಂದೂವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ ಸುಮಾರು ೬೦ ಅಡಿಕೆ ಗಿಡಗಳನ್ನು ಕಿಡಿಗೇಡಿಗಳು ಮಚ್ಚಿನಿಂದ ಕಡಿದು ನಾಶಪಡಿಸಿದ್ದಾರೆ.
ಫಸಲು ನೀಡುವ ಹಂತಕ್ಕೆ ಬಂದಿದ್ದ ಅಡಿಕೆ ಗಿಡಗಳನ್ನು ದುಷ್ಕರ್ಮಿಗಳು ಕಡಿದು ಹಾಕಿರುವುದರಿಂದ ರೈತನಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ಸ್ಥಳೀಯ ರೈತರು ತಿಳಿಸಿದ್ದಾರೆ.
ಘಟನೆ ಕುರಿತು ವೈ.ಎನ್.ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಅಡಿಕೆ ಗಿಡಗಳನ್ನು ಕಡಿದು ನಾಶಪಡಿಸಿದವರನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

(Visited 1 times, 1 visits today)