ತುಮಕೂರು: ಸರ್ಕಾರದ ಆಡಳಿತ ವ್ಯವಸ್ಥಿತವಾಗಿ ನಡೆಯಬೇಕು. ಸರ್ಕಾರವೇ ಜನರ ಬಳಿ ಹೋಗಿ ಅವರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಜನರು ತಮ್ಮ ಸಮಸ್ಯೆಗಳನ್ನು ಹೊತ್ತು ತಾಲ್ಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳ ಕಚೇರಿಗಳಿಗೆ ಅಲೆದಾಡಿಸುವುದನ್ನು ತಪ್ಪಿಸಬೇಕು ಎಂಬ ಉದ್ದೇಶದಿಂದ ಪ್ರಜಾ ಸೇವಾ ಇಲಾಖೆಯನ್ನು ಇಂದಿನಿAದ ಹೊಸದಾಗಿ ಆರಂಭಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ, ಕಂದಾಯ ಹಾಗೂ ಕ್ರೀಡಾ ಸಚಿವರಾದ ಡಾ. ಜಿ.ಪರಮೇಶ್ವರ ಹೇಳಿದರು.
ಜಿಲ್ಲಾಡಳಿತದ ವತಿಯಿಂದ ಶನಿವಾರ ಗುಬ್ಬಿ ಪಟ್ಟಣದಲ್ಲಿ ಆಯೋಜಿಸಿದ್ದ ಮೊದಲ ಪ್ರಜಾ ಸೇವಾ ಅಭಿಯಾನ ಜನಸಭೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸೆಪ್ಟೆಂಬರ್ ೫ ನಮ್ಮೆಲ್ಲರಿಗೂ ಆದರ್ಶಪ್ರಾಯರಾದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ. ಇಡೀ ದೇಶದಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದೆ. ಅದೇ ದಿನ ಪ್ರಜಾ ಸೇವಾ ಅಭಿಯಾನ ಆಚರಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೀಡಿದ ಕರೆಯಂತೆ ಇಂದು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರು ಈ ನೂತನ ಕಾರ್ಯಕ್ಕೆ ಚಾಲನೆ ನೀಡುತ್ತಿದ್ದಾರೆ ಎಂದರು.
ಹೊಸದಾಗಿ ಸೃಜಿಸಲಾದ ಪ್ರಜಾ ಸೇವಾ ಇಲಾಖೆಯಡಿ ಯಾವುದೇ ಇಲಾಖೆಯ ಸಮಸ್ಯೆಗಳನ್ನು ನೇರವಾಗಿ ದಾಖಲಿಸಿದರೆ, ಸಂಬAಧಪಟ್ಟ ಅಧಿಕಾರಿಗಳು ಅದನ್ನು ಸಕಾಲದಲ್ಲಿ ಪರಿಹರಿಸಿಕೊಡುವ ಕೆಲಸ ಮಾಡಿಕೊಡಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮ ಇಂದಿನ ದಿನಕ್ಕೆ ಮಾತ್ರ ಸೀಮಿತವಾಗಿಲ್ಲ. ನಿರಂತರವಾಗಿ ನಡೆಯುತ್ತಿರುತ್ತದೆ. ಪ್ರತಿ ತಿಂಗಳು ಮೊದಲನೆ ಮತ್ತು ಮೂರನೇ ಶನಿವಾರದಂದು ಪ್ರತಿ ತಾಲ್ಲೂಕಿನಲ್ಲಿ ಅಭಿಯಾನ ನಡೆಯಲಿದೆ. ತಾಲೂಕು ಮುಗಿದ ಬಳಿಕ ಹೋಬಳಿ ಮಟ್ಟದಲ್ಲಿ ಪ್ರಜಾ ಸೇವಾ ಅಭಿಯಾನ ಸಭೆಯನ್ನು ನಡೆಸಲಾಗುವುದು. ಇಂದಿನ ಸಭೆಯಲ್ಲಿ ಅಹವಾಲು ಅರ್ಜಿ ನೀಡಲು ಆಗದವರು ಇದೇ ತಿಂಗಳ ಮೂರನೇ ಶನಿವಾರ ಅರ್ಜಿ ಸಲ್ಲಿಸಬಹುದು ಎಂದರು.
ಸಾರ್ವಜನಿಕರಿAದ ಅರ್ಜಿ ಬಂದಾಗ, ಅದಕ್ಕೆ ಪ್ರಾಮುಖ್ಯತೆ ಕೊಟ್ಟು ಪರಿಹರಿಸಿದರೆ ಅವರಿಗೆ ಆಗುವ ಸಂತೋಷಕ್ಕೆ ಪಾರವೆ ಇರುವುದಿಲ್ಲ. ಸರ್ಕಾರ ಜನರ ಸಮಸ್ಯೆಗಳನ್ನು ಬಗೆಹರಿಸಿಕೊಡುವ ಕೆಲಸ ಮಾಡಲಿದೆ. ಸಮಸ್ಯೆಗಳು ನಿರಂತರವಾಗಿ ಬರುತ್ತಲೇ ಇರುತ್ತವೆ. ಅಧಿಕಾರಿಗಳು ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಿದರೆ, ಕರ್ನಾಟಕ ಸರ್ಕಾರ ಒಳ್ಳೆಯ ಆಡಳಿತಕ್ಕೆ ಹೆಸರುವಾಸಿಯಾಗುತ್ತದೆ. ಜನರ ಸಮಸ್ಯೆಗಳನ್ನು ಬಹುಬೇಗ ಬಗೆಹರಿಸಿದರೆ ಆಡಳಿತ ಚುರುಕಾಗಿದೆ ಎಂಬ ಮಾತಿಗೂ ಅರ್ಥ ಬರುತ್ತದೆ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನೀಡಿದೆ. ಆರಂಭದಲ್ಲಿ ಬಹಳಷ್ಟು ಟೀಕೆಗಳು ಕೇಳಿ ಬಂದವು. ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದವರಿಗೆ ಗ್ಯಾರಂಟಿ ಯೋಜನೆಗಳು ಹೆಚ್ಚು ಅನುಕೂಲವಾಗಿವೆ. ಈ ಯೋಜನೆ ಕೂಲಿ ಮಾಡುವವರಿಗೆ, ಬಡವರಿಗೆ ಜೀವನಕ್ಕೆ ಸಹಾಯವಾಗುತ್ತಿದೆ. ಕೂಲಿ ಮಾಡುವ ಹೆಣ್ಣು ಮಗಳಿಗೆ ೨ಸಾವಿರ ರೂ. ದೊಡ್ಡದು. ಆಕೆಗೆ ೨ಸಾವಿರ ರೂಪಾಯಿಯು ೨ಲಕ್ಷದ ಮೌಲ್ಯಕ್ಕೆ ಸಮ. ಅವಶ್ಯಕತೆ ಇರುವ ಎಲ್ಲ ಮಹಿಳೆಯರು ೨ಸಾವಿರ ರೂಪಾಯಿ ಪಡೆಯುತ್ತಿದ್ದಾರೆ. ಸರ್ಕಾರಿ ನೌಕರಿಯಲ್ಲಿರುವ ಮಹಿಳೆಯರು ಗೃಹಲಕ್ಷ್ಮೀ ಯೋಜನೆಯ ೨ಸಾವಿರ ರೂಪಾಯಿ ಪಡೆಯುವುದಿಲ್ಲ ಎಂದು ಸರ್ಕಾರಿ ನೌಕರರ ಸಂಘ ತಿಳಿಸಿದೆ ಎಂದು ಸ್ಪಷ್ಟಪಡಿಸಿದರು.
ಚಾಮರಾಜನಗರ ಜಿಲ್ಲಾ ಪ್ರವಾಸ ಕೈಗೊಂಡಾಗ ‘ಅಜ್ಜಿಯೊಬ್ಬರಿಗೆ ಎರಡು ಸಾವಿರ ರೂ. ಬರುತ್ತದೆಯೇ ಎಂದು ವಿಚಾರಿಸಿದೆ. ಆಗ ಆಕೆ ಎರಡು ಸಾವಿರ ರೂ. ಹಣ ನನಗೆ ಔಷಧ ತೆಗೆದುಕೊಳ್ಳಲು ಸಹಾಯವಾಗುತ್ತಿದೆ. ನಾನು ಬದುಕಿರುವುದೇ ಎರಡು ಸಾವಿರ ರೂ. ಹಣದಿಂದ’ ಎಂಬ ಮಾತನ್ನು ಹೇಳಿದರು. ಇದನ್ನು ಕೇಳಿ ನಮ್ಮ ಕಾರ್ಯಕ್ರಮ ಸಾರ್ಥಕವೆಂಬ ಭಾವನೆ ಮೂಡಿತ್ತು ಎಂದು ನೆನೆದರು.
ಹೆಣ್ಣು ಮಕ್ಕಳಿಗೆ ಬಸ್‌ನಲ್ಲಿ ಉಚಿತವಾಗಿ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ. ೮೦೦ ಕೋಟಿ ಟ್ರಿಪ್ ನಮ್ಮ ಹೆಣ್ಣು ಮಕ್ಕಳು ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಶಕ್ತಿ ಯೋಜನೆಯಿಂದ ಪ್ರೇರಣೆ ಪಡೆದು ಅಮೆರಿಕಾದ ನಗರವೊಂದರ ಮೇಯರ್ ಅಲ್ಲಿನ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ್ದಾರೆ. ಪ್ರಧಾನಮಂತ್ರಿಯವರು ನಮ್ಮ ಗ್ಯಾರಂಟಿ ಯೋಜನೆಯನ್ನು ಕಾಪಿ ಹೊಡೆದರು. ಎಲ್ಲ ರಾಜ್ಯದಲ್ಲೂ ಕರ್ನಾಟಕದ ಗ್ಯಾರಂಟಿ ಯೋಜನೆಗಳನ್ನು ಬೇರೆಬೇರೆ ರೂಪದಲ್ಲಿ ಅನುಷ್ಠಾನಗೊಳಿಸಲಾಗಿದೆ. ಇದು ನಮ್ಮ ಗ್ಯಾರಂಟಿ ಯೋಜನೆಯ ಯಶಸ್ಸಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಕಂದಾಯ ಇಲಾಖೆಯ ಜವಾಬ್ದಾರಿಯನ್ನು ಮುಖ್ಯ ಮಂತ್ರಿಯವರು ನನಗೆ ವಹಿಸಿದ್ದಾರೆ. ದೇಶದಲ್ಲಿ ಹೊಸ-ಹೊಸ ಆವಿಷ್ಕಾರ ಮಾಡುವಾಗ ಕರ್ನಾಟಕ ರಾಜ್ಯವು ಮುಂದಿದೆ. ನಮ್ಮ ರಾಜ್ಯದ ಕಂದಾಯ ಇಲಾಖೆಯಲ್ಲಿ ಆಗಿರುವಂತಹ ದೊಡ್ಡ ಬದಲಾವಣೆಗಳು ದೇಶದಲ್ಲಿ ಬೇರೆಲ್ಲೂ ಆಗಿರಲಿಲ್ಲ. ಜಾರಿಗೆ ತಂದಿರುವ ಹಲವಾರು ಜನಪರ ಯೋಜನೆಗಳಿಂದ ಇಂತಹ ಬದಲಾವಣೆ ಸಾಧ್ಯವಾಗಿದೆ. ಇ ಪೌತಿ ಹಕ್ಕು, ಕಂದಾಯ ಗ್ರಾಮಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರಲ್ಲದೆ, ನಾನು ಕಂದಾಯ ಇಲಾಖೆಯ ಜವಾಬ್ದಾರಿಯನ್ನು ವಹಿಸಿಕೊಂಡ ಬಳಿಕ ಹೊಸ ಯೋಜನೆಯನ್ನು ಹಾಕಿಕೊಂಡಿದ್ದೇನೆ. ನಿವೇಶನ ಇಲ್ಲದವರಿಗೆ ನಿವೇಶನ ನೀಡಬೇಕು ಎಂಬುದು ನನ್ನ ಆಶಯ. ಬಡವರಿಗೆ ೩೦*೪೦ ಅಳತೆಯ ನಿವೇಶನವನ್ನು ಉಚಿತವಾಗಿ ನೀಡಲಾಗುವುದು. ರಾಜ್ಯಾದ್ಯಂತ ೧೫ ಲಕ್ಷಕ್ಕೂ ಹೆಚ್ಚು ನಿವೇಶನ ಕೊಡುವ ಯೋಜನೆ ಹಾಕಿಕೊಳ್ಳಲಾಗಿದೆ. ಬಹಳಷ್ಟು ಜನರಿಗೆ ಜಾಗ ಇಲ್ಲ, ಮನೆಯೂ ಇಲ್ಲ. ನಿವೇಶನ ನೀಡಿದರೆ ಮನೆ ಕಟ್ಟಿಕೊಳ್ಳಲು ಅನುಕೂಲವಾಗುತ್ತದೆ. ಅವರ ಬದುಕಲ್ಲಿ ನೆಮ್ಮದಿ ಮೂಡುತ್ತದೆ. ಲಭ್ಯ ಇರುವ ಸರ್ಕಾರಿ ಜಾಗದಲ್ಲಿ ನಿವೇಶನ ಸಿದ್ಧಪಡಿಸಿ, ಬಡವರಿಗೆ ಕೊಡುವ ಕೆಲಸ ಮಾಡಲು ಸರ್ಕಾರ ಹೊರಟಿದ್ದು, ಶಾಸಕರ ಮೂಲಕ ಗ್ರಾಮ ಸಭೆಗಳನ್ನು ನಡೆಸಿ, ಅರ್ಹ ಬಡವರಿಗೆ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.
ಇಡೀ ರಾಜ್ಯದಲ್ಲಿ ಭೀಕರ ಬರ ಎದುರಾಗಿದೆ. ಈ ರೀತಿಯ ಬರ ೧೫೦ ವರ್ಷದ ಹಿಂದೆ ಬಂದಿತ್ತು ಎಂದು ಹೇಳಲಾಗುತ್ತದೆ. ಇತ್ತೀಚೆಗೆ ಚಾಮರಾಜನಗರ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಸೂರ್ಯಕಾಂತಿ, ಜೋಳ, ಹೂವು, ನಂಜನಗೂಡು ರಸಬಾಳೆ ತೋಟಗಳು ಒಣಗುತ್ತಿರುವುದು ಕಂಡು ಬಂತು. ಹಳ್ಳಿ-ಹಳ್ಳಿಯಲ್ಲಿ ನೀರಿಗೆ ಹಾಹಾಕಾರ ಆರಂಭವಾಗಿದೆ. ಇದನ್ನು ನೋಡಿದಾಗ ಮನಸ್ಸಿಗೆ ನೋವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಇದೆ. ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಎಲ್ಲಿಂದ ತರಬೇಕು ಎಂಬ ಪ್ರಶ್ನೆ ಉದ್ಭವವಾಗಿದೆ. ಕುಡಿಯುವ ನೀರಿಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ೧ಕೋಟಿ ರೂ.ಗಳನ್ನು ನೀಡಲಾಗಿದೆ. ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ೩೨೯ ಕೋಟಿ ರೂ.ಗಳನ್ನು ನೀಡಲಾಗಿದೆ. ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಸೂಚಿಸಿದ್ದೇನೆ. ಜನ-ಜಾನುವಾರುಗಳಿಗೆ ನೀರು, ಮೇವು ಹಾಗೂ ಉದ್ಯೋಗ ನೀಡುವುದು ಮುಖ್ಯವಾಗಿದೆ. ಜನ ಗುಳೆ ಹೋಗುವುದನ್ನು ತಪ್ಪಿಸಲು ಶಾಸಕರೊಂದಿಗೆ ಚರ್ಚಿಸಿ ವಿಬಿ ಜಿ ರಾಮ್‌ಜಿ ಯೋಜನೆಯಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಆದ್ಯತೆ ನೀಡಲಾಗುವುದು ಎಂದರು.
ರಾಜ್ಯದ ಯಜನತೆಗೆ ಒಳ್ಳೆಯ ಆಡಳಿತ ನೀಡಬೇಕು ಎಂಬುದು ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರ ಆಶಯ. ಅದಕ್ಕೆ ನಮ್ಮ ಇಡೀ ಮಂತ್ರಿ ಮಂಡಲ ಮತ್ತು ಶಾಸಕರು ಬೆಂಬಲವಾಗಿ ನಿಂತಿದ್ದಾರೆ ಎಂದು ಹೇಳಿದರು.
ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಮಾಜಿ ರಾಷ್ಟçಪತಿ ಡಾ: ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ನಂತರ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಾಯಿತು.
ಗುಬ್ಬಿ ಶಾಸಕ ಹಾಗೂ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ಮಾತನಾಡಿ, ಜನರ ಅನುಕೂಲಕ್ಕಾಗಿ ಮುಖ್ಯ ಮಂತ್ರಿಗಳ ಆಶಯದಂತೆ ಹೊಸದಾಗಿ ಪ್ರಜಾ ಸೇವಾ ಇಲಾಖೆಯನ್ನು ಸೃಜಿಸಿ ಪ್ರತಿ ತಿಂಗಳ ಮೊದಲ ಹಾಗೂ ಮೂರನೇ ಶನಿವಾರ ಪ್ರಜಾ ಸೇವಾ ಅಭಿಯಾನವನ್ನು ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗಿದೆ. ಅಧಿಕಾರಿಗಳು ಇಚ್ಛಾಶಕ್ತಿಯಿಂದ ಸಾರ್ವಜನಿಕರ ಅಹವಾಲುಗಳಿಗೆ ಸಕಾಲದಲ್ಲಿ ಪರಿಹಾರ ಒದಗಿಸಿದಾಗ ಮಾತ್ರ ಮುಖ್ಯ ಮಂತ್ರಿಗಳ ಆಶಯ ಸಾರ್ಥಕವಾಗುತ್ತದೆ. ಅಧಿಕಾರಿಗಳು ಮಾನವೀಯತೆ ದೃಷ್ಟಿಯಿಂದ ಕೆಲಸ ನಿರ್ವಹಿಸಿದಾಗ ಮಾತ್ರ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ಜನಪರ ಯೋಜನೆಗಳನ್ನು ಸರ್ಕಾರ ರೂಪಿಸಿದರೂ ಜನರಿಗೆ ತಲುಪಿಸುವ ಕೆಲಸ ಅಧಿಕಾರಿಗಳ ಜವಾಬ್ದಾರಿ. ಈ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚಿನ ಆಸಕ್ತಿಯಿಂದ ಜನಸೇವೆಯನ್ನು ಮಾಡಬೇಕೆಂದು ತಿಳಿಸಿದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ಸಾರ್ವಜನಿಕರು ತಮ್ಮ ಸಮಸ್ಯೆಗಳಿಗಾಗಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು, ಅವರ ಅಹವಾಲುಗಳನ್ನು ಸ್ವೀಕರಿಸಿ ಕಾಲಮಿತಿಯಲ್ಲಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಸರ್ಕಾರ ಅಭಿಯಾನವನ್ನು ಆಯೋಜಿಸಲು ನಿರ್ದೇಶನ ನೀಡಿದ್ದು, ಅದರಂತೆ ಜಿಲ್ಲಾದ್ಯಂತ ಇಂದಿನಿAದ ಪ್ರಜಾ ಸೇವಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಇಂದಿನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಸ್ವೀಕೃತವಾದ ಅಹವಾಲು ಅರ್ಜಿಗಳನ್ನು ಬುಧವಾರದೊಳಗೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಹೇಶ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ದೀಪಾ ಚೋಳನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಪಂಚಾಯತ್ ಸಿಇಒ ಅಶ್ವಿಜ .ಬಿ.ವಿ, ಗ್ಯಾರಂಟಿ ಅನುಷ್ಟಾನ ಸಮಿತಿ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಗೌಡ ಮುಂತಾದವರು ಇದ್ದರು.

(Visited 1 times, 1 visits today)