
ಚಿಕ್ಕನಾಯಕನಹಳ್ಳಿ: ತಾಲೂಕಿನಾದ್ಯಂತ ಬೀದಿನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಮಿತಿಮೀರುತ್ತಿದ್ದು, ಸಾರ್ವಜನಿಕರು ಬೀದಿಯಲ್ಲಿ ಓಡಾಡಲು ಭಯಪಡುವಂತಹ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇಲ್ಲಿನ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನಾಯಿಗಳ ಹಿಂಡು ಸಾರ್ವಜನಿಕರು, ವೃದ್ಧರು ಹಾಗೂ ಮುಖ್ಯವಾಗಿ ಶಾಲಾ ಮಕ್ಕಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದ್ದು, ನಾಗರಿಕರ ಜೀವಕ್ಕೆ ಕಂಟಕವಾಗಿ ಪರಿಣಮಿಸಿದೆ.
ಪುರಸಭಾ ವ್ಯಾಪ್ತಿ ಸೇರಿದಂತೆ ತಾಲೂಕಿನ ಒಟ್ಟು ೨೭ ಗ್ರಾಮ ಪಂಚಾಯಿತಿಗಳು ಹಾಗೂ ಹುಳಿಯಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ವ್ಯಾಪಕವಾಗಿದೆ. ಪಶು ಸಂಗೋಪನಾ ಇಲಾಖೆಯ ಅಧಿಕೃತ ಅಂಕಿ-ಅAಶಗಳ ಪ್ರಕಾರ, ಪಟ್ಟಣ ಪ್ರದೇಶದಲ್ಲಿ ೨೧೧೬ ಹಾಗೂ ಗ್ರಾಮೀಣ ಭಾಗದಲ್ಲಿ ೪೧೨೯ ಸೇರಿದಂತೆ ತಾಲೂ ಕಿನಲ್ಲಿ ಒಟ್ಟು ೬೨೪೫ ನಾಯಿಗಳಿವೆ. ಕಳೆದ ೨೦೨೫ ರ ಅಕ್ಟೋಬರ್‌ನಿಂದ ಡಿಸೆಂಬರ್ ಅವಧಿಯಲ್ಲೇ ಬರೋಬ್ಬರಿ ೭೧೩ ನಾಯಿದಾಳಿ ಪ್ರಕರಣಗಳು ದಾಖಲಾಗಿದ್ದು, ೨೦೨೫-೨೦೨೬ ರ ಸಾಲಿನ ಡಿಸೆಂಬರ್ ಅಂತ್ಯದ ವೇಳೆಗೆ ತಾಲೂಕಿನ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟು ೨೦೦೦ ಕ್ಕೂ ಹೆಚ್ಚು ಪ್ರಕರಣಗಳು ನೋಂದಣಿಯಾಗಿರುವುದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿಯಾಗಿದೆ.
ಬಾಲಕನ ಮೇಲೆ ದಾಳಿ-ಆಸ್ಪತ್ರೆಗೆ ಶಾಸಕರ ಭೇಟಿ: ಇತ್ತೀಚೆಗಷ್ಟೇ ಪಟ್ಟಣದ ಆದಿ ಅಂಜನೇಯಸ್ವಾಮಿ ದೇವಾಲಯದ ಬಳಿ ಆಟವಾಡುತ್ತಿದ್ದ ಸಣ್ಣ ಬಾಲಕನೊಬ್ಬನ ಮೇಲೆ ಬೀದಿ ನಾಯಿಗಳ ಹಿಂಡು ಏಕಾಏಕಿ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿದೆ. ಪ್ರಸ್ತುತ ಬಾಲಕನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯ ಶಾಸಕರಾದ ಸಿ.ಬಿ. ಸುರೇಶ್ ಬಾಬು ಅವರು ಆಸ್ಪತ್ರೆಗೆ ಭೇಟಿ ನೀಡಿ ಮಗುವಿನ ಆರೋಗ್ಯ ವಿಚಾರಿಸಿದರು. ಗಾಯಾಳು ಬಾಲಕನಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಒದಗಿಸುವಂತೆ ವೈದ್ಯರಿಗೆ ಸೂಚಿಸಿದ ಅವರು, ಪುರಸಭೆಯ ಮುಖ್ಯ ಅಧಿಕಾರಿಯೊಂದಿಗೆ ತುರ್ತು ಮಾತುಕತೆ ನಡೆಸಿ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಆದೇಶ ನೀಡಿದರು.


