ತುಮಕೂರು: ಕುಣಿಗಲ್ ರಸ್ತೆಯ ರಾಮಕೃಷ್ಣ ನಗರದ ಶ್ರೀ ಶಿರಡಿಸಾಯಿನಾಥ ದೇಗುಲ ಸೇರಿದಂತೆ ನಗರದ ವಿವಿಧಡೆ ಇರುವ ಸಾಯಿಬಾಬಾ ದೇಗುಲಗಳಲ್ಲಿ ಗುರುಪೂರ್ಣಿಮೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ರಾಮಕೃಷ್ಣ ನಗರದ ಸಾಯಿನಾಥ ಮಂದಿರದಲ್ಲಿ ಬೆಳಿಗ್ಗೆ ೬ ಗಂಟೆಗೆ ಕಾಕಡ ಆರತಿ, ೭ ಗಂಟೆಗೆ ಪಂಚಾಮೃತ ಅಭಿಷೇಕ ಮತ್ತು ವಿಶೇಷ ಅಲಂಕಾರ, ೮ ಗಂಟೆಗೆ ರುದ್ರಾಭಿಷೇಕ, ೧೦ ಗಂಟೆಗೆ ೧೦೮ ಗುರುಗಳ ಅವಾಹನೆ ಪೂಜಾ, ಮಧ್ಯಾಹ್ನ ೧೨ಕ್ಕೆ ಮಹಾಮಂಗಳಾರತಿ ನೆರವೇರಿತು. ಭಕ್ತಾದಿಗಳಿಗಾಗಿ ಬೆಳಿಗ್ಗೆಯಿಂದ ರಾತ್ರಿವರೆಗೂ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ರಾಮಕೃಷ್ಣನಗರದ ಸಾಯಿನಾಥ ಮಂದಿರದಲ್ಲಿ ೧೦೮ ಗುರುಗಳ ಅವಾಹನೆ ಪೂಜೆ ನೆರವೇರಿಸಿದ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ವೇದಗಳನ್ನು ವಿಭಜನೆ ಮಾಡಿ ೪ ವೇದ ಮತ್ತು ೧೮ ಪುರಾಣಗಳನ್ನು ಜನರಿಗೆ ಪರಿಚಯಿಸಿದ ಕೀರ್ತಿ ವೇದ ವ್ಯಾಸರಾಜರಿಗೆ ಸಲ್ಲುತ್ತದೆ. ಶಂಕರಾಚಾರ್ಯ, ಸ್ವಾಮಿ ವಿವೇಕಾನಂದರು, ಶಿರಡಿ ಬಾಬಾರವರು ಮಹಾನ್ ಪರಂಪರೆಯನ್ನು ಜಗತ್ತಿಗೆ ಪರಿಚಯಿಸಿದವರು ಎಂದರು.
ಗುರುತ್ವಾಕರ್ಷಣೆಯನ್ನು ಕಂಡು ಹಿಡಿದ ನ್ಯೂಟನ್‌ನಗೆ ಭೂಮಿ ತಾಯಿಯೇ ಗುರುವಾಗಿ ಪರಿಣಿಮಿಸಿದಳು. ಗುರುವಿನ ಕೃಪೆ ಭಕ್ತ ಮತ್ತು ಭಗವಂತನ ನಡುವೆ ಇರುವಂತಹ ಸೇತುವೆ. ಈ ಸೇತುವೆ ಬಲಿಷ್ಠವಾದಷ್ಟು ಭಗವಂತನೆಡೆಗೆ ಹೋಗುವ ಪ್ರಯಾಣಕ್ಕೆ ಸಾರ್ಥಕತೆ, ಧನ್ಯತೆ ಇರುತ್ತದೆ ಎಂದು ಹೇಳಿದರು. ಭಕ್ತ ಮತ್ತು ಭಗವಂತನ ನಡುವೆ ಗುರು ಇರಬೇಕು. ಕತ್ತಲಿನಿಂದ ಬೆಳಕಿನೆಡೆಗೆ ಮಾರ್ಗದರ್ಶನ ತೋರುವವನು ಗುರು. ದೇವರನ್ನು ನೋಡುವ ಮಾರ್ಗ ಸರಿಯಾಗಿರಬೇಕು. ರಾಮಕೃಷ್ಣ ನಗರದ ಭಕ್ತರೆಲ್ಲರೂ ಸೇರಿ ಸಾಯಿಬಾಬಾ ಮಂದಿರದಲ್ಲಿ ಜಿ.ಎಸ್. ಬಸವರಾಜು ನೇತೃತ್ವದಲ್ಲಿ ಅತ್ಯುತ್ತಮವಾದ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ವಿಚಾರ ಎಂದರು.
ಮಾಜಿ ಸಂಸದ ಜಿ.ಎಸ್. ಬಸವರಾಜು ಮಾತನಾಡಿ, ಮನುಷ್ಯ ವಯಸ್ಸಾದ ನಂತರ ಧಾರ್ಮಿಕತೆಯತ್ತ ವಾಲುವುದು ಬಹಳ ಉತ್ತಮ ಕಾರ್ಯ. ಈ ನಿಟ್ಟಿನಲ್ಲಿ ತಾವು ಸಹ ಸಾಯಿಬಾಬಾ ಸೇವೆ ಮಾಡುತ್ತಾ ಧಾರ್ಮಿಕತೆಯತ್ತ ಸಾಗುತ್ತಿದ್ದೇನೆ. ಪ್ರತಿಯೊಬ್ಬರೂ ಸಹ ಬದುಕಿನಲ್ಲಿ ಧಾರ್ಮಿಕತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು. ಗುರುಪೂರ್ಣಿಮೆ ಅಂಗವಾಗಿ ಸಾಯಿನಾಥ ಮಂದಿರದಲ್ಲಿ ವಿದ್ವಾನ್ ನಿಟ್ಟೂರು ಮೋಹನ್ ರವರಿಂದ ಹರಿಕಥೆ ನಡೆಯಿತು. ರಾತ್ರಿ ಪಾವಗಡದ ರಾಮಕೃಷ್ಣಾಶ್ರಮದ ಅಧ್ಯಕ್ಷರಾದ ಶ್ರೀ ಜಪಾನಂದ ಸ್ವಾಮೀಜಿಯವರಿಂದ ಭಜನಾ ಕಾರ್ಯಕ್ರಮ ನೆರವೇರಿತು.
ಈ ಸಂದರ್ಭದಲ್ಲಿ ಶಿರಡಿಯ ಅರ್ಚಕರಾದ ಉಲ್ಲಾಸ್ ಪಂಡಿತ್, ಸಾಯಿಬಾಬಾ ಮಂದಿರದ ಕಾರ್ಯದರ್ಶಿ ಕೆ.ಎಸ್. ಗುರುಸಿದ್ದಪ್ಪ, ಟಿ.ಬಿ. ಹರೀಶ್, ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ಯೋಗ ಗುರು ಎಂ.ಕೆ. ನಾಗರಾಜರಾವ್, ಸಿದ್ದೇಶ್, ರಂಗನಾಥ್, ನಿಸರ್ಗ ರಮೇಶ್, ಬಿ.ವಿ. ಮಹದೇವಯ್ಯ, ರಂಗನಾಥ್, ರಾಜಶೇಖರ್ ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.

(Visited 1 times, 1 visits today)