
ತುಮಕೂರು: ಭಾರತೀಯ ಪುರಾಣಗಳ ನೈತಿಕ ಮೌಲ್ಯಗಳನ್ನು ಸಾರುವುದಕ್ಕೆ ಯಕ್ಷಗಾನ ತಾಳಮದ್ದಳೆ ಒಂದು ಸಶಕ್ತ ಮಾಧ್ಯಮ. ಅದು ನಮ್ಮ ಸಮಾಜದ ಅಂತಃಸತ್ವವನ್ನು ಬಲಗೊಳಿಸಬಲ್ಲುದು ಎಂದು ಉದ್ಯಮಿ ಡಾ. ಹೆಚ್.ಜಿ.ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಯಕ್ಷದೀವಿಗೆ ಸಂಸ್ಥೆಯು ನಗರದ ಬಯಲಾಂಜನೇಯ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ಯಕ್ಷಗಾನ ತಾಳಮದ್ದಳೆ ಪರಿಚಯ ಸರಣಿಯ ಮುಕ್ತಾಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಕ್ಷಗಾನ ಬಯಲಾಟವುಒಂದು ಪರಿಣಾಮಕಾರಿ ಸಂವಹನ ಮಾಧ್ಯಮ.ಅದರ ಇನ್ನೊಂದು ರೂಪವಾದ ತಾಳಮದ್ದಳೆಯು ಮೇಲ್ಮಟ್ಟದ ಜ್ಞಾನವನ್ನು ಜನಸಾಮಾನ್ಯರಿಗೆ ತಲುಪಿಸುವ ಸಾಮರ್ಥ್ಯವನ್ನು ಹೊಂದಿದೆ.ಕರಾವಳಿ, ಮಲೆನಾಡಿನ ಈ ಕಲೆ ಬಯಲು ಸೀಮೆಯಲ್ಲೂ ಪಸರಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಭಾರತೀಯ ಮಹಾ ಕಾವ್ಯಗಳು ಹಾಗೂ ಪುರಾಣಗಳು ಜ್ಞಾನ ಹಾಗೂ ನೈತಿಕ ಮೌಲ್ಯಗಳ ಆಗರಗಳು. ಸಮಕಾಲೀನ ಸಮಾಜಕ್ಕೆ ಬೇಕಾದ ಎಲ್ಲ ಶಿಕ್ಷಣ ಅವುಗಳಲ್ಲಿ ಹುದುಗಿಕೊಂಡಿದೆ.ಆಧುನಿಕತೆಯ ಮಧ್ಯೆ ಬದುಕುತ್ತಿರುವ ಜನರಿಗೆ ಯಕ್ಷಗಾನ ತಾಳಮದ್ದಳೆಗಳು ನಿರಾಳತೆಯನ್ನು ನೀಡುವುದು ಮಾತ್ರವಲ್ಲದೆ ದೈನಂದಿನ ಬದುಕಿನ ಮೌಲ್ಯಗಳನ್ನೂ ಉಣಬಡಿಸುತ್ತವೆ ಎಂದರು.
ಯಕ್ಷದೀವಿಗೆ ಕೋಶಾಧಿಕಾರಿ ಡಾ.ಸಿಬಂತಿ ಪದ್ಮನಾಭ ಮಾತನಾಡಿ, ಯಕ್ಷಗಾನ ತಾಳಮದ್ದಳೆ ಲುಪ್ತ ನಾಟ್ಯ ಎಂದೇ ಪ್ರಸಿದ್ಧವಾಗಿದೆ. ನಾಟ್ಯ ಹಾಗೂ ವೇಷ ಭೂಷಣಗಳಿಲ್ಲದೆ ಕೇವಲ ಮಾತು ಹಾಗೂ ಹಿಮ್ಮೇಳದ ಸಾಂಗತ್ಯದಲ್ಲಿ ನಡೆಯುವ ಈ ರಂಗಪ್ರಕಾರ, ಪ್ರೇಕ್ಷಕರಲ್ಲಿ ಭಾವ ಪ್ರಚೋದನೆ ಹಾಗೂ ಆತ್ಮಾವಲೋಕನಕ್ಕೆ ಪ್ರೇರಣೆಯಾಗುತ್ತದೆ. ಈ ಪ್ರಕಾರವನ್ನು ಪರಿಚಯಿಸುವ ಉದ್ದೇಶದಿಂದ ತುಮಕೂರಿನ ವಿವಿಧೆಡೆಗಳಲ್ಲಿ ವಿವಿಧ ಪ್ರಸಂಗಗಳನ್ನು ಎಂಟು ದಿನ ನಿರಂತರವಾಗಿ ಹಮ್ಮಿಕೊಳ್ಳಲಾಯಿತು ಎಂದರು. ತುಮಕೂರು ವಿವಿಯ ಕನ್ನಡ ಪ್ರಾಧ್ಯಾಪಕ ಡಾ.ಶಿವಣ್ಣ ಎಸ್. ಬೆಳವಾಡಿಇದೇ ಸಂದರ್ಭ ಮಾತನಾಡಿದರು
ದಕ್ಷಿಣ ಕನ್ನಡ ಮಿತ್ರ ವೃಂದದ ಕಾರ್ಯದರ್ಶಿ ವೆಂಕಟೇಶ್ ಕಾರಂತ.ಎA.ಎಸ್, ಬಯಲಾಂಜನೇಯ ದೇವಾಲಯದ ಅರ್ಚಕರಾದ ಮಹೇಶ್, ಯಕ್ಷದೀವಿಗೆ ಅಧ್ಯಕ್ಷೆ ಡಾ. ಆರತಿ ಪಟ್ರಮೆ, ಕಾರ್ಯದರ್ಶಿ ಶಶಾಂಕ ಅರ್ನಾಡಿ ಉಪಸ್ಥಿತರಿದ್ದರು. ವಿವಿಧಯಕ್ಷಗಾನ ಪ್ರಸಂಗಗಳಲ್ಲಿ ಹಿಮ್ಮೇಳ ಕಲಾವಿದರಾಗಿ ಪುತ್ತೂರು ರಮೇಶ್ ಭಟ್, ದೀಪಕ್ ತುಳುಪುಳೆ, ಪದ್ಯಾಣ ಕೇಶವ ಭಟ್, ಅವಿನಾಶ್ ಬೈಪಾಡಿತ್ತಾಯ, ವೇಣು ಮಾಂಬಾಡಿ, ಪೃಥ್ವಿ ಬಡೆಕ್ಕಿಲ, ಪ್ರದೀಪ್ ಬಿ., ಕೀರ್ತನ್, ಸಂವೃತ ಶರ್ಮಾ, ಮುಮ್ಮೇಳ ಕಲಾವಿದರಾಗಿ ಉಜಿರೆ ಅಶೋಕ ಭಟ್, ಗಣರಾಜ ಕುಂಬ್ಳೆ, ರಾಧಾ ಕೃಷ್ಣ ಕಲ್ಚಾರ್, ರಾಮ ಜೋಯಿಸ ಬೆಳ್ಳಾರೆ, ಸುಧನ್ವಾ ದೇರಾಜೆ, ವನಿತಾ ಶ್ಯಾಮ ಪ್ರಸಾದ್, ಮಾಲತಿ ಪಟ್ರಮೆ, ನಿರ್ಮಲಾ ಗಾಂವ್ಕರ್ ಇತರರಿದ್ದರು.



