ಪಾವಗಡ: ಸಾರ್ವಜನಿಕರ ಜೀವ ರಕ್ಷಿಸಬೇಕಾದ ಪುರಸಭೆ ಆಡಳಿತ ಸಂಪೂರ್ಣ ಕಣ್ಣು ಮುಚ್ಚಿ ಕುಳಿತಿದೆಯೇ? ಪಟ್ಟಣದ ರಸ್ತೆಗಳಲ್ಲಿ ಹೆಜ್ಜೆ ಇಡಲು ಭಯಪಡುವ ವಾತಾವರಣ ನಿರ್ಮಾಣವಾಗಿದ್ದರೂ ಅಧಿಕಾರಿಗಳು ಕುಂಭಕರ್ಣ ನಿದ್ರೆಯಲ್ಲಿದ್ದಾರೆಯೇ? ಶನಿವಾರ ರಾತ್ರಿ ಬೀದಿನಾಯಿಗಳ ದಾಳಿಗೆ ಸಿಲುಕಿ ವೃದ್ಧರೊಬ್ಬರು ಆಸ್ಪತ್ರೆ ಪಾಲಾಗಿರುವ ಘಟನೆ ಪುರಸಭೆಯ ನಿಷ್ಕಿçಯತೆಯನ್ನು ಎತ್ತಿಹಿಡಿದಿದೆ.
ಪಾವಗಡ ಪುರಸಭೆಯ ಘೋರ ಬೇಜವಾಬ್ದಾರಿಗೆ ತಾಲೂಕಿನ ನಾಗರಿಕರು ಬಲಿಯಾಗುತ್ತಿದ್ದಾರೆ! ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿ ಮಿತಿಮೀರಿ ಸಾರ್ವಜನಿಕರು ರಸ್ತೆಗೆ ಇಳಿಯಲು ಭಯಪಡುವ ವಾತಾವರಣ ನಿರ್ಮಾಣವಾಗಿದ್ದರೂ, ಪುರಸಭೆ ಆಡಳಿತ ಯಂತ್ರ ಮಾತ್ರ ಜಾಣಕುರುಡು ಪ್ರದರ್ಶಿಸುತ್ತಿದೆ. ಶನಿವಾರ ರಾತ್ರಿ ಬಾಪೂಜಿ ಶಾಲೆಯ ಬಳಿ ೧೫ ನಾಯಿಗಳ ಹಿಂಡು ಭೀಕರ ದಾಳಿ ನಡೆಸಿ ಹಣ್ಣಿನ ವ್ಯಾಪಾರಿಯೊಬ್ಬರನ್ನು ತೀವ್ರವಾಗಿ ಗಾಯಗೊಳಿಸಿದ್ದು, ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದೆ.
ಪಟ್ಟಣದ ಆದರ್ಶ ನಗರದ ನಿವಾಸಿಯೂ ಹಣ್ಣಿನ ವ್ಯಾಪಾರಿಯೂ ಆದ ನರಸಿಂಹರಾಜು ಅವರು ಶನಿವಾರ ರಾತ್ರಿ ಸುಮಾರು ೮:೦೦ ಗಂಟೆಯ ವೇಳೆಗೆ ಕೆಲಸ ಮುಗಿಸಿ ಬಾಪೂಜಿ ಶಾಲೆಯ ಮಾರ್ಗವಾಗಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಬೀದಿಯಲ್ಲಿದ್ದ ಸುಮಾರು ೧೦ ರಿಂದ ೧೫ ಬೀದಿನಾಯಿಗಳ ಹಿಂಡು ಏಕಾಏಕಿ ಅವರ ಮೇಲೆ ಎರಗಿ, ದೇಹದಾದ್ಯಂತ ಕಡಿದು ತೀವ್ರ ರಕ್ತಸಿಕ್ತಗೊಳಿಸಿವೆ.
ನರಸಿಂಹರಾಜು ಅವರ ಆರ್ತನಾಧ ಕೇಳಿ ಧಾವಿಸಿದ ಸ್ಥಳೀಯರು ನಾಯಿಗಳನ್ನು ಬೆದರಿಸಿ ಅವರ ಪ್ರಾಣ ರಕ್ಷಿಸಿದ್ದಾರೆ. ತಕ್ಷಣವೇ ಅವರನ್ನು ಪಾವಗಡದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಆದರೆ ಗಾಯಗಳು ತೀವ್ರವಾಗಿದ್ದರಿಂದ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಸ್ತುತ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ದಿನ ಪಟ್ಟಣದ ಮತ್ತೊಂದು ಭಾಗದಲ್ಲೂ ಬೀದಿನಾಯಿಗಳು ಮತ್ತೊಬ್ಬ ವ್ಯಕ್ತಿಯ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.
ಪುರಸಭೆಯ ಘೋರ ನಿರ್ಲಕ್ಷ÷್ಯ, ಕುಂಭಕರ್ಣ ನಿದ್ರೆಯಲ್ಲಿ ಅಧಿಕಾರಿಗಳು!: ಪಟ್ಟಣದ ಮೂಲೆ ಮೂಲೆಗಳಲ್ಲೂ ಬೀದಿನಾಯಿಗಳ ಹಿಂಡು ನಾಗರಿಕರನ್ನು ಅಟ್ಟಾಡಿಸುತ್ತಿದ್ದರೂ, ಪುರಸಭೆ ಅಧಿಕಾರಿಗಳು ಸಂಪೂರ್ಣವಾಗಿ ನಿಸ್ತೇಜಗೊಂಡಿದ್ದಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ವೃದ್ಧರು ರಸ್ತೆಯಲ್ಲಿ ಹೆಜ್ಜೆ ಇಡಲೂ ಮುಜುಗರಪಡುವ ಸ್ಥಿತಿ ಎದುರಾಗಿದೆ.
ಇನ್ನಾದರೂ ಪುರಸಭೆ ಆಡಳಿತ ಕಣ್ಣು ಮುಚ್ಚಿ ಕುಳಿತುಕೊಳ್ಳದೆ, ತಕ್ಷಣವೇ ಪಟ್ಟಣದಲ್ಲಿ ಬೀದಿನಾಯಿಗಳನ್ನು ಹಿಡಿಯಲು ವಿಶೇಷ ಕಾರ್ಯಾಚರಣೆ ನಡೆಸಬೇಕು. ತಕ್ಷಣವೇ ಸಂತಾನಶಕ್ತಿ ಹರಣ ಚಿಕಿತ್ಸೆ ಕೈಗೊಂಡು ಸಾರ್ವಜನಿಕರ ಸುರಕ್ಷತೆಗೆ ಸೂಕ್ತ ಕ್ರಮ ವಹಿಸಬೇಕು. ಇಲ್ಲವಾದಲ್ಲಿ ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಸ್ಥಳೀಯ ನಿವಾಸಿಗಳು ಎಚ್ಚರಿಸಿದ್ದಾರೆ.
ಒಟ್ಟಿನಲ್ಲಿ ಪಟ್ಟಣದಲ್ಲಿ ಬೀದಿನಾಯಿಗಳ ಭಯಾನಕ ವಾತಾವರಣ ಸೃಷ್ಟಿಯಾಗಿದ್ದು, ನಾಗರಿಕರು ದಿನನಿತ್ಯ ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ. ಇನ್ನಾದರೂ ಸ್ಥಳೀಯ ಪುರಸಭೆ ಹಾಗೂ ಸಂಬAಧಪಟ್ಟ ಅಧಿಕಾರಿಗಳು ಕುಂಭಕರ್ಣ ನಿದ್ರೆಯಿಂದ ಎಚ್ಚೆತ್ತುಕೊಂಡು ಬೀದಿನಾಯಿಗಳ ನಿಯಂತ್ರಣಕ್ಕೆ ತಕ್ಷಣದ ಕ್ರಮ ವಹಿಸಬೇಕಿದೆ. ಇಲ್ಲವಾದಲ್ಲಿ ಮುಂದಾಗುವ ಅಪಾಯಗಳಿಗೆ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಪುರಸಭೆ ಆಡಳಿತವೇ ನೇರ ಹೊಣೆಯಾಗಲಿದೆ.
(Visited 1 times, 1 visits today)



