ತುಮಕೂರು: ಗುಬ್ಬಿ ತಾಲ್ಲೂಕು, ಚೇಳೂರು ಹೋಬಳಿಯ ಸಂಗನಹಳ್ಳಿ ಗ್ರಾಮದಲ್ಲಿ ಆಧಾರ್ ಕಾರ್ಡ್ ದುರುಪಯೋಗ ಪಡಿಸಿಕೊಂಡು, ನಕಲಿ ದಾಖಲೆಗಳ ಮೂಲಕ ‘ಸಂಧ್ಯಾಸುರಕ್ಷಾ’ ಹಾಗೂ ವೃದ್ಧಾಪ್ಯ ವೇತನ ಪಡೆದು ಸರ್ಕಾರದ ಖಜಾನೆಗೆ ಮೋಸ ಮಾಡಲಾಗಿರುವ ಶಾಂತಮ್ಮ ಮತ್ತು ಶಶಿಧರ ಎಂಬುವವರ ವಿರುದ್ಧ ಕಾನೂನು ರೀತ್ಯಾ ಕ್ರಮಕೈಗೊಳ್ಳುವುದು ಜೊತೆಗೆ ಗುಬ್ಬಿ ತಾಲ್ಲೂಕು ತಹಶೀಲ್ದಾರ್ ರವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವಂತೆ ವಿವಿಧ ದಲಿತಪರ ಮುಖಂಡರು ಮತ್ತು ಮಾನವ ಹಕ್ಕುಗಳ ಸಂಘಟನೆಯ ಪದಾಧಿಕಾರಿಗಳು ಗಂಭೀರ ಆರೋಪ ಮಾಡಿ ಇಂದು ತುಮಕೂರು ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಹ ಸಲ್ಲಿಸಲಾಗಿದೆ.
ಮನವಿ ಪತ್ರ ಸಲ್ಲಿಕೆಯ ವೇಳೆ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್. ಕೆ. ನಿಧಕುಮಾರ್ ಮಾತನಾಡುತ್ತಾ ಗುಬ್ಬಿ ತಾಲ್ಲೂಕು ಚೇಳೂರು ಹೋಬಳಿ ವ್ಯಾಪ್ತಿಯ ಸಂಗನಹಳ್ಳಿ ಗ್ರಾಮದ ಶಶಿಧರ್ ಬಿನ್. ಲೇಟ್. ಚಿಕ್ಕಗಂಗಯ್ಯ ಎಂಬುವವರು ಆಧಾರ್ ತಿದ್ದುಪಡಿಯನ್ನು ೦೧-೦೧-೧೯೭೦ ಕ್ಕೆ ಬದಲಾಗಿ ೦೧-೦೧-೧೯೫೨ಕ್ಕೆ ಬದಲಾವಣೆ ಮಾಡಿ ಸುಮಾರು ೧೮ ವರುಷಗಳ ಕಾಲದ ವಯಸ್ಸಿನ ವಯೋಮಿತಿಯನ್ನು ತಿದ್ದುಪಡಿ ಮಾಡಲು ನಕಲಿ ದಾಖಲೆ ಸೃಷ್ಠಿಸಿ ಸಂಧ್ಯಾ ಸುರಕ್ಷಾ ಯೋಜನೆಯ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಜೊತೆಗೆ ಇವರ ಧರ್ಮಪತ್ನಿ ಶಾಂತಮ್ಮ ಕೋಂ. ಶಶಿಧರ ಇವರ ಆಧಾರ್ ಕಾರ್ಡ್ ನ್ನು ೦೧-೦೧-೧೯೬೬ ರ ಇಸವಿಯಿಂದ ೦೧-೦೧-೧೯೫೯ಕ್ಕೆ ಬದಲಾವಣೆ ಮಾಡಿ ಸುಮಾರು ೭ ವರುಷಗಳ ಕಾಲದ ವಯಸ್ಸಿನ ವಯೋಮಿತಿಯನ್ನು ತಿದ್ದುಪಡಿ ಮಾಡಿಕೊಂಡಿದ್ದು ಈ ಎರಡೂ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಲು ಹಲವಾರು ನಕಲಿ ದಾಖಲೆಗಳನ್ನು ಸೃಷ್ಠಿಸಿಕೊಂಡು ಅಕ್ರಮವಾಗಿ ತಿದ್ದುಪಡಿ ಮಾಡಿಕೊಂಡು ಸರ್ಕಾರದ ಹಣ ಅಂದರೆ ಸಂಧ್ಯಾ ಸುರಕ್ಷಾ ಯೋಜನೆಯ ಹಣವನ್ನು ದುರ್ಬಳಕೆ ಮಾಡಿಕೊಳ್ಳಲು ಮಾಡಿಸಿಕೊಂಡಿರುತ್ತಾರೆ ಎಂದು ಆರೋಪಿಸಿದ್ದಾರೆ ಅಲ್ಲದೇ ಇವರಿಬ್ಬರೂ ಸಹ ದಂಪತಿಗಳಾಗಿದ್ದು, ಇಬ್ಬರೂ ವಿದ್ಯಾವಂತರೇ, ಸಂಧ್ಯಾ ಸುರಕ್ಷಾ ಯೋಜನೆಯನ್ನು ದುರ್ಬಳಕೆ ಮಾಡಿಕೊಳ್ಳುವುದರ ಸಲುವಾಗಿ ವಯಸ್ಸಿನ ಅವಧಿಗೂ ಮುನ್ನವೇ ಸುಳ್ಳು ದಾಖಲೆಗಳನ್ನು ಸೃಷ್ಠಿಸಿಕೊಂಡು ಸರ್ಕಾರಕ್ಕೆ ಮೋಸ ಮತ್ತು ವಂಚನೆ ಮಾಡಿ ಹಣವನ್ನು ಅನ್ಯ ಮಾರ್ಗದಲ್ಲಿ ಪಡೆದಿರುತ್ತಾರೆ ಎಂದು ಆರೋಪಿಸಿದ್ದಾರೆ.
ಕರ್ನಾಟಕ ರಾಜ್ಯ ಮಾದಿಗ ಸಮಾಜದ ಜಿಲ್ಲಾಧ್ಯಕ್ಷರಾದ ರಾಜೇಶ್ ಹೆಚ್.ಬಿ. ಮಾತನಾಡಿ ನಮ್ಮ ಮನವಿ ಪತ್ರದಲ್ಲಿ ಜಾತಿ ನಿಂದನೆ ಹಾಗೂ ಕರ್ತವ್ಯ ಲೋಪ ಎಸಗಿರುವ ತಹಸೀಲ್ದಾರ್ ಅವರನ್ನು ತಕ್ಷಣವೇ ಅಮಾನತುಗೊಳಿಸಿ ಮತ್ತು ಸರ್ಕಾರಕ್ಕೆ ವಂಚಿಸಿರುವ ಈ ದಂಪತಿಗಳ ವಿರುದ್ಧ ಕೂಡಲೇ ಎಫ್‌ಐಆರ್ ದಾಖಲಿಸಲು ಒತ್ತಾಯ ಮಾಡುತ್ತಿದ್ದು ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ನ್ಯಾಯ ಸಿಗದಿದ್ದರೆ, ಕಂದಾಯ ಇಲಾಖೆಯ ಆಯುಕ್ತರ ಕಚೇರಿ ಸೇರಿದಂತೆ ವಿಧಾನಸೌಧದವರೆಗೆ ಹೋರಾಟ ನಡೆಸಲು ಸಹ ನಾವು ಸಿದ್ಧರಾಗಿದ್ದೇವೆ ನಮಗೆ ನ್ಯಾಯ ಸಿಗುವವರೆವಿಗೂ ಹೋರಾಟ ಮತ್ತು ಸತ್ಯಾಗ್ರಹ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಕುಮಾರ್, ಡಾ. ಬಿ.ಆರ್. ಅಂಬೇಡ್ಕರ್ ಸ್ವಾಭಿಮಾನಿ ಜನಸೇನೆಯ ಸಂಸ್ಥಾಪಕರಾದ ಎನ್. ಕುಮಾರ್, ದಲಿತ ಮುಖಂಡರುಗಳಾದ ರಾಜೇಶ್ ಹೆಚ್. ಬಿ, ರಂಗಸ್ವಾಮಿ, ಇಶ್ರತ್ ಸುಲ್ತಾನ, ಡಿ.ಕೆ. ಇಂದ್ರಕುಮಾರ್, ಗುರುಪ್ರಸಾದ್ ಟಿ.ಆರ್, ಮನೋಜ್ ಎ.ಎಲ್, ಕೆ.ಸಿ.ಗೋಪಾಲ್ ಕೆಸರಮಡು, ಗಿರೀಶ್ ಜಿ.ಆರ್, ಸೋಮಣ್ಣ, ಪೋಸ್ಟ್ ಮಾಸ್ಟರ್ ಮುನಿಯಪ್ಪ, ನಾಗರಾಜ್, ಅಸೀನಾ, ಕಾವ್ಯ, ಗುಲ್ಜಾರ್ ಖಾನ್, ನಾಜೀಮಾ, ಸೀಮಾ, ನೂರುನ್ನೀಸಾ, ಖುತೇಜ, ಶಾಬಾನ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
(Visited 1 times, 1 visits today)



