ತುಮಕೂರು: ತುಮಕೂರು ದಸರಾ ಅಂಗವಾಗಿ ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಮಹಿಳೆಯರಿಗಾಗಿಯೇ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇತೃತ್ವದಲ್ಲಿ ನಡೆದ ಈ ವಿವಿಧ ಸ್ಪರ್ಧೆಗಳಿಗೆ ಶನಿವಾರ ಬೆಳಗ್ಗೆ ಉಪ ಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ್ ಚಾಲನೆ ನೀಡಿದರು. ಒಳ ಕ್ರೀಡಾಂಗಣದಲ್ಲಿ ಮಹಿಳೆಯರು ಬಿಡಿಸಿದ್ದ ಚುಕ್ಕಿ ಹಾಗೂ ಎಳೆ ರಂಗೋಲಿ ಚಿತ್ತಾರಗಳನ್ನು ವೀಕ್ಷಿಸಿದ ಸಚಿವರು, ಮಹಿಳೆಯರ ಕಲಾತ್ಮಕತೆಯನ್ನು ಮೆಚ್ಚಿ ಶುಭ ಹಾರೈಸಿದರು.
ಡಾ.ಜಿ.ಪರಮೇಶ್ವರ್ ಅವರೊಂದಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಡಾ.ಸಿದ್ದರಾಮಣ್ಣ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಆರ್.ಜೆ.ಪವಿತ್ರ, ಮಕ್ಕಳ ಅಭಿವೃದ್ಧಿ ಅಧಿಕಾರಿ ಅಂಬಿಕ, ಜಾಹ್ನವಿ ಮೊದಲಾದವರು ಇದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಮಹಿಳೆಯರು ಮನೆಯ ಒಳಗೆ ಮಾತ್ರವಲ್ಲ, ಹೊರಗೂ ದುಡಿಯುತ್ತಿದ್ದಾರೆ. ಕಲಾತ್ಮಕತೆಯಲ್ಲಿಯೂ ಮುಂದಿದ್ದಾರೆ. ಇಂದು ಬಿಡಿಸಿರುವ ವಿವಿಧ ರಂಗೋಲಿ ಸ್ಪರ್ಧೆಯನ್ನು ಗಮನಿಸಿದರೆ ಅವರ ಆಸಕ್ತಿ ಎಷ್ಟಿದೆ ಎಂಬುದು ತಿಳಿಯುತ್ತದೆ ಎಂದು ಎಲ್ಲರಿಗೂ ಶುಭ ಹಾರೈಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಡಾ.ಸಿದ್ದರಾಮಣ್ಣ ಮಾತನಾಡಿ ತುಮಕೂರು ನಗರ ಮಾತ್ರವಲ್ಲದೆ, ವಿವಿಧ ಕಡೆಗಳಿಂದಲೂ ಹೆಚ್ಚು ಆಸಕ್ತಿ ತೋರಿಸಿ ಚಟುವಟಿಕೆಗಳಲ್ಲಿ ಮಹಿಳೆಯರು ಭಾಗವಹಿಸಿದ್ದಾರೆ. ಅವರ ಆಸಕ್ತಿಯನ್ನು ನಾವು ಗುರುತಿಸಿ ಬಹುಮಾನ ನೀಡುತ್ತಿದ್ದೇವೆ. ಪ್ರತಿ ಸ್ಪರ್ಧೆಗೂ ೩ ಬಹುಮಾನಗಳಿದ್ದು, ವಿಜೇತರಾದವರಿಗೆ ಸಂಜೆ ನಡೆಯಲಿರುವ ಸಾಂಸ್ಕೃತಿಕ ವೇದಿಕೆಯಲ್ಲಿ ಬಹುಮಾನ ವಿತರಿಸಲಾಗುವುದು ಎಂದರು.
ರAಗೋಲಿ ಸ್ಪರ್ಧೆಯಲ್ಲಿ ೧೨೦ ಮಹಿಳೆಯರು ಭಾಗವಹಿಸಿದ್ದರು. ಇದರ ಜೊತೆಗೆ ಮಧ್ಯಾಹ್ನದವರೆಗೂ ಹಗ್ಗ ಜಗ್ಗಾಟ, ಬಲೂನ್ ರೇಸ್, ಲೆಗ್ ಟೈಡ್ ರೇಸ್, ಮ್ಯೂಸಿಕಲ್ ಚೇರ್, ಹೂ ಕಟ್ಟುವುದು ಮೊದಲಾದ ಸ್ಪರ್ಧೆಗಳು ನಡೆದವು. ಸ್ಪರ್ಧೆಗಳಿಗೆ ಭಾಗವಹಿಸಿದ್ದವರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಮಹಿಳಾ ಇಲಾಖೆಯ ಅಧಿಕಾರಿಗಳು, ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾಗರಾಜು, ಗ್ರಾಮಾಂತರ ಯೋಜನಾಧಿಕಾರಿ ಶಶಿಧರ್ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕುಗಳ ಸಿಡಿಪಿಒ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಉಸ್ತುವಾರಿ ವಹಿಸಿ ಸ್ಪರ್ಧೆಗಳನ್ನು ನಡೆಸಿಕೊಟ್ಟರು.

(Visited 1 times, 1 visits today)