ತುಮಕೂರು: ಸಮಾಜದ ಅತ್ಯಂತ ಗೌರವಾನ್ವಿತ ಹುದ್ದೆ ಶಿಕ್ಷಕನಾಗಿದ್ದು ಆತ ವಿದ್ಯಾರ್ಥಿಗಳ ಭವಿಷ್ಯದ ದಾರಿದೀಪವಾಗಿದ್ದು ಆತನಿಗೆ ತನ್ನನ್ನು ತಾನು ಅರಿತುಕೊಳ್ಳಲು ಸಹಾಯ ಮಾಡುವ ರಾಷ್ಟç ನಿರ್ಮಾಣದ ಶಿಲ್ಪಿ ಎನಿಸಿಕೊಂಡಿದ್ದಾನೆ ಎಂದು ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಜಂಟಿ ಕರ‍್ಯದರ್ಶಿಗಳಾದ ಡಾ. ಶಿವಕುಮಾರಯ್ಯ ಅಭಿಪ್ರಾಯಪಟ್ಟರು.
ಅವರು ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಪದವಿ ಕಾಲೇಜುಗಳ ಆಶ್ರಯದಲ್ಲಿ ನಗರದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ವ್ಯಕ್ತಿತ್ವ ನಿರ್ಮಾಣವೇ ಶಿಕ್ಷಣದ ಗುರಿಯಾಗಬೇಕು. ಶಿಕ್ಷಕ ಸದಾ ಅಧ್ಯಯನಶೀಲನಾಗಿರಬೇಕು. ತನ್ನ ವಿದ್ಯಾರ್ಥಿಯಲ್ಲಿರುವ ಸಾಮರ್ಥ್ಯವನ್ನು ಹೊರತೆಗೆಯುವ ಶಕ್ತಿ ಶಿಕ್ಷಕನಿಗಿದೆ. ಆತ ಕೇವಲ ಪಠ್ಯಕ್ರಮಕ್ಕೆ ತನ್ನ ತರಗತಿಯನ್ನು ಸೀಮಿತಗೊಳಿಸಿಕೊಳ್ಳದೆ ಪಠ್ಯದಿಂದಾಚೆಗಿನ ವಿದ್ಯಾರ್ಥಿಯ ಚಿಂತನೆಯ ಚೇತನವನ್ನು ಜಾಗೃತಿಗೊಳಿಸಿ ಆತನ ವ್ಯಕ್ತಿತ್ವವನ್ನು ವಿಕಸನಗೊಳಿಸಬೇಕು ಎಂದರು.
ವಿಶೇಷ ಉಪನ್ಯಾಸ ನೀಡಿದ ವಿಶ್ರಾಂತ ಪ್ರಾಂಶುಪಾಲರು ಚಿಂತಕರೂ ಆದ ಡಾ. ಹೆಚ್.ಎಸ್. ನಿರಂಜನಾರಾಧ್ಯ ಮಾತನಾಡಿ ಭಾರತದ ಗುರು ಶಿಷ್ಯ ಸಂಪ್ರದಾಯವು ವಿಶ್ವಾದ್ಯಂತ ಪ್ರಸಿದ್ಧವಾಗಿತ್ತು. ಆದರೆ ಕ್ರಮೇಣ ಈ ಸಂಪ್ರದಾಯ ಎಷ್ಟೋ ಕಡಿಮೆಯಾಗಿದೆ. ಇಂದು ಭಾರತವನ್ನು ಮತ್ತೊಮ್ಮೆ ವಿಶ್ವ ಶಿಕ್ಷಕನನ್ನಾಗಿ ಮಾಡಲು ಆ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸಬೇಕಾಗಿದೆ ಎಂದರು.
ಇದು ಡಿಜಿಟರ್ ಯುಗ ಕೃತಕ ಬುದ್ದಿಮತ್ತೆ ಉದ್ಯೋಗಾಂಕ್ಷಿಗಳ ಉದ್ಯೋಗದ ಆಸೆಯನ್ನು ಕಮರಿಸುತ್ತಿದೆ. ಕೆಲ ರಾಷ್ಟçಗಳಲ್ಲಿ ರೋಬೋಟ್ ಶಿಕ್ಷಕರು ತರಗತಿಗಳಲ್ಲಿ ಪಾಠ ಹೇಳಿಕೊಡುತ್ತಿದ್ದಾರೆ. ಇಂತಹ ವಾತಾವರಣದಲ್ಲಿ ಇಂದಿನ ಶಿಕ್ಷಕ ತನ್ನ ಜ್ಞಾನಶಕ್ತಿಯನ್ನು ಹೆಚ್ಚಿಸಿಕೊಳ್ಳದೆ ಹೋದರೆ ಆತ ನಿರುದ್ಯೋಗಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು ಇಂದಿನ ವಿದ್ಯಾರ್ಥಿ ಸಮುದಾಯಕ್ಕೆ ಸರಿಯಾದ ಮಾರ್ಗದರ್ಶನ ಮಾಡುವ ಮೂಲಕ ಆತನನ್ನು ಕತ್ತಲಿನಿಂದ ಬೆಳಕಿನೆಡೆಗೆ ಕರೆದೊಯ್ಯವ ಶಕ್ತಿಯನ್ನು ಶೀಕ್ಷಕ ಪಡೆದುಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಶ್ರಾಂತ ಪ್ರಾಂಶುಪಾಲರಾದ ಪ್ರೊ. ಎಂ.ಬಿ. ಸದಾಶಿವಯ್ಯ ಸತತ ೬೨ ವರ್ಷಗಳಿಂದಲೂ ಶಿಕ್ಷಕನಾಗಿ ಕರ್ತವ್ಯ ಮುಂದುವರಿಸುತ್ತಿರುವ ನಾನು ಶಿಕ್ಷಕ ವೃತ್ತಿಯನ್ನು ಇಷ್ಟಪಟ್ಟು ಆರಿಸಿಕೊಂಡೆ. ಪ್ರತಿಯೊಬ್ಬ ಶಿಕ್ಷಕರೂ ಡಾ. ಎಸ್. ರಾಧಾಕೃಷ್ಣನ್‌ರವರಂತೆ ಶಿಕ್ಷಕ ವೃತ್ತಿಯನ್ನು ಪ್ರೀತಿಸಬೇಕು. ಒಬ್ಬ ಶಿಕ್ಷಕ ತನ್ನ ಸಾಮರ್ಥ್ಯದಿಂದ ಎಂತಹ ವಿದ್ಯಾರ್ಥಿಯನ್ನಾದರೂ ಮೇಲೆ ತರಲು ಸಾಧ್ಯ ಎಂಬುದನ್ನು ತಾವೆಲ್ಲರೂ ತೋರಿಸಬೇಕು. ಶಿಕ್ಷಕ ವಿದ್ಯಾರ್ಥಿಗಳ ಮಟ್ಟಕ್ಕೆ ಇಳಿದು ಪಾಠ ಪ್ರವಚನಗಳನ್ನು ಮಾಡಿದರೆ ಆತ ಆ ಸಮುದಾಯದಲ್ಲಿ ಜನಪ್ರಿಯ ಶಿಕ್ಷಕನಾಗಲು ಸಾಧ್ಯ ಎಂದರು. ಶ್ರೀ ಸಿದ್ಧಗಂಗಾ ಮಹಿಳಾ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ ನಿವೃತ್ತಿ ಹೊಂದಿರುವ ಪ್ರೊ. ಎಂ.ಎಸ್. ವಿಜಯಕುಮಾರಿ ಅವರನ್ನು ಸನ್ಮಾನಿಸಲಾಯಿತು. ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಪದವಿ ಕಾಲೇಜಿನ ಸಂಯೋಜನಾಧಿಕಾರಿಗಳಾದ ಡಾ. ಡಿ.ಎನ್. ಯೋಗೀಶ್ವರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಾಂಶುಪಾಲ ಬಿ. ಮಾರಪ್ಪ ಸ್ವಾಗತಿಸಿದರು. ಪ್ರಾಂಶುಪಾಲರಾದ ಡಾ. ರೇವಣಸಿದ್ದಪ್ಪ ವಂದಿಸಿದರು. ಡಾ. ಸೌಮ್ಯಶ್ರೀ ನಿರೂಪಿಸಿದರು.
(Visited 1 times, 1 visits today)



