ತುಮಕೂರು: ತಿರಂಗಾ ಯಾತ್ರಾ ಸಮಿತಿ, ತುಮಕೂರು ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸ್ವಾತಂತ್ರ‍್ಯೋತ್ಸವದ ಅಂಗವಾಗಿ ಬೃಹತ್ ತಿರಂಗಾ ಯಾತ್ರೆಯನ್ನು ಅತ್ಯಂತ ಶ್ರದ್ಧೆ, ಸಂಭ್ರಮ ಹಾಗೂ ದೇಶಭಕ್ತಿಯ ವಾತಾವರಣದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು.
ತುಮಕೂರು ನಗರ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ಅವರ ವಿಶೇಷ ಕಾಳಜಿ ಹಾಗೂ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿದ್ದ ಈ ಬೃಹತ್ ತಿರಂಗಾ ಯಾತ್ರೆಯಲ್ಲಿ ಸಹಸ್ರಾರು ಕಾಲೇಜು ವಿದ್ಯಾರ್ಥಿಗಳು, ಎನ್‌ಸಿಸಿ ಹಾಗೂ ಸ್ಕೌಟ್ ವಿದ್ಯಾರ್ಥಿಗಳು ಸೇರಿದಂತೆ ನೂರಾರು ದೇಶಭಕ್ತ ನಾಗರಿಕರು ಉತ್ಸಾಹದಿಂದ ಭಾಗವಹಿಸಿದರು.
ನಗರದ ಮಹಾನಗರ ಪಾಲಿಕೆ ಆವರಣದಲ್ಲಿ ಸಹಸ್ರಾರು ವಿದ್ಯಾರ್ಥಿಗಳು ಹಾಗೂ ನಾಗರಿಕರು ಜಮಾವಣೆಗೊಂಡು, ಸುಮಾರು ೧೦೦ ಮೀಟರ್ ಉದ್ದದ ಬೃಹತ್ ರಾಷ್ಟ್ರಧ್ವಜ ಹಾಗೂ ಸಹಸ್ರಾರು ತ್ರಿವರ್ಣ ಧ್ವಜಗಳನ್ನು ಹಿಡಿದು ಯಾತ್ರೆಗೆ ಸಜ್ಜಾದರು. ಭಾರತ ಮಾತೆಯ ಅಲಂಕೃತ ಭಾವಚಿತ್ರವು ಯಾತ್ರೆಯ ಪ್ರಮುಖ ಆಕರ್ಷಣೆಯಾಗಿತ್ತು.
ಯಾತ್ರೆ ಆರಂಭಕ್ಕೂ ಮುನ್ನ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಯವರು ಹಾಗೂ ಶ್ರೀ ಕಾರದ ವೀರ ಬಸವ ಮಹಾಸ್ವಾಮೀಜಿಯವರು ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಬೃಹತ್ ತಿರಂಗಾ ಯಾತ್ರೆಗೆ ಚಾಲನೆ ನೀಡಿದರು.
ಮಹಾನಗರ ಪಾಲಿಕೆ ಆವರಣದಿಂದ ಆರಂಭಗೊAಡ ಯಾತ್ರೆಯು ಎಂ.ಜಿ. ರಸ್ತೆ, ರಾಮಪ್ಪ ವೃತ್ತ, ಸ್ವಾತಂತ್ರ‍್ಯ ಚೌಕ ಹಾಗೂ ಅಶೋಕ ರಸ್ತೆ ಮೂಲಕ ಸಾಗಿತು. ಮಾರ್ಗದುದ್ದಕ್ಕೂ ಸಾರ್ವಜನಿಕರು ಯಾತ್ರೆಯನ್ನು ವೀಕ್ಷಿಸಿ ದೇಶಭಕ್ತಿಯ ಸಂಭ್ರಮದಲ್ಲಿ ಪಾಲ್ಗೊಂಡರು. ಬಳಿಕ ಯಾತ್ರೆಯು ಮತ್ತೆ ಮಹಾನಗರ ಪಾಲಿಕೆ ಆವರಣಕ್ಕೆ ಆಗಮಿಸಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಮುಂಭಾಗದಲ್ಲಿ ಸಮಾರೋಪಗೊಂಡಿತು.
ಅಲ್ಲಿ ಎಲ್ಲರೂ ಶಿಸ್ತಿನಿಂದ ಜಮಾವಣೆಗೊಂಡು ರಾಷ್ಟ್ರಗೀತೆಯನ್ನು ಹಾಡುವ ಮೂಲಕ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.
ಈ ಸಂದರ್ಭದಲ್ಲಿ ಉದ್ಯಮಿಗಳಾದ ಶ್ರೀ ಹೆಬ್ಬಾಕ ರವಿಶಂಕರ್ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು, ವ್ಯಾಪಾರಸ್ಥರು, ವಿವಿಧ ಸಂಘ-ಸAಸ್ಥೆಗಳ ಪದಾಧಿಕಾರಿಗಳು, ಎನ್‌ಸಿಸಿ ಹಾಗೂ ಸ್ಕೌಟ್ ಅಧಿಕಾರಿಗಳು, ವಿದ್ಯಾರ್ಥಿಗಳು ಮತ್ತು ನೂರಾರು ನಾಗರಿಕರು ಉಪಸ್ಥಿತರಿದ್ದರು.
ಸ್ವಾತಂತ್ರ‍್ಯೋತ್ಸವದ ಮುನ್ನಾ ದಿನ ನಡೆದ ಈ ಬೃಹತ್ ತಿರಂಗಾ ಯಾತ್ರೆ ಕೇವಲ ಒಂದು ಕಾರ್ಯಕ್ರಮವಾಗಿ ಉಳಿಯದೆ, ಯುವಜನತೆಯಲ್ಲಿ ದೇಶಭಕ್ತಿ, ರಾಷ್ಟ್ರಾಭಿಮಾನ ಹಾಗೂ ರಾಷ್ಟ್ರೀಯ ಏಕತೆಯ ಭಾವನೆಯನ್ನು ಮೂಡಿಸುವ ಶಕ್ತಿಯುತ ಸಂದೇಶವನ್ನು ಸಾರಿತು.
ಸಹಸ್ರಾರು ವಿದ್ಯಾರ್ಥಿಗಳು ಒಂದೇ ಧ್ವನಿಯಲ್ಲಿ ಭಾರತ ಮಾತೆಯ ಜಯಘೋಷ ಮೊಳಗಿಸಿ, ರಾಷ್ಟ್ರಧ್ವಜವನ್ನು ಹಿಡಿದು ಸಾಗಿದ ದೃಶ್ಯವು ತುಮಕೂರು ನಗರದ ಜನರಲ್ಲಿ ಹೆಮ್ಮೆ ಹಾಗೂ ದೇಶಭಕ್ತಿಯ ಭಾವನೆಯನ್ನು ಮೂಡಿಸಿತು.
“ರಾಷ್ಟ್ರಧ್ವಜ ನಮ್ಮ ಹೆಮ್ಮೆ, ಭಾರತ ಮಾತೆ ನಮ್ಮ ಶಕ್ತಿ ದೇಶಭಕ್ತಿಯೇ ನಮ್ಮ ಸಂಕಲ್ಪ” ಎಂಬ ಸಂದೇಶದೊAದಿಗೆ ನಡೆದ ಈ ಬೃಹತ್ ತಿರಂಗಾ ಯಾತ್ರೆ ತುಮಕೂರು ನಗರದ ಸ್ವಾತಂತ್ರ‍್ಯೋತ್ಸವದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ತಂದಿತು.
(Visited 1 times, 1 visits today)



