
ತುಮಕೂರು: ಭಾರತೀಯ ಅಂಚೆ ಇಲಾಖೆ, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಹಾಗೂ ಆದಿತ್ಯ ಬಿರ್ಲಾ ಹೆಲ್ತ್ ಇನ್ಶೂರೆನ್ಸ್ ಸಹಯೋಗದಲ್ಲಿ ಜಾರಿಯಲ್ಲಿರುವ ಜಿ.ಎ.ಜಿ. ಅಪಘಾತ ವಿಮೆ ಯೋಜನೆಯಡಿ ಅಪಘಾತದಲ್ಲಿ ಮೃತಪಟ್ಟ ವಿಮೆದಾರರ ಕುಟುಂಬಕ್ಕೆ ೧೫ ಲಕ್ಷ ರೂ. ಮೊತ್ತದ ವಿಮೆ ಕ್ಲೆöÊಮ್ ಚೆಕ್ ವಿತರಣೆ ಮಾಡಲಾಯಿತು.
ಜಿಲ್ಲೆಯ ಕೊರಟಗೆರೆ ತಾಲ್ಲೂಕು ಎಲೆರಾಂಪುರ ಗ್ರಾಮ ಕುಂಚಿಟಿಗರ ಮಠದಲ್ಲಿ ಇತ್ತೀಚೆಗೆ ಜರುಗಿದ ಕಾರ್ಯಕ್ರಮದಲ್ಲಿ ಈ ಚೆಕ್ ವಿತರಿಸಲಾಯಿತು.
ತುಮಕೂರು ತಾಲ್ಲೂಕು ಕೋರಾ ಗ್ರಾಮದ ಅಂಬರಯ್ಯ ಅವರು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಮೂಲಕ ವಾರ್ಷಿಕ ಕೇವಲ ೭೪೯ ರೂ.ಗಳ ಪ್ರೀಮಿಯಂ ಪಾವತಿಸಿ ಅಪಘಾತ ವಿಮೆ ಯೋಜನೆಯಲ್ಲಿ ನೋಂದಾಯಿಸಿಕೊAಡಿದ್ದರು. ದುರದೃಷ್ಟವಶಾತ್ ರಸ್ತೆ ಅಪಘಾತದಲ್ಲಿ ಅವರು ಮೃತಪಟ್ಟ ಹಿನ್ನೆಲೆಯಲ್ಲಿ, ಯೋಜನೆಯ ನಿಯಮಾನುಸಾರ ಅವರ ನಾಮಿನಿಯಾಗಿರುವ ಭರತರತ್ನ (ಅಂಬರಯ್ಯ ಅವರ ಪುತ್ರ) ಅವರಿಗೆ ೧೫,೦೦,೦೦೦ ರೂ. ವಿಮೆ ಕ್ಲೆöÊಮ್ ಮಂಜೂರಾಯಿತು. ವಿಮೆ ಕ್ಲೆöÊಮ್ ಚೆಕ್ ಅನ್ನು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್, ತುಮಕೂರು ಶಾಖೆಯ ಹಿರಿಯ ವ್ಯವಸ್ಥಾಪಕ ಸಿ.ಎಚ್. ಚೈತನ್ಯ ಕುಮಾರ್ ಅವರು ಫಲಾನುಭವಿಗೆ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಸಚಿವ ವಿ. ಸೋಮಣ್ಣ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಫಲಾನುಭವಿಯನ್ನು ಅಭಿನಂದಿಸಿ ಮಾತನಾಡಿ, ಕೇವಲ ೭೪೯ ರೂ.ಗಳನ್ನು ವಾರ್ಷಿಕ ಪ್ರೀಮಿಯಂ ಪಾವತಿಸುವ ಮೂಲಕ ೧೫ ಲಕ್ಷ ರೂ.ಗಳವರೆಗೆ ಅಪಘಾತ ವಿಮಾ ರಕ್ಷಣೆ ಪಡೆಯಬಹುದು. ಪ್ರತಿಯೊಬ್ಬ ನಾಗರಿಕರೂ ಇಂತಹ ಸಾಮಾಜಿಕ ಭದ್ರತಾ ವಿಮಾ ಯೋಜನೆಗಳ ಪ್ರಯೋಜನ ಪಡೆಯಬೇಕು ಎಂದು ಕರೆ ನೀಡಿದರು.
ಅಂಚೆ ಅಧೀಕ್ಷಕ ಶಂಕರಪ್ಪ ಅವರು ಭಾರತೀಯ ಅಂಚೆ ಇಲಾಖೆ ಹಾಗೂ ಮೂಲಕ ಗ್ರಾಮೀಣ ಪ್ರದೇಶದ ಜನರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ವಿಮಾ ಸೇವೆಗಳನ್ನು ತಲುಪಿಸಲಾಗುತ್ತಿದೆ ಎಂದು ತಿಳಿಸಿದರು.
ಪೂಜ್ಯ ಶ್ರೀ ಹನುಮಂತನಾಥ ಸ್ವಾಮೀಜಿ ಅವರು ಮೃತ ಅಂಬರಯ್ಯ ಅವರ ಕುಟುಂಬಕ್ಕೆ ಸಾಂತ್ವನ ತಿಳಿಸಿ, ಸಮಾಜದ ಪ್ರತಿಯೊಬ್ಬರೂ ಇಂತಹ ಅಪಘಾತ ವಿಮಾ ಯೋಜನೆಗಳಲ್ಲಿ ಭಾಗವಹಿಸುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಹಕರಿಗೆ ಲಭ್ಯವಿರುವ ಯೋಜನೆಯ ಮಹತ್ವ, ಕಡಿಮೆ ಪ್ರೀಮಿಯಂನಲ್ಲಿ ಹೆಚ್ಚಿನ ಆರ್ಥಿಕ ಭದ್ರತೆ ಹಾಗೂ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಕುಟುಂಬಕ್ಕೆ ದೊರೆಯುವ ನೆರವಿನ ಕುರಿತು ಮಾಹಿತಿ ನೀಡಲಾಯಿತು.
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಅಧಿಕಾರಿಗಳು/ ಸಿಬ್ಬಂದಿ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.


