
ಮಧುಗಿರಿ: ನಗರದ ಉಪ ವಿಭಾಗಾಧಿಕಾರಿಗಳ ಕಛೇರಿಯಲ್ಲಿ ವೃತ್ತಿಜೀವನ ಆರಂಭಿಸಿದ ಸಣ್ಣಮುದ್ದಯ್ಯನವರು ಪ್ರಾರಂಭಿಕ ದಿನಗಳಿಂದ ಬಡವರು, ಶೋಷಿತರ ಪರ ಧ್ವನಿಯಾಗಿದ್ದರು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ತಿಳಿಸಿದರು.
ಅವರು ಕನ್ನಡ ಭವನದಲ್ಲಿ ಜಿಲ್ಲಾ ಕಸಾಪ ವತಿಯಿಂದ ಏರ್ಪಡಿಸಿದ್ದ ಸಣ್ಣಮುದ್ದಯ್ಯನವರ ನುಡಿನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಮ್ಮ ದೈನಂದಿನ ಕೆಲಸ ಕಾರ್ಯಗಳು, ಪ್ರಮಾಣ ಪತ್ರಗಳಿಗಾಗಿ ಬರುತ್ತಿದ್ದ ಗ್ರಾಮೀಣ ರೈತರಿಗೆ ಅಲೆದಾಡಿಸದೆ ತಕ್ಷಣ ಕೆಲಸ ಮಾಡಿಕೊಡುತ್ತಿದ್ದರು ಎಂದು ತಿಳಿಸಿದರು.
ಸಣ್ಣಮುದ್ದಯ್ಯನವರ ಸಮಾಜಮುಖಿ ಕೆಲಸಗಳನ್ನು ಕುರಿತು ಜಿಲ್ಲಾ ಕಸಾಪ ಸಂಚಾಲಕರಾದ ಕೆ.ಎಸ್.ಉಮಾಮಹೇಶ್ ಮಾತನಾಡಿ, ೨೦೦೨ರಲ್ಲಿ ತುಮಕೂರಿನಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನೆನೆಗುದಿಗೆ ಬಿದ್ದಾಗ ನೌಕರ ಸಂಘದ ವತಿಯಿಂದ ಪ್ರೇರಕ ಶಕ್ತಿಯಾಗಿ ನಿಂತರು. ಸರ್ಕಾರಿ ನೌಕರರ ಭವನದಲ್ಲಿಯೇ ಪೂರ್ವಸಿದ್ಧತಾ ಸಭೆ ನಡೆಸಿದರು. ಜಿಲ್ಲೆಯ ಸಚಿವರುಗಳಾದ ಟಿ.ಬಿ.ಜಯಚಂದ್ರ ಹಾಗೂ ಡಾ. ಜಿ.ಪರಮೇಶ್ವರ್ ಅವರಿಗೆ ಸಹಕಾರದ ಭರವಸೆ ನೀಡಿ ಸಾಹಿತ್ಯ ಸಮ್ಮೇಳನದ ಕೆಲಸಗಳಿಗೆ ಚಾಲನೆ ನೀಡುವುದರ ಜೊತೆಗೆ ಜಿಲ್ಲೆಯ ಎಲ್ಲಾ ನೌಕರರ ಒಂದು ದಿನದ ವೇತನವನ್ನು ನೀಡಲು ಶ್ರಮವಹಿಸಿ ಸಮ್ಮೇಳನದ ಯಶಸ್ಸು ಹಾಗೂ ಕನ್ನಡ ಭವನ ನಿರ್ಮಾಣಕ್ಕೂ ಸ್ಫೂರ್ತಿಯಾದರು ಎಂದು ತಿಳಿಸಿದರು.
ಹಿರಿಯ ರಂಗಭೂಮಿ ಕಲಾವಿದರಾದ ಡಾ. ಲಕ್ಷö್ಮಣದಾಸ್ ಮಾತನಾಡಿ ಸಣ್ಣಮುದ್ದಯ್ಯನವರು ಐದುಬಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದುದಲ್ಲದೆ ರಾಜ್ಯ ಸಮಿತಿಯ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಸಾಹಿತಿ, ಕಲಾವಿದರ ಬಗ್ಗೆ ಅಪಾರವಾದ ಗೌರವವನ್ನು ಹೊಂದಿದ್ದರು ಎಂದು ತಿಳಿಸಿದರು.
ಜಾನಪದ ಅಕಾಡೆಮಿಯ ಸದಸ್ಯ ಹಾಗೂ ಗಾಯಕರಾದ ಮಲ್ಲಿಕಾರ್ಜುನ ಕೆಂಕೆರೆ ಮಾತನಾಡಿ ನಿಧನದ ಹಿಂದಿನ ದಿನ ತಮ್ಮೊಂದಿಗೆ ಮುದ್ದಯ್ಯನವರು ನಡೆಸಿದ ಚರ್ಚೆಯನ್ನು ಉಲ್ಲೇಖಿಸಿ ಸದಾ ನಗುಮೊಗದ ಸ್ವಭಾವ ಅವರದು ಎಂದು ತಿಳಿಸಿ, ಇಷ್ಟು ಬೇಗ ಬಂದ ಅವರ ಸಾವಿನ ಸುದ್ಧಿ ಎಲ್ಲರಿಗೂ ಅಘಾತವನ್ನುಂಟುಮಾಡಿದೆ ಎಂದು ತಿಳಿಸಿದರು.
ಸುನಂದಮ್ಮ, ಜಿ.ಹೆಚ್.ಮಹದೇವಪ್ಪ, ಇಂಜಿನಿಯರ್ ಸಂಘದ ಅಧ್ಯಕ್ಷರಾದ ಜಿ.ಎನ್.ರಾಧಾಕೃಷ್ಣ, ಗೌ.ತಿ.ರಂಗನಾಥ್, ಬಿ.ರಾಜಶೇಖರ್, ಚಿಕ್ಕಬೆಳ್ಳಾವಿ ಶಿವಕುಮರ‍್ಗ, ಮರಿಯಂಬಿ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ. ಕೆ.ಸಣ್ಣಹೊನ್ನಯ್ಯ ಕಂಟಲಗೆರೆ ಕಾರ್ಯಕ್ರಮ ನಿರ್ವಹಿಸಿದರು. ಸಮಾರಂಭಕ್ಕೂ ಮುನ್ನ ಸಣ್ಣಮುದ್ದಯ್ಯನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.



