ಹುಳಿಯಾರು: ಮಳೆಯಿಲ್ಲದೆ ಹಾಗೂ ಕೆರೆಗಳಿಗೆ ನೀರು ಹರಿಯದೆ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಹೇಮಾವತಿ ಯೋಜನೆಯಲ್ಲಿರುವಂತೆ ಚಿಕ್ಕನಾಯಕನಹಳ್ಳಿ ತಾಲೂಕಿನ ನವಿಲೆ ಕೆರೆಗೆ ನೀರು ಹರಿಸುವಂತೆ ರೈತ ಸಾವಶೆಟ್ಟಿಹಳ್ಳಿಯ ಮಳಸಿದ್ದಪ್ಪ ಮನವಿ ಮಾಡಿದ್ದಾರೆ.
ಮಳೆಯಿಲ್ಲದೆ ಬರಿದಾಗಿರುವ ನವಿಲೆಕೆರೆಯ ಬಳಿ ನಿಂತು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊAಡಿರುವ ಮರಳಸಿದ್ದಪ್ಪ ತುಮಕೂರು ಜಿಲ್ಲೆಯ ಪಾಲಿನ ಹೇಮಾವತಿ ನೀರು ಹರಿಸುವಲ್ಲಿ ವಿಫಲರಾಗಿರುವ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಏಳು ಜನ ಶಾಸಕರು ಮತ್ತು ಉಸ್ತುವಾರಿ ಸಚಿವರು ಗೆದ್ದಿದ್ದರೂ, ಯಾರು ಕೂಡ ವಿಧಾನಸೌಧದಲ್ಲಿ ತುಮಕೂರು ಜಿಲ್ಲೆಗೆ ನೀರು ಬೇಕೆಂದು ಧ್ವನಿ ಎತ್ತುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ. ಚುನಾವಣೆ ಬಂದಾಗ ಮತ ಕೇಳಲು ಬರುವ ರಾಜಕಾರಣಿಗಳು, ರೈತರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಮತ್ತು ಚುನಾವಣೆಯ ನಂತರ ರೈತರ ಸಮಸ್ಯೆಗಳನ್ನು ಮರೆತುಬಿಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರ ಹೋರಾಟದ ಫಲವಾಗಿ ನವಿಲೆ ಕೆರೆಗೆ ಚಾನಲ್ ಮಾಡಲಾಗಿದೆ. ಆದರೆ ಹೇಮಾವತಿ ನೀರು ಮಾತ್ರ ಇನ್ನೂ ಹರಿದಿಲ್ಲ. ಈವರ್ಷ ಮಳೆಯೂ ಸಹ ಇಲ್ಲದಾಗಿ ಕೆರೆ ಸಂಪೂರ್ಣ ಒಳಗಿದೆ, ಪರಿಣಾಮ ನೀರಿಲ್ಲದೆ ದನ-ಕರುಗಳು, ಕುರಿಮೇಕೆಗಳನ್ನು ರೈತ ಮಾರಿಕೊಳ್ಳುತ್ತಿದ್ದಾನೆ. ಅಂತರ್ಜಲ ಬರಿದಾಗಿ ತೆಂಗು-ಅಡಿಕೆಗೆ ನೀರಿಲ್ಲದೆ ಒಣಗುತ್ತಿವೆ ಎಂದು ಸಮಸ್ಯೆ ವಿವರಿಸಿದ್ದಾರೆ.
ರೈತರ ಪರವಾಗಿ ಜನಪ್ರತಿನಿಧಿಗಳು ಇದ್ದರೆ ಮುಂದಿನ ಚುನಾವಣೆಯಲ್ಲಿ ರೈತರು ನಿಮ್ಮ ಪರ ಇರುತ್ತಾರೆ. ಇಲ್ಲದಿದ್ದರೆ ತಕ್ಕ ಪಾಠ ಕಲಿಸುತ್ತಾರೆ. ಹಾಗಾಗಿ ತುಮಕೂರು ಜಿಲ್ಲೆಗೆ ಹರಿಯಬೇಕಾದ ಹೇಮಾವತಿ ನೀರನ್ನು ಹರಿಸಿ ರೈತರ ಬದುಕನ್ನು ಉಳಿಸಿಕೊಡಬೇಕೆಂದು ಮರುಳಸಿದ್ಧಪ್ಪ ಮನವಿ ಮಾಡಿದ್ದಾರೆ.
(Visited 1 times, 1 visits today)



