ಹುಳಿಯಾರು: ಹಂದನಕೆರೆ ಹೋಬಳಿ ಮತ್ತಿಘಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಿಗಿಹಳ್ಳಿ ಗ್ರಾಮದಲ್ಲಿ ಡೈರಿ ಕಟ್ಟಡದ ಪಿಲ್ಲರ್ ಕುಸಿದು ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಜರಗಿದೆ.
ನಾಲ್ಕನೆ ತರಗತಿ ವಿದ್ಯಾರ್ಥಿ ಧನುಷ್ ಮೃತ ದುರ್ಧೈವಿಯಾಗಿದ್ದಾನೆ. ಈತ ತನ್ನ ಮೂವರು ಸ್ನೇಹಿತರೊಂದಿಗೆ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ಪಕ್ಕದಲ್ಲಿರುವ ನಂದಿನಿ ಡೈರಿ ಕಟ್ಟಡದ ಸಮೀಪ ಆಟವಾಡುತ್ತಿದ್ದ. ಈ ವೇಳೆ ಕಟ್ಟಡದ ಡಮ್ಮಿ ಪಿಲ್ಲರ್‌ವೊಂದು ಏಕಾಏಕಿ ಧನುಷ್ ಮೇಲೆ ಕುಸಿದು ಬಿದ್ದಿದೆ. ತಲೆಗೆ ತೀರ್ವ ಪೆಟ್ಟು ಬಿದ್ದ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಶಾಲೆಯ ಪಕ್ಕದಲ್ಲೇ ಇಷ್ಟೊಂದು ಅಪಾಯಕಾರಿ ಸ್ಥಿತಿಯಲ್ಲಿ ಕಟ್ಟಡವಿದ್ದರೂ ಸಂಬAಧಪಟ್ಟ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿರುವುದೇ ಈ ದುರ್ಘಟನೆಗೆ ಪ್ರಮುಖ ಕಾರಣ ಎಂದು ಸ್ಥಳೀಯರು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಅನಾಹುತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ, ನಿರ್ಲಕ್ಷ÷್ಯ ತೋರಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಘಟನಾ ಸ್ಥಳಕ್ಕೆ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ, ಮಕ್ಕಳ ಆಯೋಗದ ನಿರ್ದೇಶಕರಾ ಸತ್ಯನಾರಾಯಣಶೆಟ್ಟಿ, ತಹಸೀಲ್ದಾರ್ ಮಮತಾ, ಸಿಪಿಐ ಜನಾರ್ಧನ್, ತುಮುಲು ನಿರ್ದೇಶಕ ಶಿವಪ್ರಕಾಶ್, ಸೇರಿದಂತೆ ಅನೇಕರು ಭೇಟಿ ನೀಡಿ ಘಟನೆಯ ವಿವರ ಪಡೆದುಕೊಂಡು ಕುಟುಂಬವರ್ಗದವರಿಗೆ ಸಾಂತ್ವಾನ ಹೇಳಿದರು.
ಡಾ.ಜಿ.ಪರಮೇಶ್ವರ್ ಎಕ್ಸ್ ಖಾತೆಯಲ್ಲಿ ತೀವ್ರ ಸಂತಾಪ: ಚಿಕ್ಕನಾಯಕನಹಳ್ಳಿ ತಾಲೂಕಿನ ಬೆಳಗಿಹಳ್ಳಿ ಗ್ರಾಮದಲ್ಲಿ ಶಾಲಾ ಆವರಣದಲ್ಲಿ ಆಟವಾಡುತ್ತಿದ್ದ ವೇಳೆ ವಿದ್ಯಾರ್ಥಿಯೊಬ್ಬನ ಮೇಲೆ ಪಿಲ್ಲರ್ ಕುಸಿದು ಬಿದ್ದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.
ಇನ್ನೂ ಎಳೆಯ ಪ್ರಾಯದ ಕಂದಮ್ಮ ಹೀಗೆ ದುರಂತ ಸಾವಿಗೀಡಾದುದ್ದು ದುರದೃಷ್ಟಕರ. ತಮ್ಮ ಮಗುವನ್ನು ಕಳೆದುಕೊಂಡ ಹೆತ್ತವರ ನೋವು – ಸಂಕಟವನ್ನು ನಾನು ಅರ್ಥೈಸಿಕೊಳ್ಳಬಲ್ಲೆ. ನೊಂದ ಜೀವಗಳ ಜೊತೆ ನಾನಿದ್ದೇನೆ. ಮೃತನ ಆತ್ಮಕ್ಕೆ ಶಾಂತಿ ಲಭಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
ಮೃತ ಬಾಲಕನ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಒದಗಿಸಲಾಗುವುದು. ಮುಂದೆ ಇಂತಹ ಘಟನೆ ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಗರಿಷ್ಟ ಪರಿಹಾರ ಕೊಡಿಸಲು ತಹಸೀಲ್ದಾರ್‌ಗೆ ಸೂಚನೆ: ಈ ರೀತಿಯ ಘಟನೆ ರಾಜ್ಯದಲ್ಲೇ ಮೊದಲು. ಸತ್ತಿರುವ ಬಾಲಕ ಪುನಃ ಬರುವುದಿಲ್ಲ. ಯಾವ ಮೂಲದಿಂದ ಹೇಗೆ ಪರಿಹಾರ ಕೊಡಿಸಬಹುದೆಂದು ಚರ್ಚಿಸಿ ಗರಿಷ್ಟ ಪರಿಹಾರವನ್ನು ಕುಟುಂಬಕ್ಕೆ ಕೊಡಿಸಿ. ಬಿಲ್ಡಿಂಗ್ ಕಟ್ಟಿದವರ ಮೇಲೆ ಕ್ರಮ ಕೈಗೊಳ್ಳಿ ಬಿಡಬೇಡಿ. ಇಲಾಖಾ ಎಂಜಿನಿಯರ್ ಮೂಲಕ ತನಿಖೆ ಮಾಡಿಸಿ ೨ ದಿನದಲ್ಲಿ ರಿಪೋಟ್ ಕಳುಹಿಸಿಕೊಡಿ ಎಂದು ಮಕ್ಕಳ ಆಯೋಗದ ನಿರ್ದೇಶಕರಾದ ಸತ್ಯನಾರಾಯಣ ಶೆಟ್ಟಿ ತಹಸೀಲ್ದಾರ್ ಮಮತಾಗೆ ಸೂಚನೆ ನೀಡಿದ್ದಾರೆ.
(Visited 1 times, 1 visits today)



