ಕೊರಟಗೆರೆ: ತಾಲೂಕಿನ ಜಿ. ನಾಗೇನಹಳ್ಳಿ ಸಮೀಪದ ಶ್ರೀ ಬಯಲು ಆಂಜನೇಯ ಸ್ವಾಮಿ ಹಾಗೂ ಶನೇಶ್ವರ ಸ್ವಾಮಿ ದೇವಾಲಯದಲ್ಲಿ ನಾಲ್ಕನೇ ಶ್ರಾವಣ ಶನಿವಾರದ ಅಂಗವಾಗಿ ವಿಶೇಷ ಪೂಜೆ, ಪಂಚಾಮೃತ ಅಭಿಷೇಕ ಹಾಗೂ ಹೂವಿನ ಅಲಂಕಾರ ನೆರವೇರಿತು.
ಭಕ್ತರಾದ ನಲ್ಲಮಂಜು ಹಾಗೂ ಸ್ನೇಹಿತರ ನೇತೃತ್ವದಲ್ಲಿ ಸ್ವಾಮಿಯವರಿಗೆ ಪಂಚಾಮೃತ ಅಭಿಷೇಕ ನೆರವೇರಿಸಿ, ವಿವಿಧ ಬಗೆಯ ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಯಿತು. ಬೆಳಗ್ಗಿನಿಂದಲೇ ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆದು ವಿಶೇಷ ಅಲಂಕಾರವನ್ನು ಕಣ್ತುಂಬಿಕೊAಡರು.
ವಿಶೇಷ ಪೂಜೆ, ಮಂಗಳಾರತಿ ಹಾಗೂ ಪ್ರಸಾದ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಪ್ರಸಾದ ಸೇವೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡರು. ಭಕ್ತರಿಗೆ ಕುಡಿಯುವ ನೀರು ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿತ್ತು.
ಹತ್ತು ವರ್ಷಗಳಿಂದ ಸೇವೆ: ಭಕ್ತ ನಲ್ಲಮಂಜು ಮಾತನಾಡಿ, ಸುಮಾರು ಹತ್ತು ವರ್ಷಗಳಿಂದ ಪ್ರತಿ ಶ್ರಾವಣ ಶನಿವಾರದಂದು ಬಯಲು ಆಂಜನೇಯ ಸ್ವಾಮಿ ಹಾಗೂ ಶನೇಶ್ವರ ಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಮತ್ತು ಪ್ರಸಾದ ಸೇವೆ ನಡೆಸಿಕೊಂಡು ಬರುತ್ತಿದ್ದೇವೆ. ಈ ವರ್ಷವೂ ಸ್ನೇಹಿತರು, ಭಕ್ತರು ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಸಹಕಾರದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಭಕ್ತರಿಗೆ ಯಾವುದೇ ತೊಂದರೆಯಾಗದAತೆ ಕುಡಿಯುವ ನೀರು ಹಾಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿದ್ದು, ಸ್ವಾಮಿಯ ಆಶೀರ್ವಾದ ಎಲ್ಲರ ಮೇಲಿರಲಿ ಎಂಬುದು ನಮ್ಮ ಆಶಯ ಎಂದರು.
ಮೂಲಸೌಕರ್ಯ ಕಲ್ಪಿಸಲು ಮನವಿ: ಮಾವತ್ತೂರು ಜೆಡಿಎಸ್ ಮುಖಂಡ ಮಂಜುನಾಥ್ ಮಾತನಾಡಿ, ಚಿಕ್ಕ ವಯಸ್ಸಿನಿಂದಲೂ ದೇವಸ್ಥಾನಕ್ಕೆ ಬರುತ್ತಿದ್ದು, ಹಿಂದಿನ ದೇವಸ್ಥಾನಕ್ಕೂ ಈಗಿನ ದೇವಸ್ಥಾನಕ್ಕೂ ಸಾಕಷ್ಟು ಬದಲಾವಣೆಯಾಗಿದೆ. ದೇವಸ್ಥಾನದ ಅಭಿವೃದ್ಧಿಯೂ ಉತ್ತಮವಾಗಿ ನಡೆಯುತ್ತಿದೆ. ಆದರೆ ಭಕ್ತರಿಗೆ ಪ್ರಸಾದ ಸ್ವೀಕರಿಸಲು ಸಮುದಾಯ ಭವನ ಹಾಗೂ ಶೌಚಾಲಯದ ವ್ಯವಸ್ಥೆ ಅಗತ್ಯವಿದೆ. ಸರ್ಕಾರ ಅಥವಾ ದಾನಿಗಳು ಈ ಬಗ್ಗೆ ಗಮನಹರಿಸಿ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ದೇವಸ್ಥಾನದ ಅರ್ಚಕರು ಮಾತನಾಡಿ, ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಬಯಲು ಆಂಜನೇಯ ಸ್ವಾಮಿ ಹಾಗೂ ಶನೇಶ್ವರ ಸ್ವಾಮಿಗೆ ವಿಶೇಷ ಪೂಜೆ, ಅಭಿಷೇಕ ಹಾಗೂ ಅಲಂಕಾರ ನೆರವೇರಿಸಲಾಗಿದೆ. ಸ್ವಾಮಿಯ ಕೃಪೆಯಿಂದ ಎಲ್ಲ ಭಕ್ತರಿಗೆ ಸುಖ, ಶಾಂತಿ, ಆರೋಗ್ಯ ಹಾಗೂ ಸಮೃದ್ಧಿ ದೊರೆಯಲಿ ಎಂದರು. ಭಕ್ತರಾದ ಕೆ.ಟಿ. ಮಂಜುನಾಥ್, ದೇವಸ್ಥಾನದ ಟ್ರಸ್ಟಿ ಚಿನ್ನಿ ಪ್ರಕಾಶ್, ಆಡಳಿತ ಮಂಡಳಿ ಸದಸ್ಯ ಲಕ್ಷ÷್ಮಣಪ್ಪ ಮಾತನಾಡಿದರು.
ನಾಲ್ಕನೇ ಶ್ರಾವಣ ಶನಿವಾರದ ಅಂಗವಾಗಿ ನಡೆದ ವಿಶೇಷ ಪೂಜೆ, ಭಕ್ತರ ಗಮನ ಸೆಳೆಯಿತು. ದೇವಸ್ಥಾನದ ಮತ್ತಷ್ಟು ಅಭಿವೃದ್ಧಿಗೆ ಸರ್ಕಾರ ಹಾಗೂ ದಾನಿಗಳು ಸಹಕಾರ ನೀಡಬೇಕು ಎಂಬು ದು ಭಕ್ತರು ಹಾಗೂ ಮಂಡಳಿಯ ಆಶಯವಾಗಿದೆ.

(Visited 1 times, 1 visits today)