ತುಮಕೂರು: ಕನಿಷ್ಠ ವೇತನ ಜಾರಿಗೊಳಿಸಿ ಸೇವಾ ಭದ್ರತೆ ಒದಗಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಶುಭಾಕಲ್ಯಾಣ್ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ನಗರದ ಟೌನ್ ಹಾಲ್ ನಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಸೇವಾ ಖಾಯಮಾತಿಗೆ ಒತ್ತಾಯಿಸಿದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹನುಮೇಗೌಡ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಪರಿಶಿಷ್ಟ ವರ್ಗಗಳ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಕಳೆದ ೧೫-೨೦ ವರ್ಷಗಳಿಂದಲೂ ಕಡಿಮೆ ಸಂಬಳಕ್ಕಾಗಿ ದುಡಿಯುತ್ತಿದ್ದಾರೆ. ಯಾವುದೇ ಜೀವನ ಭದ್ರತೆಯಿಲ್ಲ ಎಂದು ದೂರಿದರು.
ವಸತಿ ನಿಲಯ, ಶಾಲಾ-ಕಾಲೇಜುಗಳಲ್ಲಿ ಅಡುಗೆಯವರು, ಅಡುಗೆ ಸಹಾಯಕರು, ಸ್ವಚ್ಚತಾಗಾರರು, ಕಾವಲುಗಾರರು, ಡಿ.ಗ್ರೂಪ್ ಅಟೆಂಡರ್, ಕಂಪ್ಯೂಟರ್ ಆಪರೇಟರ್, ಡಾಟಾ ಎಂಟ್ರಿ ಆಪರೇಟರ್ಗಳು ಹೊರ ಗುತ್ತಿಗೆ ಅತಿಥಿ ಶಿಕ್ಷಕರುಗಳು ಕೆಲಸ ಮಾಡುತ್ತಿದ್ದಾರೆ. ಅವರುಗಳನ್ನೆಲ್ಲಾ ಖಾಯಂಗೊಳಿಸಿ ಕನಿಷ್ಠ ವೇತನ ನೀಡಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ರವಿಕುಮಾರ್ ಪ್ರತಿಭಟನೆಯನ್ನುದೇಶಿಸಿ ಮಾತನಾಡಿ, ಮೇ ತಿಂಗಳಿನಲ್ಲಿ ರಾಜ್ಯ ಸರ್ಕಾರ ಹಾಗೂ ಕಾರ್ಮಿಕ ಇಲಾಖೆ ವೇತನ ಪರಿಷ್ಕರಣೆ ಕುರಿತು ಕರಡು ಅಂತಿಮ ಅಧಿಸೂಚನೆ ಹೊರಡಿಸಿದ್ದು, ವಿಳಂಬ ಮಾಡದೆ ಕನಿಷ್ಠ ವೇತನವನ್ನು ತಕ್ಷಣ ನೀಡಬೇಕು. ತಿಂಗಳಿಗೆ ಕನಿಷ್ಠ ೩೬ ಸಾವಿರ ರೂ.ಗಳ ವೇತನ ಕೊಡಬೇಕೆಂದು ಒತ್ತಾಯಿಸಿದರು.
ಎಲ್ಲಾ ಹಾಸ್ಟೆಲ್ ಮತ್ತು ವಸತಿ ನಿಲಯ ಹೊರಗುತ್ತಿಗೆ ಸಿಬ್ಬಂದಿಗಳಿಗೆ ನಿವೃತ್ತಿಯವರೆಗೂ ಸೇವಾ ಭದ್ರತೆ ಒದಗಿಸಿ ಕೆಲಸ ಮಾಡುವ ಸ್ಥಳಗಳಲ್ಲಿಯೇ ಖಾಯಂಗೊಳಿಸಿ ನೇರವಾಗಿ ಇಲಾಖೆಯಿಂದ ವೇತನ ಪಾವತಿಸಬೇಕು. ಗುತ್ತಿಗೆದಾರರು ಸಂಬಳದ ಚೀಟಿ, ನೇಮಕಾತಿ ಆದೇಶ ಪತ್ರ, ಐ.ಡಿ.ಕಾರ್ಡ್, ಸರ್ವಿಸ್ ಸರ್ಟಿಫಿಕೇಟ್, ಇಎ. ಮತ್ತು ಪಿ.ಎಫ್. ಹಣ ಪಾವತಿಸಿರುವುದಕ್ಕೆ ಸಂಬAಧಿಸಿದAತೆ ರಶೀದಿ ಕೊಡಬೇಕೆಂದು ಆಗ್ರಹಿಸಿದರು.
ಹಿಂದುಳಿದ ವರ್ಗ ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಸಿಬ್ಬಂದಿಗಳ ಸಂಖ್ಯೆ ಕಡಿತಗೊಳಿಸಿರುವ ಆದೇಶವನ್ನು ಸರ್ಕಾರ ರದ್ದುಪಡಿಸಿ ೫೦ ವಿದ್ಯಾರ್ಥಿಗಳಿಗೆ ಮೂವರು ಸಿಬ್ಬಂದಿಯAತೆ ನೇಮಿಸಿ ಹಿಂದಿನ ಪದ್ಧತಿಯನ್ನು ಅನುಸರಿಸಬೇಕು. ೨೧ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಅಧಿಕಾರಿ ಸೋನಿಯಾ ವರ್ಣೇಕರ್ ಮಾತನಾಡಿದರು.
ಹೊರಗುತ್ತಿಗೆ ನೌಕರರಿಗೆ ಪಿಎಫ್ ಅನ್ನು ಒದಗಿಸುವ ನಿಟ್ಟಿನಲ್ಲಿ ವಸತಿ ಶಾಲೆ ಪ್ರಾಂಶುಪಾಲರಿAದ ದೃಢೀಕರಣವನ್ನು ಪಡೆಯಲಾಗಿದ್ದು, ಹೊರಗುತ್ತಿಗೆ ಏಜೆನ್ಸಿಯನ್ನು ಬದಲಿಸಲಾಗಿದ್ದು,ಪಿಎಫ್ ಹಣವನ್ನು ಪ್ರಾಂಶುಪಾಲರ ಮೂಲಕ ನೌಕರರ ಖಾತೆಗೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್.ಎಸ್.ಎನ್, ಶಂಕರಪ್ಪ, ಕೃಷ್ಣಮೂರ್ತಿ, ಶಿವಣ್ಣ, ಕಾಂತರಾಜು, ಲತಾ, ಆನಂದ್ ಸೇರಿದಂತೆ ನೂರಾರು ಮಹಿಳೆಯರು ಪ್ರತಿಭಟನೆಯಲ್ಲಿದ್ದರು.



