ತುಮಕೂರು: ತುಮಕೂರು ನಗರದ ಜನಚಳವಳಿ ಕೇಂದ್ರದಲ್ಲಿ ಆಗಸ್ಟ್ ೩೦ರಂದು ಭಾನುವಾರ ಡಿವೈಎಫ್‌ಐನ ೧೦ನೇ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಿವೈಎಫ್‌ಐ ಮಾಜಿ ಅಧ್ಯಕ್ಷ ಎಸ್.ರಾಘವೇಂದ್ರ ಭಾರತ ಸಂವಿಧಾನವು ದೇಶದ ಎಲ್ಲಾ ಪ್ರಜೆಗಳಿಗೂ ಉದ್ಯೋಗ, ಶಿಕ್ಷಣ, ಆರೋಗ್ಯ ಖಾತ್ರಿಗೊಳಿಸಿದೆ. ಆದರೆ ಇತ್ತೀಚೆಗೆ ಖಾಸಗಿ ಕರಣದ ಪ್ರಭಾವದಿಂದ ಉದ್ಯೋಗ, ಶಿಕ್ಷಣ, ಆರೋಗ್ಯ ಜನಸಾಮಾನ್ಯರಿಗೆ ದುಬಾರಿಯಾಗಿದೆ. ಈ ಮೂಲಭೂತ ಹಕ್ಕುಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಸರ್ಕಾರದ್ದಾಗಿರುತ್ತದೆ. ಆದರೆ ಸರ್ಕಾರಗಳು ಕಾರ್ಪೋರೇಟ್ ಪರ ನೀತಿಗಳಿಂದ ಯುವಜನರು ನಿರುದ್ಯೋಗದಿಂದ ನರಳುವಂತಾಗಿದೆ. ಡಿವೈಎಫ್‌ಐ ಸಂಘಟನೆಯು ದೇಶದ ಯುವಜನರ ಹಕ್ಕುಗಳಿಗಾಗಿ ನಿರಂತರವಾದ ಹೋರಾಟವನ್ನು ನಡೆಸುತ್ತಿದ್ದು, ಭಗತ್ ಸಿಂಗ್ ಆದರ್ಶದ ಮೂಲಕ ದೇಶವ್ಯಾಪಿ ಕಾರ್ಯ ನಿರ್ವಹಿಸುತ್ತಿರುವ ಅತ್ಯಂತ ದೊಡ್ಡ ಸಂಘಟನೆಯಾಗಿದೆ. ಜಿಲ್ಲೆಯಲ್ಲಿ ಹಲವು ಹೋರಾಟಗಳು ಡಿವೈಎಫ್‌ಐ ನೇತೃತ್ವದಲ್ಲಿ ನಡೆದಿವೆ. ಇಂತಹ ದೇಶಪ್ರೇಮಿ ಸಂಘಟನೆಗೆ ಪ್ರತಿ ಯೊಬ್ಬ ಯುವಜನರು ಸದಸ್ಯರಾಗಬೇಕು ಎಂದರು.
ಎಸ್‌ಎಫ್‌ಐ ಮಾಜಿ ಜಿಲ್ಲಾಧ್ಯಕ್ಷ ಈ.ಶಿವಣ್ಣ ಮಾತನಾಡಿ, ದೇಶದಲ್ಲಿ ನಿರುದ್ಯೋಗ ಪ್ರಮಾಣವು ಕಳೆದ ಹತ್ತು ವರ್ಷದಲ್ಲಿ ದೊಡ್ಡ ಮಟ್ಟದಲ್ಲಿ ಸೃಷ್ಟಿಯಾಗಿದೆ. ಕೇಂದ್ರ ಸರ್ಕಾರದ ದುಬಾರಿ ತೆರಿಗೆಗಳು ಕೈಗಾರಿಕೆಗಳನ್ನು ಸ್ಥಗಿತಗೊಳಿಸುವಂತೆ ಮಾಡಿವೆ. ಕಳೆದ ಐದು ವರ್ಷದಲ್ಲಿ ದೇಶದಲ್ಲಿ ೮೦ಲಕ್ಷಕ್ಕೂ ಅಧಿಕ ಕೈಗಾರಿಕೆಗಳು ಸ್ಥಗಿತಗೊಂಡಿವೆ. ಪರಿಣಾಮವಾಗಿ ದೇಶದಲ್ಲಿ ನಿರುದ್ಯೋಗ ಸೃಷ್ಟಿಯಾಗಿದೆ. ಕೈಗಾರಿಕೆಗಳು ಮತ್ತು ಸಾಫ್ಟವೇರ್ ಕಂಪನಿಗಳು, ಐಟಿ-ಬಿಟಿ ಕಂಪನಿಗಳು ಉದ್ಯೋಗಳನ್ನು ಕಡಿತಗೊಳಿಸಿವೆ. ಕೇವಲ ಬೆರಳೆಣಿಕೆಯಷ್ಟು ಉದ್ಯೋಗಿಗಳನ್ನು ನೇಮಿಸಿ ಕಾರ್ಯ ನಿರ್ವಹಿಸಿಕೊಳ್ಳುತ್ತಿವೆ. ಇನ್ನು ಸರ್ಕಾರಿ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಮಿಕರು ಮತ್ತು ನೌಕರರನ್ನು ನೇಮಿಸಿಕೊಳ್ಳಲಾಗುತ್ತಿದ್ದು, ಸರ್ಕಾರಿ ಕೆಲಸ ಎಂಬುದು ಕನಸಿನ ಮಾತಾಗಿದೆ.
ದೇಶದ ಪ್ರತಿಯೊಬ್ಬ ಪ್ರಜೆಯು ಸಹ ತೆರಿಗೆಯನ್ನು ಪಾವತಿಸುತ್ತಿದ್ದು, ಆರೋಗ್ಯ, ಶಿಕ್ಷಣ ಮತ್ತು ಉದ್ಯೋಗ ಈ ವಿಚಾರಗಳಿಗೆ ಗಮನಹರಿಸದೆ ಕೇವಲ ತೆರಿಗೆಗೆ ಮಾತ್ರ ಸರ್ಕಾರಗಳು ಸೀಮಿತವಾಗಿವೆ. ಕೇಂದ್ರ ಸರ್ಕಾರವು ದೊಡ್ಡ ದೊಡ್ಡ ಉದ್ಯಮಿಗಳ ಸಾಲ ಮನ್ನಾ ಮಾಡುತ್ತಿದೆ. ಆದರೆ ಮಧ್ಯಮ ವರ್ಗ ಮತ್ತು ರೈತಾಪಿ ವರ್ಗ ಬೆಲೆ ಏರಿಕೆಯಿಂದ ಜೀವನ ನಡೆಸುವುದು ದುಸ್ತರವಾಗಿದೆ. ಕೇವಲ ಧಾರ್ಮಿಕ ವಿಚಾರಗಳನ್ನು ಮುಂದಿಟ್ಟುಕೊAಡು ಜನರ ಮೂಲಭೂತ ಹಕ್ಕುಗ ಳನ್ನು ಕೇಂದ್ರ ಸರ್ಕಾರ ದಮನ ಮಾಡುತ್ತಿದೆ. ಯುವಜನರು ಎಚ್ಚೆತ್ತುಕೊಳ್ಳಬೇಕಾಗಿದೆ. ರಾಜ್ಯ ಸರ್ಕಾರವು ರಾಜ್ಯದಲ್ಲಿ ಖಾಲಿ ಇರುವ ಉದ್ಯೋಗಗಳನ್ನು ಭರ್ತಿ ಮಾಡುವ ಮೂಲಕ ಯುವಜನರಿಗೆ ಉದ್ಯೋಗ ನೀಡಬೇಕು ಎಂದು ಮನವಿ ಮಾಡಿದರು.
ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಎಂ.ಜಿ. ಮಂಜು ಮಾತನಾಡಿದರು. ಕಾರ್ಯಕ್ರಮದಲ್ಲಿ ಮಧು, ಬಾಲಕೃಷ್ಣ, ಸುಜಿತ್ ನಾಯಕ್ ಭಾಗವಹಿಸಿದ್ದರು.
(Visited 1 times, 1 visits today)



