ಹುಳಿಯಾರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹುಳಿಯಾರಿನಲ್ಲಿ ಹಮ್ಮಿಕೊಂಡಿರುವ ಈ ಮಧ್ಯವರ್ಜನ ಶಿಬಿರವು ವ್ಯಸನಿಗಳ ಬದುಕಿನಲ್ಲಿ ಹೊಸ ಬೆಳಕು ನೀಡುವ ಒಂದು ಅದ್ಭುತ ಕಾರ್ಯಕ್ರಮವಾಗಿದೆ ಎಂದು ಚಲನಚಿತ್ರ ನಿರ್ಮಾಪಕ ನಂದಿಹಳ್ಳಿ ಶಿವಣ್ಣ ಅಭಿಪ್ರಾಯಪಟ್ಟರು.
ಹುಳಿಯಾರಿನ ಬಸವೇಶ್ವರ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ನ ಜಂಟಿ ಆಶ್ರಯದಲ್ಲಿ, ಸ್ಥಳೀಯ ವಿವಿಧ ಸಂಘ-ಸAಸ್ಥೆಗಳು, ದಾನಿಗಳು ಹಾಗೂ ನವಜೀವನ ಸಮಿತಿಗಳ ಸಹಕಾರದೊಂದಿಗೆ ಆಯೋಜಿಸಿರುವ ೨೦೮೮ ನೇ ಮದ್ಯವರ್ಜನ ಶಿಬಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಮದ್ಯ ಕುಡಿದು ಬೀದಿಗಳಲ್ಲಿ ತೂರಾಡುತ್ತಿದ್ದವರು, ಹೆಂಡತಿ-ಮಕ್ಕಳೊAದಿಗೆ ಜಗಳ ಆಡುತ್ತಿದ್ದವರ ಬದುಕನ್ನು ಪರಿವರ್ತಿಸಿ, ಹೊಸ ಜೀವನ ತಂದುಕೊಡುವಲ್ಲಿ ಧರ್ಮಸ್ಥಳದ ಶಿಬಿರಗಳು ಪ್ರಮುಖ ಪಾತ್ರ ವಹಿಸಿವೆ. ಇಂದು ಶಿಬಿರದಲ್ಲಿ ಭಾಗವಹಿಸಿರುವ ೬೦ ಮಂದಿ ಶಿಬಿರಾರ್ಥಿಗಳು ಕೇವಲ ವ್ಯಕ್ತಿಗಳಾಗಿ ಉಳಿಯದೆ ಸಮಾಜಕ್ಕೆ ಮಾದರಿಯಾಗಬೇಕು. ಸರ್ಕಾರವು ಆದಾಯಕ್ಕಾಗಿ ಮದ್ಯದ ಅಂಗಡಿಗಳನ್ನು ಹೆಚ್ಚಿಸುತ್ತಿದ್ದರೂ, ‘ನಾವು ಕುಡಿಯುವುದಿಲ್ಲ’ ಎಂಬ ಗಟ್ಟಿ ತೀರ್ಮಾನ ನಿಮ್ಮದಾಗಬೇಕು. ನಿಮ್ಮನ್ನು ನಂಬಿರುವ ಹೆಂಡತಿ ಮತ್ತು ಮಕ್ಕಳ ಸುಖಿ ಜೀವನಕ್ಕಾಗಿ ಈ ಚಟದಿಂದ ಮುಕ್ತರಾಗಲೇಬೇಕು ಎಂದು ಕರೆ ನೀಡಿದರು.
ಪಪಂ ಸದಸ್ಯೆ ಬೇಬಿ ಫಾತಿಮಾ ಮಾತನಾಡಿ ಮದ್ಯಪಾನದಿಂದ ಕೇವಲ ಆರೋಗ್ಯ ಮಾತ್ರವಲ್ಲ, ಇಡೀ ಕುಟುಂಬದ ಭವಿಷ್ಯವೇ ಹಾಳಾಗುತ್ತದೆ. ಆದ್ದರಿಂದ ನಿಮ್ಮ ಹೆಂಡತಿ ಮತ್ತು ಮಕ್ಕಳ ಸುಖಿ ಜೀವನಕ್ಕಾಗಿ ಮದ್ಯದ ಚಟವನ್ನು ತಕ್ಷಣವೇ ಬಿಡಬೇಕು ಎಂದು ಕೈ ಮುಗಿದು ಕೇಳಿಕೊಂಡರಲ್ಲದೆ ಕಷ್ಟಪಟ್ಟು ದುಡಿದ ಹಣವನ್ನೆಲ್ಲ ಮದ್ಯಕ್ಕಾಗಿ ವ್ಯಯ ಮಾಡುತ್ತಿರುವುದು ಸರಿಯಲ್ಲ. ಮದ್ಯಪಾನದಿಂದ ಅನೇಕ ಕಾಯಿಲೆಗಳು ಸೇರಿದಂತೆ ದೇಹದ ಆರೋಗ್ಯಕ್ಕೆ ತೀವ್ರ ಹಾನಿಯಾಗುತ್ತದೆ ಎಂಬ ವಿಷಯ ಎಲ್ಲರಿಗೂ ತಿಳಿದಿದ್ದರೂ ಸಹ, ಈ ಕೆಟ್ಟ ಚಟಕ್ಕೆ ದಾಸರಾಗುತ್ತಿರುವುದು ವಿಷಾದನೀಯ. ಮನೆಯಲ್ಲಿ ತಂದೆಯು ಮದ್ಯ ಸೇವಿಸುವುದನ್ನು ನೋಡಿ ಮಕ್ಕಳು ಸಹ ಅದೇ ಕೆಟ್ಟ ಅಭ್ಯಾಸವನ್ನು ಕಲಿಯುವ ಸಾಧ್ಯತೆ ಇರುತ್ತದೆ. ನೀವೇ ಮದ್ಯ ಕುಡಿಯುತ್ತಿದ್ದರೆ, ಮಕ್ಕಳಿಗೆ ಬುದ್ಧಿ ಹೇಳುವ ನೈತಿಕ ಹಕ್ಕನ್ನು ಕಳೆದುಕೊಳ್ಳುತ್ತೀರಿ. ನಿಮ್ಮನ್ನು ನಂಬಿರುವ ಮಕ್ಕಳ ಮತ್ತು ಕುಟುಂಬದ ಲೈಫ್ ಅನ್ನು ದಯವಿಟ್ಟು ಹಾಳು ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದರು.
ಧರ್ಮಸ್ಥಳದ ಯೋಜನೆಯ ಯೋಜನಾಧಿಕಾರಿ ರಾಮಚಂದ್ರ ಮಾತನಾಡಿ
ಮಧ್ಯವರ್ಜನ ಶಿಬಿರ ಕೇವಲ ಒಂದು ಕಾರ್ಯಕ್ರಮವಲ್ಲ, ಬದಲಿಗೆ ಮದ್ಯದ ವ್ಯಸನಕ್ಕೆ ಒಳಗಾಗಿ ತತ್ತರಿಸುತ್ತಿರುವ ಸಾವಿರಾರು ಕುಟುಂಬಗಳ ಬದುಕಿಗೆ ಬೆಳಕು ನೀಡುವ ಹೆಗ್ಗಡೆಯವರ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಮದ್ಯದ ಗೀಳಿಗೆ ಬಿದ್ದವರು ಅದನ್ನು ತ್ಯಜಿಸಿ, ಜನಾಂದೋಲನದ ಈ ವೇದಿಕೆಯ ಸದುಪಯೋಗ ಪಡೆದುಕೊಂಡು ತಮ್ಮ ಸಂಸಾರದಲ್ಲಿ ಸುಖ-ಶಾಂತಿ ಕಂಡುಕೊಳ್ಳಬೇಕು ಎಂದು ಕರೆ ನೀಡಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಪ್ರೀತಿ ರಾಘವೇಂದ್ರ ಶಿಬಿರವನ್ನು ಉದ್ಘಾಟಿಸಿದರು. ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಎಸ್.ಆರ್.ಎಸ್. ದಯಾನಂದ್ ಅಧ್ಯಕ್ಷತೆ ವಹಿಸಿದ್ದರು. ಕರವೇ ಜಿಲ್ಲಾ ಉಪಾಧ್ಯಕ್ಷ ಚನ್ನಬಸವಯ್ಯ, ರೋಟರಿ ಕ್ಲಬ್ ಅಧ್ಯಕ್ಷ ರವೀಶ್, ಒಕ್ಕೂಟದ ಅಧ್ಯಕ್ಷ ಕಿರಣ್, ದಾನಿಗಳಾದ ಚಿಕ್ಕಬಿದರೆಪ್ರದೀಪ್, ಜಿಲ್ಲಾ ಜನಜಾಗೃತಿ ವೇದಿಕೆಯ ದಾಸಪ್ಪ, ಲಕ್ಷಿ÷್ಮಕಾಂತ್, ಎಚ್.ಡಿ.ದುರ್ಗರಾಜು, ರೈತ ಉತ್ಪಾದಕ ಕಂಪನಿಯ ಅಧ್ಯಕ್ಷರಾದ ಪರಮೇಶ್ವರಯ್ಯ, ಆಂಜನೇಯ ಸ್ವಾಮಿ ದೇವಸ್ಥಾನದ ಅಧ್ಯಕ್ಷರಾದ ಬಡಿಗಿ ರಾಮಣ್ಣ, ಪ್ರವೀಣ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

(Visited 1 times, 1 visits today)