ತುಮಕೂರು: ರೈಲ್ವೆ ಇಲಾಖೆಯ ಕನ್ನಡ ಕಡೆಗಣನೆ ಮುಂದುವರೆದಿದೆ. ಈ ತಿಂಗಳ ೨೫ರಂದು ಕರ್ನಾಟಕದಲ್ಲಿಯೇ ನಡೆಯುವ ನೈರುತ್ಯ ರೈಲ್ವೆಯ ಗೂಡ್ಸ್ ಟ್ರೇನ್ ಮ್ಯಾನೇಜರ್ ಹುದ್ದೆ ಪದೋನ್ನತಿ ಪರೀಕ್ಷೆಯನ್ನು ಕನ್ನಡಕ್ಕೆ ಅವಕಾಶ ನೀಡದೆ, ಹಿಂದಿ, ಇಂಗ್ಲೀಷ್ ಭಾಷೆಗೆ ಮಾನ್ಯತೆ ನೀಡಿದೆ. ರೈಲ್ವೆ ಇಲಾಖೆ ಈ ಮೂಲಕ ಕನ್ನಡಗರಿಗೆ ದ್ರೋಹ ಮಾಡಲು ಹೊರಟಿದೆ ಎಂದು ಟೀಕಿಸಿದ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡರ ಬಣ) ಜಿಲ್ಲಾಧ್ಯಕ್ಷ ಅರುಣ್ ಕೃಷ್ಣಯ್ಯ, ಇಲಾಖೆ ಧೋರಣೆ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈಲ್ವೆ ಇಲಾಖೆಯ ರಾಜ್ಯ ಸಚಿವರಾಗಿರುವ ತುಮಕೂರು ಸಂಸದ ವಿ.ಸೋಮಣ್ಣ ಅವರಿಗೆ ಈ ವಿಚಾರ ಗಮನಕ್ಕೆ ತಂದರೂ ಅವರು ಇಲಾಖೆ ಕ್ರಮವನ್ನು ಸಮರ್ಥಿಸಿಕೊಂಡಿರುವುದು ದುರಾದೃಷ್ಟಕರ.ಕೇಂದ್ರ ಸರ್ಕಾರದ ಇಲಾಖೆಗಳ ಕನ್ನಡ ನಿರ್ಲಕ್ಷದ ಬಗ್ಗೆ ಸಂಘಟನೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡರು ರಾಜ್ಯದ ಎಲ್ಲಾ ಸಂಸದರು, ಸಂಬAಧಿಸಿದ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದರೂ ಕೇಂದ್ರ ಸರ್ಕಾರ ತನ್ನ ಕನ್ನಡ ವಿರೋಧಿ ಚಾಳಿ ಮುಂದುವರೆಸಿದೆ ಎಂದು ಆರೋಪಿಸಿದರು.
ನೈರುತ್ಯ ರೈಲ್ವೆಯು ಮತ್ತೊಮ್ಮೆ ಕನ್ನಡಿಗರ ಬೆನ್ನಿಗೆ ಚೂರಿ ಹಾಕುವ ಕೆಲಸಕ್ಕೆ ಮುಂದಾಗಿದೆ.ಕರ್ನಾಟಕದಲ್ಲೇ ನಡೆಯುತ್ತಿರುವ ಗೂಡ್ಸ್ ಟ್ರೇನ್ ಮ್ಯಾನೇಜರ್ ಹುದ್ದೆಯ ಪದೋನ್ನತಿ ಪರೀಕ್ಷೆಯನ್ನು ಕೇವಲ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನಡೆಸಲು ನಿರ್ಧರಿಸಿರುವುದು ಕನ್ನಡಿಗರ ವಿರುದ್ಧ ನಡೆಸುತ್ತಿರುವ ವ್ಯವಸ್ಥಿತ ದಾಳಿಯಾಗಿದೆ. ಇದು ಕನ್ನಡಿಗರ ಉದ್ಯೋಗ ಹಕ್ಕು, ಬಡ್ತಿಯ ಹಕ್ಕು ಮತ್ತು ಭಾಷಾ ಸ್ವಾಭಿಮಾನದ ಮೇಲೆ ನಡೆಸುತ್ತಿರುವ ಬಹಿರಂಗ ಯುದ್ಧವಾಗಿದೆ. ೨೫ರಂದು ನೈರುತ್ಯ ರೈಲ್ವೆಯ ಹುಬ್ಬಳ್ಳಿ, ಬೆಂಗಳೂರು ಹಾಗೂ ಮೈಸೂರು ವಿಭಾಗಗಳಲ್ಲಿ ಗೂಡ್ಸ್ಟ್ರೇನ್ ಮ್ಯಾನೇಜರ್ ಹುದ್ದೆಗಳಿಗಾಗಿ ಕಂಪ್ಯೂಟರ್ ಆಧಾರಿತ ಪದೋನ್ನತಿ ಪರೀಕ್ಷೆ ನಡೆಸಲು ರೈಲ್ವೆ ಇಲಾಖೆ ಸಿದ್ಧತೆ ನಡೆಸಿದೆ. ರೈಲ್ವೆಯ ಅಧಿಕೃತ ದಾಖಲೆಗಳ ಪ್ರಕಾರ ಹುಬ್ಬಳ್ಳಿಯಲ್ಲಿ ೧೭೯, ಬೆಂಗಳೂರಿನಲ್ಲಿ ೧೧೨ ಹಾಗೂ ಮೈಸೂರಿನಲ್ಲಿ ೧೩೯ ಹುದ್ದೆಗಳಿಗೆ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಆದರೆ ಕನ್ನಡಿಗ ನೌಕರರಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯುವ ಅವಕಾಶವನ್ನು ಉದ್ದೇಶ ಪೂರ್ವಕವಾಗಿ ನಿರಾಕರಿಸಲಾಗಿದೆ.ಇದು ಕನ್ನಡಿಗರನ್ನು ಎರಡನೇ ದರ್ಜೆಯ ಪ್ರಜೆಗಳಂತೆ ಕಾಣುವ ಮನೋಭಾವವಾಗಿದೆ ಎಂದು ದೂರಿದರು.
ರೈಲ್ವೆ ಇಲಾಖೆ ತಕ್ಷಣವೇ ತನ್ನ ನಿರ್ಧಾರವನ್ನು ಹಿಂಪಡೆದು ಪರೀಕ್ಷೆಯನ್ನು ಕನ್ನಡದಲ್ಲೂ ನಡೆಸುವ ಕುರಿತು ಆದೇಶ ಹೊರಡಿಸಬೇಕು.ಇಲ್ಲವಾದಲ್ಲಿ ೨೫ರಂದು ನಡೆಯುವ ಪರೀಕ್ಷೆಯನ್ನು ವಿರೋಧಿಸಿ ರಾಜ್ಯದಾದ್ಯಂತ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪರೀಕ್ಷೆಯನ್ನು ತಕ್ಷಣವೇ ಮುಂದೂಡಬೇಕು. ಪರೀಕ್ಷೆಯಲ್ಲಿ ಕನ್ನಡ ಭಾಷೆಯನ್ನು ಸೇರಿಸಿ ಹೊಸ ವೇಳಾಪಟ್ಟಿ ಪ್ರಕಟಿಸಬೇಕು. ಕರ್ನಾಟಕದಲ್ಲಿ ನಡೆಯುವ ಎಲ್ಲಾ ರೈಲ್ವೆ ನೇಮಕಾತಿ ಮತ್ತು ಪದೋನ್ನತಿ ಪರೀಕ್ಷೆಗಳಲ್ಲಿ ಕನ್ನಡವನ್ನು ಕಡ್ಡಾಯ ಆಯ್ಕೆಯಾಗಿ ಸೇರಿಸಬೇಕು ಎಂದು ಅರುಣ್ ಕೃಷ್ಣಯ್ಯ ಒತ್ತಾಯಿಸಿದರು.
ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಚೆನ್ನಬಸಪ್ಪ, ಪ್ರಧಾನ ಕಾರ್ಯದರ್ಶಿ ಅಂಬರೀಷ್, ತಾಲ್ಲೂಕು ಅಧ್ಯಕ್ಷ ಲಿಂಗರಾಜು, ಸಂಘಟನಾ ಕಾರ್ಯದರ್ಶಿ ಮಿಸ್ಬಾ ಬಾರಿ, ಯುವ ಘಟಕ ಅಧ್ಯಕ್ಷ ಪವನ್, ಕಾರ್ಯದರ್ಶಿ ಗಿರೀಶ್, ಮುಖಂಡರಾದ ದಿಲೀಪ್, ನವೀನ್, ಜುನೈದ್, ದಿಲೀಪ್. ಅಫ್ಜಲ್ ಮೊದಲಾದವರು ಹಾಜರಿದ್ದರು.

(Visited 1 times, 1 visits today)