ಹುಳಿಯಾರು: ವರ್ಷಗಳಿಂದ ರಾಗಿ, ಸಾಮೆ ಬೆಳೆಯುತ್ತಿದ್ದ ನೆಲದಲ್ಲಿ ಭರವಸೆಯ ಬೆಳೆಯಾಗಿ ರೇಷ್ಮೆ ಕೃಷಿ ನೆಚ್ಚಿಕೊಂಡು ಬದುಕು ಕಟ್ಟಿಕೊಳ್ಳುತ್ತಿದ್ದ ರೈತನೊಬ್ಬನ ಶ್ರಮದ ಫಲವನ್ನು ದುಷ್ಕರ್ಮಿಗಳು ಬೆಂಕಿಗಾಹುತಿ ಮಾಡಿದ ಅಮಾನವೀಯ ಘಟನೆ ಹುಳಿಯಾರು ಹೋಬಳಿಯ ದೊಡ್ಡಬಿದರೆ ಗ್ರಾಪಂ ವ್ಯಾಪ್ತಿಯ ಪೋಚಕಟ್ಟೆ ಬಳಿ ನಡೆದಿದೆ.
ದೊಡ್ಡಬಿದರೆ ಸರ್ವೇ ನಂಬರ್ ೭೭ ರಲ್ಲಿರುವ ರೈತ ಶಿವಣ್ಣ ಎಂಬುವರಿಗೆ ಸೇರಿದ ೪೧ ಅಡಿ ಉದ್ದ, ೨೫ ಅಡಿ ಅಗಲದ ರೇಷ್ಮೆ ಹುಳು ಸಾಕಣೆ ಶೆಡ್ಡಿಗೆ ದುಷ್ಟರು ಬೆಂಕಿ ಇಟ್ಟಿದ್ದಾರೆ. ಕ್ಷಣಾರ್ಧದಲ್ಲಿ ಹಬ್ಬಿದ ಬೆಂಕಿಯ ಕೆನ್ನಾಲೆಗೆಗೆ ರೇಷ್ಮೆ ಶೆಡ್‌ನ ಮುಕ್ಕಾಲು ಭಾಗ ಸಂಪೂರ್ಣ ಭಸ್ಮವಾಗಿದೆ. ಶೆಡ್‌ನ ಮುಂಭಾಗದಲ್ಲಿ ಕಟ್ಟಲಾಗಿದ್ದ ಸೀಮೆ ಹಸುವಿಗೂ ಬೆಂಕಿ ತಗಲಿದ್ದು, ಹಸು ತೀವ್ರವಾಗಿ ಗಾಯಗೊಂಡಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ವಾಹನ ಆಗಮಿಸುವಷ್ಟರಲ್ಲಾಗಲೇ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.
ಈ ಬೆಂಕಿ ದುರಂತದಿAದಾಗಿ ಶೆಡ್‌ನಲ್ಲಿದ್ದ ಔಷಧಿ, ಚಾಫ್ ಕಟರ್, ಚಿಕ್ಕ ಕಟರ್, ಕಡ್ಡಿ ಕಟ್ ಮಾಡುವ ಯಂತ್ರ, ಚಂದ್ರಿಕೆಗಳು, ಹುಳು ಮೇಯಿಸುವ ಸ್ಟಾ÷್ಯಂಡ್ ಹಾಗೂ ಟ್ರೇಗಳು ಸಂಪೂರ್ಣ ಸುಟ್ಟು ಬೂದಿಯಾಗಿವೆ. ಕೈಗೆ ಬಂದ ಫಸಲಿನ ಬೆನ್ನಲ್ಲೇ ಸಂಭವಿಸಿದ ಈ ದುರಂತ ರೈತನನ್ನು ತೀವ್ರ ಆಘಾತಕ್ಕೀಡುಮಾಡಿದೆ.
ಘಟನಾ ಸ್ಥಳಕ್ಕೆ ಹುಳಿಯಾರು ಪೊಲೀಸ್ ಠಾಣೆಯ ಪಿಎಸ್‌ಐ ರೇಣುಕಾ ಯಾದವ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕರಾದ ಕೃಷ್ಣಮೂರ್ತಿ ಅವರು ಸ್ಥಳ ಪರಿಶೀಲನೆ ನಡೆಸಿ, ಸಂಕಷ್ಟದಲ್ಲಿರುವ ರೈತನಿಗೆ ಇಲಾಖೆಯ ವತಿಯಿಂದ ಸಾಧ್ಯವಾಗುವ ಎಲ್ಲಾ ರೀತಿಯ ಗರಿಷ್ಠ ನೆರವು ಮತ್ತು ಪರಿಹಾರ ಒದಗಿಸಿಕೊಡುವ ಭರವಸೆ ನೀಡಿದ್ದಾರೆ.
ಶ್ರಮಜೀವಿಯೊಬ್ಬನ ಹೊಟ್ಟೆಮೇಲೆ ಹೊಡೆದ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಹಾಗೂ ಸಂಕಷ್ಟದಲ್ಲಿರುವ ಶಿವಣ್ಣ ಕುಟುಂಬಕ್ಕೆ ಸರ್ಕಾರ ತಕ್ಷಣವೇ ಸೂಕ್ತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
(Visited 1 times, 1 visits today)



