ತುಮಕೂರು: ತುಮಕೂರು ತಾಲೂಕು ಹರಳೂರಿನ ಜಂಗಮ ಮಠ ಸುಕ್ಷೇತ್ರದಲ್ಲಿ ಕೇಂದ್ರದ ಜಲಶಕ್ತಿ ಮತ್ತು ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರ ಹುಟ್ಟು ಹಬ್ಬವನ್ನು ವಿ.ಸೋಮಣ್ಣ ಅಭಿಮಾನಿ ಬಳಗದಿಂದ ಆಯೋಜಿಸಲಾಗಿತ್ತು.
ಹರಳೂರಿನ ಜಂಗಮ ಮಠದಲ್ಲಿ ಮಠಾಧ್ಯಕ್ಷರಾದ ಶ್ರೀಶ್ರೀ ಚನ್ನಬಸವ ಸ್ವಾಮಿಜಿ ಅವರ ದಿವ್ಯ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಠದ ವತಿಯಿಂದ ನಡೆಯುತ್ತಿರುವ ಶ್ರೀ ಶಿವಕುಮಾರ ಸ್ವಾಮೀಜಿ ಅನಾಥಾಲಯದ ಮಕ್ಕಳಿಗೆ ಉಚಿತವಾಗಿ ಲೇಖನ ಸಾಮಗ್ರಿಗಳನ್ನು ನೀಡಿ, ಮಠದ ಆವರಣದಲ್ಲಿ ಗಿಡ ನೆಟ್ಟು, ಮಠದ ಮಕ್ಕಳಿಗೆ ಬೆಳಗಿನ ಉಪಹಾರ ನೀಡುವ ಮೂಲಕ ಕೇಂದ್ರ ಸಚಿವ ವಿ.ಸೋಮಣ್ಣ ಅವರ ಹುಟ್ಟು ಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು.
ಹರಳೂರಿನ ಜಂಗಮ ಮಠದಲ್ಲಿ ಆಯೋಜಿಸಿದ್ದ ಕೇಂದ್ರ ಸಚಿವ ವಿ.ಸೋಮಣ್ಣ ಅವರ ಹುಟ್ಟು ಹಬ್ಬಕ್ಕೆ ದೀಪ ಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡಿದ ತುಮಕೂರು ಮಹಾನಗರ ಪಾಲಿಕೆ ಮಾಜಿ ಕೌನ್ಸಿಲರ್ ಶ್ರೀಮತಿ ಗಿರಿಜಾ ಧನಿಯಾ ಕುಮಾರ್, ವಿ.ಸೋಮಣ್ಣ ಅವರು ಸಂಸದರಾದ ನಂತರ ತುಮಕೂರು ಜಿಲ್ಲೆಯ ಅಭಿವೃದ್ದಿಯ ವೇಗ ದ್ವಿಗುಣಗೊಂಡಿದೆ. ಹಲವಾರು ವರ್ಷಗಳಿಂದ ಕುಂಟುತ್ತಾ ಸಾಗಿದ್ದ ತುಮಕೂರು-ರಾಯದುರ್ಗ, ತುಮಕೂರು- ದಾವಣಗೆರೆ ರೈಲ್ವೆ ಯೋಜನೆ ಕಾಮಗಾರಿಗಳು ತ್ವರಿತ ಗತಿಯಲ್ಲಿ ನಡೆಯುತ್ತಿವೆ.ಅಲ್ಲದೆ ರೈಲ್ವೆ ನಿಲ್ದಾಣ ಮೇಲ್ದರ್ಜೆ, ಓವರ್ ಬ್ರಿಡ್ಜ್, ಅಂಡರ್ ಬ್ರಿಡ್ಜ್ಗಳ ನಿರ್ಮಾಣ, ೧೦೦ ಹಾಸಿಗೆಗಳ ಇಎಸ್‌ಐ ಆಸ್ಪತ್ರೆ ನಿರ್ಮಾಣ, ಕಾರ್ಮಿಕರ ಮಹಿಳಾ ಹಾಸ್ಟಲ್ ನಿರ್ಮಾಣ ಹೀಗೆ ಹತ್ತು ಹಲವು ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿದ್ದು, ಕೊಬ್ಬರಿ ಬೆಳೆಗಾರರ ಸಂಕಷ್ಟ ಪರಿಹಾರ ಮಾಡಿದ್ದಾರೆ. ವಿ.ಸೋಮಣ್ಣನ ವರಂತಹ ಸಂಸದರಿರುವುದು ನಮ್ಮ ಭಾಗ್ಯ ಎಂದರು.
ಹರಳೂರಿನ ಜಂಗಮ ಮಠದಲ್ಲಿ ಸುಮಾರು ೫೩ ಮಕ್ಕಳು ರಾಜ್ಯದ ವಿವಿಧೆಡೆಗಳಿಂದ ಆಗಮಿಸಿ, ಶಿಕ್ಷಣ, ಅನ್ನ, ಆಶ್ರಯ ಪಡೆದಿದ್ದಾರೆ. ಇಲ್ಲಿ ಕಲಿಯುತ್ತಿರುವ ಮಕ್ಕಳು ದೊಡ್ಡ ಗುರಿಯೊಂದಿಗೆ ಚನ್ನಾಗಿ ಓದಿ, ದೇಶಕ್ಕೆ, ನಾಡಿಗೆ, ತಾವು ಆಶ್ರಯ ಪಡೆದ ಮಠಕ್ಕೆ ಕೀರ್ತಿ ತರುವಂತೆ ಗಿರಿಜಾ ಧನಿಯ ಕುಮಾರ್ ಕಿವಿ ಮಾತು ಹೇಳಿದರು.
ದಾರಿ ದೀಪ ಚಾರಿಟಬಲ್ ಟ್ರಸ್ಟ್ನ ಶಿವಕುಮಾರ್ ಮಾತನಾಡಿ, ವಿ.ಸೋಮಣ್ಣ ಒಳ್ಳೆಯ ಜನನಾಯಕರು. ತುಮಕೂರು ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವುದರ ಜೊತೆಗೆ, ಅದಕ್ಕೆ ಸಿದ್ದಗಂಗಾ ಮಠದ ಹಿರಿಯ ಶ್ರೀಗಳಾದ ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳ ಹೆಸರಿಟ್ಟು, ಸಿದ್ದಗಂಗಾ ಮಠದ ಮಾದರಿಯಲ್ಲಿಯೇ ರೈಲ್ವೆ ನಿಲ್ದಾಣ ನಿರ್ಮಿಸಿ, ಗುರು ಪರಂಪರೆಗೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.
ವಿ.ಸೋಮಣ್ಣ ಅವರ ಹುಟ್ಟು ಹಬ್ಬದ ಅಂಗವಾಗಿ ಹರಳೂರಿನ ಜಂಗಮ ಮಠದಲ್ಲಿ ಬೇವಿನ ಗಿಡ ನೆಟ್ಟು ಪ್ರೊ. ಬೇವಿನ ಮರದ ಸಿದ್ದಪ್ಪ, ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಧನಿಯ ಕುಮಾರ್ ಮಾತನಾಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀಜಂಗಮ ಮಠದ ಶ್ರೀ ಚನ್ನಬಸವ ಸ್ವಾಮೀಜಿಗಳು ಆಶೀರ್ವಚನ ನೀಡಿ, ೨೦೧೨ರಲ್ಲಿ ಈ ಮಠವನ್ನು ಡಾ.ಶ್ರೀ ಶಿವಕುಮಾರ ಸ್ವಾಮಿಜೀಗಳು ಉದ್ಘಾಟಿಸಿದರು. ಆ ಕಾರ್ಯಕ್ರಮದ ನೇತೃತ್ವವನ್ನು ಅಂದಿನ ವಸತಿ ಸಚಿವರಾಗಿದ್ದ ವಿ.ಸೋಮಣ್ಣ ವಹಿಸಿ, ಸಣ್ಣ ಲೋಪವೂ ಆಗದಂತೆ ಕಾರ್ಯಕ್ರಮ ನಡೆಸಿಕೊಟ್ಟಿದ್ದರು.ಕಾಯಕವೇ ಕೈಲಾಸ ಎಂಬ ಲಿಂಗೈಕ್ಯ ಶ್ರೀಗಳ ಆಶಯದಂತೆ ಮಕ್ಕಳಿಗೆ ಅನ್ನ, ಆಶ್ರಯ, ಅಕ್ಷರ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಶ್ರೀ ಮಠದಲ್ಲಿರುವ ಅಡುಗೆ ಕೋಣೆ ಚಿಕ್ಕದಾಗಿದ್ದು, ಎಲ್ಲ ಮಕ್ಕಳು ಕುಳಿತು ಊಟೋಪಚಾರ ಮಾಡುವುದು ಕಷ್ಟ. ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಹಾಗಾಗಿ ದಾನಿಗಳ ಸಹಾಯ ಹಸ್ತ ಚಾಚಿದರೆ ಅಡುಗೆ ಕೋಣೆ ಮತ್ತು ದಾಸೋಹ ಭವನ ನಿರ್ಮಿಸುವ ಇಚ್ಚೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸೇನೆಯ ಉಪಾಧ್ಯಕ್ಷ ವರದರಾಜು, ಜೀಮ್ ನಟರಾಜು, ಸತೀಶ್, ಜಂಗಮ ಮಠದ ವತಿಯಿಂದ ನಡೆಯುತ್ತಿರುವ ಹೈ ಸ್ಕೂಲ್‌ನ ಶಿಕ್ಷಕರಾದ ಶಿವಕುಮಾರ್, ಶಿವಶಂಕರ್, ಸಂಸ್ಕೃತ ಶಿಕ್ಷಕರಾದ ರಾಜಣ್ಣ, ರಮೇಶ್, ಸಿದ್ದವೀರಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

(Visited 1 times, 1 visits today)