ತುಮಕೂರು: ಕೃತಕ ಬುದ್ಧಿಮತ್ತೆಯು ಪೂರಕವೋ ಮಾರಕವೋ ಎಂಬ ವಿಷಯದ ಬಗ್ಗೆ ಇನ್ನರ್ ವ್ಹೀಲ್ ಕ್ಲಬ್ ತುಮಕೂರು ವತಿಯಿಂದ ಶನಿವಾರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅಂತರ ಶಾಲಾ ಚರ್ಚಾ ಸ್ಪರ್ಧೆ ಆಯೋಜಿಸಲಾಗಿತ್ತು. ವಿವಿಧ ಶಾಲಾ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ನಗರದ ಅನನ್ಯ ಕಾಲೇಜು ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಕ್ಲಬ್‌ನ ಅಧ್ಯಕ್ಷೆ ರೇಖಾ ಶಿವಕುಮಾರ್, ಚರ್ಚಾ ಸ್ಪರ್ಧೆಯಿಂದ ವಿದ್ಯಾರ್ಥಿಗಳಲ್ಲಿ ತಾರ್ಕಿಕ ಚಿಂತನೆ, ಆತ್ಮವಿಶ್ವಾಸ, ಮಾತುಗಾರಿಕೆ ಮತ್ತು ಪ್ರಶ್ನಿಸುವ ಮನೋಭಾವ ಬೆಳೆಯುತ್ತದೆ. ಭಾಷಣ ಕಲೆ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಬಳಸಿಕೊಳ್ಳಬೇಕುಎಂದುತಿಳಿಸಿದರು.
ಸ್ನೇಹ, ಸೇವೆ ಆಶಯದೊಂದಿಗೆ ಹುಟ್ಟಿಕೊಂಡ ಇನ್ನರ್ ವ್ಹೀಲ್ ಸಂಸ್ಥೆ ಇಂದು ನೂರಕ್ಕೂ ಹೆಚ್ಚು ದೇಶಗಳಲ್ಲಿ, ೧೮೨ ಜಿಲ್ಲೆಗಳಲ್ಲಿ, ೪,೨೦೦ ಸಂಸ್ಥೆಗಳನ್ನು ಹೊಂದಿ ೧,೧೫,೦೦೦ ಸದಸ್ಯರನ್ನು ಹೊಂದಿದೆ. ಭಾರತದಲ್ಲಿ ೨೦ ಜಿಲ್ಲೆಗಳು, ೧,೭೫೧ ಸಂಸ್ಥೆಗಳು, ೬೦,೩೪೪ ಸದಸ್ಯರಿದ್ದಾರೆ. ನಮ್ಮ ೩೧೯ನೇ ಜಿಲ್ಲೆಯಲ್ಲಿ ೪೮ ಸಂಸ್ಥೆಗಳು, ೨,೨೦೪ ಸದಸ್ಯರಿದ್ದಾರೆ ಎಂದರು.
೧೯೬೮ರ ಜೂನ್‌ನಲ್ಲಿ ಆರಂಭವಾದ ತುಮಕೂರು ಇನ್ನರ್ ವ್ಹೀಲ್ ಸಂಸ್ಥೆ ಮುಂದಿನ ವರ್ಷ ೬೦ನೇ ವರ್ಷಕ್ಕೆ ಕಾಲಿಡುತ್ತಿದೆ. ಶಿಕ್ಷಣ, ಪರಿಸರ, ಜೀವನೋಪಾಯ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹಾಯ ಮಾಡುತ್ತಾ ಬಂದಿದೆ. ಪ್ರಪಂಚದ ಏಕೈಕ ಮಹಿಳಾ ಸಂಸ್ಥೆ ಇನ್ನರ್ ವ್ಹೀಲ್ ಎಂದು ಹೇಳಿದರು.
ನಿವೃತ್ತ ಪ್ರಾಧ್ಯಾಪಕರಾದ ಅಮೃತ ವೀರಭದ್ರಯ್ಯ, ಸುಮಂಗಳ ಚರ್ಚಾ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ಅನನ್ಯ ಕಾಲೇಜು ಸಂಸ್ಥೆ ನಿರ್ದೇಶಕ ಡಾ. ಹರೀಶ್ ಹೆಚ್. ಅತಿಥಿಯಾಗಿ ಭಾಗವಹಿಸಿದ್ದರು. ಇನ್ನರ್ ವ್ಹೀಲ್ ಸಂಸ್ಥೆ ಕಾರ್ಯದರ್ಶಿ ಮಂಜುಳಾ ವಿಜಯಶಂಕರ್, ನಿಕಟಪೂರ್ವ ಅಧ್ಯಕ್ಷರಾದ ಮಂಜುಳಾ ಲೋಕೇಶ್, ಸಂಚಾಲಕಿ ವೀಣಾ ಉಮಾಶಂಕರ್, ಐಎಸ್‌ಓ ಲತಾ ಮಹೇಶ್, ಸಂಸ್ಥೆ ಪತ್ರಿಕೆ ಸಂಪಾದಕಿ ಒ.ಕೆ. ವೀಣಾ, ಮುಖಂಡರಾದ ರೇಖಾ ಬಾಬು, ಸುಮಿತ್ರಾ ನಾಗರಾಜು, ರಾಜೇಶ್ವರಿ ರುದ್ರಪ್ಪ, ಮಂಜುಳಾ ಚಂದ್ರಪ್ಪ, ಮಮತಾ ಫಣೀಂದ್ರ, ಮಮತಾ ಪ್ರಸಾದ್ ಮೊದಲಾದವರು ಭಾಗವಹಿಸಿದ್ದರು.

(Visited 1 times, 1 visits today)