ಹುಳಿಯಾರು: ಹುಳಿಯಾರು ಪಟ್ಟಣ ಪಂಚಾಯಿತಿಯ ಘನತ್ಯಾಜ್ಯ ವಿಲೇವಾರಿ ಹಾಗೂ ಮಲಿನ ನೀರು ಶುದ್ಧೀಕರಣ ಘಟಕವನ್ನು ಯಳನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಸೂರನಹಳ್ಳಿ (ಸರ್ವೆ ನಂ. ೩೨) ಬಳಿ ನಿರ್ಮಿಸಲು ಮುಂದಾಗಿರುವ ಕ್ರಮಕ್ಕೆ ವಿಶೇಷ ಗ್ರಾಮ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು. ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು ಹಾಗೂ ನೂರಾರು ಗ್ರಾಮಸ್ಥರು ಘಟಕ ಸ್ಥಾಪನೆಯನ್ನು ತಕ್ಷಣವೇ ಸ್ಥಗಿತಗೊಳಿಸಿ, ಆ ಜಾಗವನ್ನು ಸ್ಥಳೀಯ ನಿವೇಶನ ರಹಿತ ಬಡವರಿಗೆ ಹಂಚಬೇಕು ಎಂದು ಒಕ್ಕೊರಲ ನಿರ್ಣಯ ಕೈಗೊಂಡರು.
ಸಭೆಯಲ್ಲಿ ಮಾತನಾಡಿದ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ವೈ.ಆರ್.ಮಲ್ಲಿಕಾರ್ಜುನಯ್ಯ ಅವರು ಮಾತನಾಡಿ ಘಟಕಕ್ಕೆ ಗುರುತಿಸಿರುವ ಜಾಗದ ಸುತ್ತಮುತ್ತ ಯಳನಾಡು, ಕೆರೆಸೂರನಹಳ್ಳಿ, ಹುಳಿಯಾರು, ತಮಡಿಹಳ್ಳಿ, ಗೊಲ್ಲರಹಟ್ಟಿ, ಕೆರೆಸೂರಗೊಂಡನಹಳ್ಳಿ, ವಳಗೆರೆಹಳ್ಳಿ ಹಾಗೂ ಹೊಸಹಳ್ಳಿ ಪಾಳ್ಯ ಸೇರಿದಂತೆ ಹಲವು ಗ್ರಾಮಗಳಿವೆ. ಸಮೀಪದ ೫೦-೬೦ ಎಕರೆ ಪ್ರದೇಶದಲ್ಲಿ ಈಗಾಗಲೇ ಬಡಾವಣೆಗಳು ನಿರ್ಮಾಣವಾಗಿ ನೂರಾರು ಕುಟುಂಬಗಳು ನೆಲೆಸಿವೆ. ಇಲ್ಲಿ ತ್ಯಾಜ್ಯ ಘಟಕ ನಿರ್ಮಿಸಿದರೆ ಸಾಂಕ್ರಾಮಿಕ ರೋಗಗಳು ಹರಡುವುದರ ಜೊತೆಗೆ, ಮಳೆ ನೀರಿನೊಂದಿಗೆ ಕಲುಷಿತ ನೀರು ಹುಳಿಯಾರು ಕೆರೆ ಸೇರಿ ಅಂತರ್ಜಲ ಹಾಗೂ ಜಲಚರಗಳಿಗೆ ಹಾನಿಯಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಪರಿಸರ ಇಲಾಖೆಯ ನಿಯಮಗಳ ಪ್ರಕಾರ ಜನವಸತಿ, ಕೆರೆ ಮತ್ತು ರಾಷ್ಟಿçÃಯ ಹೆದ್ದಾರಿಯಿಂದ ಕನಿಷ್ಠ ೨೦೦ ಮೀಟರ್ ಹಾಗೂ ನದಿಯಿಂದ ೧೦೦ ಮೀಟರ್ ದೂರವಿರಬೇಕು. ಆದರೆ, ಈ ಜಾಗ ರಾಷ್ಟಿçÃಯ ಹೆದ್ದಾರಿಯಿಂದ ಕೇವಲ ೫೦ ಮೀಟರ್ ಮತ್ತು ಕಾಲುವೆಯಿಂದ ೨೦ ಮೀಟರ್ ದೂರದಲ್ಲಿದೆ. ಸ್ಥಳೀಯ ಗ್ರಾಮ ಪಂಚಾಯಿತಿಯ ಅನುಮತಿ, ಭೂಪರಿವರ್ತನೆ ಹಾಗೂ ಪರಿಸರ ಇಲಾಖೆಯ ಎನ್ಒಸಿ ಪಡೆಯದೆ ಪೊಲೀಸ್ ಭದ್ರತೆಯಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಈ ಹಿಂದೆ ೬-೭ ಕಡೆಗಳಲ್ಲಿ ಸಾರ್ವಜನಿಕರ ವಿರೋಧದಿಂದ ಕೈಬಿಟ್ಟಿದ್ದ ಯೋಜನೆಯನ್ನು ಇಲ್ಲಿ ಹೇರಲಾಗುತ್ತಿದೆ ಎಂದು ಆರೋಪಿಸಿದ ಅವರು, ಕಾಮಗಾರಿ ನಿಲ್ಲಿಸದಿದ್ದರೆ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿ, ಅಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಸಿದರು.
ಕೆಡಿಪಿ ನಾಮನಿರ್ದೇಶಿತ ಸದಸ್ಯ ತಮ್ಮಡಿಹಳ್ಳಿ ದೇವರಾಜು ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಾಗವನ್ನು ಉಳಿಸಿಕೊಂಡು, ಸ್ಥಳೀಯ ವಸತಿ ಮತ್ತು ನಿವೇಶನ ರಹಿತ ಬಡವರಿಗೆ ನಿವೇಶನ ಹಾಗೂ ಮನೆ ನಿರ್ಮಿಸಿಕೊಡಲು ಮುಂಬರುವ ಕೆಡಿಪಿ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಭರವಸೆ ನೀಡಿದರಲ್ಲದೆ ಪ್ರತಿ ತಾಲೂಕಿಗೆ ೫,೦೦೦ ನಿವೇಶನಗಳನ್ನು ಗುರುತಿಸಿ, ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಜಾಗದಲ್ಲಿ ಅರ್ಹ ಫಲಾನುಭವಿಗಳಿಗೆ ನೀಡಬೇಕು ಎಂಬ ಸರ್ಕಾರದ ಆದೇಶವಿದೆ. ಆದ್ದರಿಂದ ನಮ್ಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಜಾಗವನ್ನು ಬೇರೆ ಪಟ್ಟಣ ಪಂಚಾಯಿತಿಗಾಗಲಿ ಅಥವಾ ಘನತ್ಯಾಜ್ಯ ಘಟಕಕ್ಕಾಗಲಿ ನೀಡಲು ಸಿದ್ಧರಿಲ್ಲ. ನಮ್ಮ ವ್ಯಾಪ್ತಿಯು ಗಡಿಭಾಗದಿಂದ ೦.೫ ಕಿ.ಮೀ. ವ್ಯಾಪ್ತಿಯಲ್ಲಿ ಬರುವುದರಿಂದ, ಇದನ್ನು ಗಡಿಭಾಗದ ಪ್ರದೇಶವೆಂದು ಗುರುತಿಸಿ ಹೆಚ್ಚಿನ ಅನುದಾನ ತಂದು ಬಡವರಿಗೆ ಮನೆ ಕಟ್ಟಿಸಿಕೊಡಲು ಶ್ರಮಿಸಲಾಗುವುದು ಎಂದರು.
ವಕೀಲ ಬಸವರಾಜೇಂದ್ರ ಮಾತನಾಡಿ, ಘಟಕದ ಸುತ್ತಮುತ್ತ ರೈತರು ಕೃಷಿ ಮಾಡುತ್ತಿದ್ದು, ಅನೇಕ ಬಡ ಹಾಗೂ ಹಿಂದುಳಿದ ಕುಟುಂಬಗಳು ತೋಟದ ಮನೆಗಳಲ್ಲಿ ವಾಸಿಸುತ್ತಿವೆ. ಕಸದ ಘಟಕ ಆರಂಭವಾದರೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಲಿದೆ. ಪಿಡಿಒ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಿ, ಸ್ಥಳ ಪರಿಶೀಲನೆ ಮಾಡಿಸಿದರೂ ಕ್ರಮ ಕೈಗೊಂಡಿಲ್ಲ ಎಂದರು.
ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಕಾಂತರಾಜು ಅವರು ಮಾತನಾಡಿ ಘನತ್ಯಾಜ್ಯ ವಿಲೇವಾರಿ ಘಟಕದ ನಿರ್ಮಾಣವನ್ನು ತಕ್ಷಣವೇ ನಿಲ್ಲಿಸಬೇಕು ಎಂಬುದು ಗ್ರಾಮಸ್ಥರ ಮೊದಲ ಬೇಡಿಕೆಯಾಗಿದ್ದು, ನಿರ್ಣಯದಂತೆ ಕ್ರಮ ವಹಿಸಲಾಗುವುದು. ಆ ಜಾಗವನ್ನು ನಿವೇಶನ ರಹಿತರಿಗೆ ನಿವೇಶನ ಹಾಗೂ ಮನೆ ನಿರ್ಮಿಸಲು ಬಳಸಿಕೊಳ್ಳುವ ಬೇಡಿಕೆಯನ್ನೂ ನಿರ್ಣಯದಲ್ಲಿ ಸೇರಿಸಲಾಗಿದೆ. ಎಂದರಲ್ಲದೆ ಅನುಮತಿ ಇಲ್ಲದ ಕಾಮಗಾರಿಗೆ ನೋಟಿಸ್ ನೀಡಿ, ಇಂದೇ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವಂತೆ ಪಿಡಿಒ ಹರೀಶ್ ಅವರಿಗೆ ಸೂಚಿಸಿದರು ಹಾಗೂ ಗ್ರಾಮಸ್ಥರಿಂದ ನಿವೇಶನ, ವಸತಿ ಅರ್ಜಿಗಳನ್ನು ಸ್ವೀಕರಿಸಿ ಸ್ವೀಕೃತಿ ಪತ್ರ ನೀಡಲು ತಿಳಿಸಿ ಸಭೆ ಮುಕ್ತಾಯ ಮಾಡಲಾಯಿತು.
(Visited 1 times, 1 visits today)



