ತುಮಕೂರು: ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಅವರು ಮಂಗಳವಾರ ತುಮಕೂರು ದಸರಾ-೨೦೨೬ರ ಲಾಂಛನವನ್ನು ಬಿಡುಗಡೆ ಮಾಡಿದರು.
ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಲಾಂಛನ ಬಿಡುಗಡೆ ಮಾಡಿದ ನಂತರ ಮಾತನಾಡಿದ ಅವರು, ಕಳೆದ ವರ್ಷಗಳಲ್ಲಿ ವಿನ್ಯಾಸಗೊಳಿಸಿದ್ದ ದಸರಾ ಲಾಂಛನವನ್ನೇ ಈ ಬಾರಿಯೂ ದಸರಾ ಉತ್ಸವದ ಲಾಂಛನವನ್ನಾಗಿ ಬಳಸಲಾಗುವುದು ಎಂದು ತಿಳಿಸಿದರು.
ಈ ಬಾರಿಯ ತುಮಕೂರು ದಸರಾವನ್ನು ಅದ್ದೂರಿಯಾಗಿ ಆಚರಿಸಲಾಗುವುದು. ದಸರಾ ಪ್ರಯುಕ್ತ ಏರ್ಪಡಿಸಲಾಗುವ ವಸ್ತುಪ್ರದರ್ಶನದಲ್ಲಿ ಎಐ, ಆಧುನಿಕ ತಂತ್ರಜ್ಞಾನ ಅಭಿವೃದ್ಧಿ ಬಗ್ಗೆ ಅವಕಾಶ ಕಲ್ಪಿಸಲಾಗುವುದು. ಸುಮಾರು ೨೦೦೦ಕ್ಕೂ ಹೆಚ್ಚು ಮಕ್ಕಳಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.
ಮಹಾನವಮಿ ಹಬ್ಬ ನಮ್ಮ ಜೀವನದಲ್ಲಿ ಅನೇಕ ಪಾಠಗಳನ್ನು ಕಲಿಸುತ್ತದೆ. ತುಮಕೂರು ದಸರಾ ಉತ್ಸವ ಜಿಲ್ಲೆಯ ಸಂಸ್ಕೃತಿ, ನಾಗರಿಕತೆ, ಪರಂಪರೆ, ಇತಿಹಾಸವನ್ನು ಪ್ರತಿಬಿಂಬಿಸುತ್ತದೆ. ಉತ್ಸವದಲ್ಲಿ ಎಲ್ಲರೂ ಭಾಗವಹಿಸಬೇಕು. ತುಮಕೂರಿಗೆ ಕೀರ್ತಿ ತರುವ ರೀತಿಯಲ್ಲಿ ದಸರಾ ಉತ್ಸವ ಆಚರಿಸೋಣ ಎಂದು ಕರೆ ನೀಡಿದರು.
‘ತುಮಕೂರು ದಸರಾ ಉತ್ಸವ ೨೦೨೬’ ಕಾರ್ಯಕ್ರಮವು ಅಕ್ಟೋಬರ್ ೧೧ ರಿಂದ ಅಕ್ಟೋಬರ್ ೨೧ರವರೆಗೆ ನಡೆಯಲಿದೆ. ಈ ವರ್ಷದ ತುಮಕೂರು ದಸರಾ ಉತ್ಸವದ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಗಮನಕ್ಕೆ ತರಲಾಗಿದೆ. ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದ್ದು, ಬಿಡುವು ಮಾಡಿಕೊಂಡು ಆಗಮಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಕಳೆದ ವರ್ಷಗಳ ದಸರಾ ಆಚರಣೆ ಯಶಸ್ವಿ:
ಎರಡು ವರ್ಷಗಳ ಹಿಂದೆ ಬಂದ ‘ತುಮಕೂರು ದಸರಾ ಉತ್ಸವ’ ಪರಿಕಲ್ಪನೆಯು ಇಂದು ಮೈಸೂರು ದಸರಾದಂತೆ ಜನಾಕರ್ಷಿಸುತ್ತಿದೆ. ಜಿಲ್ಲೆಯಲ್ಲಿ ವಿಭಿನ್ನವಾದ ಭಾವನೆಗಳು ಬರದಂತೆ, ಜಾತಿ-ಧರ್ಮವನ್ನು ಮೀರಿ ದಸರಾ ಹಬ್ಬವನ್ನು ಆಚರಿಸಲಾಗುತ್ತಿದೆ. ಕಳೆದ ವರ್ಷ ತುಮಕೂರು ದಸರಾ ಬಹಳ ಯಶಸ್ವಿಯಾಗಿ ನಡೆಯಿತು. ದೇವಸ್ಥಾನದ ಪ್ರತಿಕೃತಿಯು ಮೂಲ ದೇವಸ್ಥಾನದಂತೆ ಗೋಚರಿಸುತ್ತಿತ್ತು. ಹತ್ತು ದಿನ ನಡೆದ ನವದುರ್ಗೆಯರ ಪೂಜೆ, ಹೋಮ-ಹವನಗಳು, ಕವಿಗೋಷ್ಠಿ, ಯುವ ದಸರಾ, ಮಹಿಳಾ ದಸರಾ, ವೈಜ್ಞಾನಿಕ ವಸ್ತುಪ್ರದರ್ಶನ ತುಮಕೂರು ದಸರಾ ಯಶಸ್ಸಿಗೆ ಕಾರಣವಾಯಿತು ಎಂದು ತಿಳಿಸಿದರು.
ಇಸ್ರೋ ಸಂಸ್ಥೆಯವರು ಏರ್ಪಡಿಸಿದ್ದ ರಾಕೆಟ್ ತಯಾರಿಕೆ ವಿಧಾನ ಕುರಿತು ವೈಜ್ಞಾನಿಕ ಮತ್ತು ತಾಂತ್ರಿಕ ವಸ್ತುಪ್ರದರ್ಶನದಿಂದ ಶಾಲಾ ಮಕ್ಕಳ ಕಲಿಕೆಗೆ ಹೆಚ್ಚು ಅನುಕೂಲವಾಯಿತು. ‘ಪ್ರಚಂಡ’ ಎಂಬ ಯುದ್ಧ ಹೆಲಿಕ್ಯಾಪ್ಟರ್ ಪ್ರದರ್ಶನಕ್ಕೆ ಇಡಲಾಗಿತ್ತು. ಹೆಲಿ ರೈಡ್ ಆಯೋಜನೆಯನ್ನು ಜನರು ಸಂಭ್ರಮಿಸಿದರು. ಅಳ್ವಾಸ್‌ನ ೧೫೦ ಕಲಾವಿದರ ತಂಡವು ಸಾಂಸ್ಕೃತಿಕ ಕಾರ್ಯಕ್ರಮವನ್ನು ಸುಂದರವಾಗಿ ನಡೆಸಿಕೊಟ್ಟರು. ಎಲ್ಲರನ್ನು ಒಳಗೊಂಡAತೆ ದಸರಾ ಆಚರಿಸುವ ಪ್ರಯತ್ನ ಮಾಡಲಾಯಿತು. ಮೈಸೂರಿನಂತೆ ದಸರಾವನ್ನು ತುಮಕೂರಿನಲ್ಲಿ ಆಚರಿಸಲಾಗುತ್ತಿದೆ ಎಂಬ ಮಾತುಗಳು ಎಲ್ಲೆಡೆಯಿಂದ ಕೇಳಿ ಬಂದವು. ಎಲ್ಲ ರೀತಿಯ ಜನರು, ಜನಪ್ರತಿನಿಧಿಗಳು, ಅಧಿಕಾರಿ ಮತ್ತು ಸಿಬ್ಬಂದಿ ಪಾಲ್ಗೊಂಡರು. ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಅನುದಾನ ಬಿಡುಗಡೆ ಮಾಡಿ ಸಹಕರಿಸಿದರು ಎಂದು ಪರಮೇಶ್ವರ ಅವರು ಕಳೆದ ವರ್ಷದ ದಸರಾ ಆಚರಣೆ ಬಗ್ಗೆ ವಿವರಿಸಿದರು.
ದಸರಾ ಉತ್ಸವವು ಕೇವಲ ಒಂದು ಕಾರ್ಯಕ್ರಮವಾಗಿರದೆ, ಜಿಲ್ಲೆಯ ಸಂಸ್ಕೃತಿ, ಪರಂಪರೆ ಹಾಗೂ ಕಲೆಯನ್ನು ಪರಿಚಯಿಸುವ “ಊರ ಹಬ್ಬ”ವಾಗಬೇಕು. ದಸರಾ ಉತ್ಸವದ ಮೂಲಕ ಮಕ್ಕಳು, ಯುವಕರು ಹಾಗೂ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗುವುದು. ಯುವ ಕಲಾವಿದರ ಪ್ರತಿಭೆ ಪ್ರದರ್ಶನಕ್ಕೆ ಉತ್ತಮ ವೇದಿಕೆ ದೊರೆಯಲಿದ್ದು, ನೃತ್ಯ ತಂಡಗಳು ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಲು ಅವಕಾಶ ನೀಡಲಾಗುವುದು. ಉತ್ಸವದಲ್ಲಿ ಸಾರ್ವಜನಿಕರ ಹೆಚ್ಚಿನ ಪಾಲ್ಗೊಳ್ಳುವಿಕೆಗೆ ಆದ್ಯತೆ ನೀಡಲಾಗುವುದು. ಜನರ ಅಭಿಪ್ರಾಯವೇ ನಮ್ಮ ಅಭಿಪ್ರಾಯವಾಗಿದ್ದು, ಜಾತಿ-ಧರ್ಮದ ಭೇದವಿಲ್ಲದೆ ಎಲ್ಲರೂ ಒಗ್ಗೂಡಿ ಉತ್ಸವ ಆಚರಿಸಬೇಕು ಎಂದು ಹೇಳಿದರು.
ಅದೇ ರೀತಿ ನಗರದ ಶ್ರೀ ಡಾ: ಶಿವಕುಮಾರ ಸ್ವಾಮೀಜಿ ವೃತ್ತವನ್ನು ತುಮಕೂರು ಸೆಂಟರ್ ಆಫ್ ಅಟ್ರಾಕ್ಷನ್ ಆಗಿ ಅಭಿವೃದ್ಧಿಪಡಿಸುವ ಉದ್ದೇಶವಿದೆ. ಇದಕ್ಕೆ ಅಗತ್ಯವಿರುವ ಕೆಲವು ವಸ್ತುಗಳನ್ನು ಚೀನಾದಿಂದ ತರಿಸಲಾಗುತ್ತಿದೆ. ತುಮಕೂರನ್ನು ವಿಶೇಷವಾಗಿ ಗುರುತಿಸುವಂತಹ ಹೊಸ ಪ್ರಯತ್ನಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಈ ಬಾರಿ ಮಕ್ಕಳು ಹಾಗೂ ವಾಹನಗಳ ಬಗ್ಗೆ ಆಸಕ್ತಿ ಹೊಂದಿರುವವರನ್ನು ಆಕರ್ಷಿಸಲು ಮಾಡರ್ನ್ ಕಾರುಗಳ ಶೋ ಆಯೋಜಿಸಲಾಗುತ್ತಿದೆ. ಇಂತಹ ಹೊಸ ಪ್ರಯತ್ನಗಳ ಮೂಲಕ ದಸರಾ ಉತ್ಸವಕ್ಕೆ ಮತ್ತಷ್ಟು ಮೆರುಗು ತರುವ ಮೂಲಕ ಜಿಲ್ಲೆಯ ಸಂಸ್ಕೃತಿ, ನಾಗರಿಕತೆ ಹಾಗೂ ಪರಂಪರೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವನ್ನು ಮಾಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಜಿ.ಬಿ ಜ್ಯೋತಿಗಣೇಶ್ ಮಾತನಾಡಿ, ಕಳೆದ ೨ ವರ್ಷಗಳಿಂದಲೂ ತುಮಕೂರು ದಸರಾ ಉತ್ಸವ ಯಶಸ್ವಿ ಕಾಣಲು ಡಾ: ಜಿ. ಪರಮೇಶ್ವರ ಅವರು ಕಾರಣರಾಗಿದ್ದಾರೆ. ನಗರದಲ್ಲಿ ಉದ್ದೇಶಿತ ಅಮಾನಿಕೆರೆ ಕಾರಂಜಿ ಹಾಗೂ ತುಮಕೂರು ಸ್ಕೆ÷್ವÃರ್ ನಿರ್ಮಾಣ ಕಾರ್ಯವನ್ನು ಸ್ವಾಗತಿಸುತ್ತೇನೆ. ಕಳೆದ ವರ್ಷಗಳಂತೆ ಈ ಬಾರಿಯೂ ದಸರಾ ಉತ್ಸವ-೨೦೨೬ರ ಯಶಸ್ಸಿಗೆ ಸಂಪೂರ್ಣವಾಗಿ ಸಹಕರಿಸಲಾಗುವುದು ಎಂದು ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಶಾಸಕ ಜ್ಯೋತಿ ಗಣೇಶ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಜಿ. ಚಂದ್ರಶೇಖರ್ ಗೌಡ, ಬಿಎಂಟಿಸಿ ಉಪಾಧ್ಯಕ್ಷ ನಿಕೇತ್ ರಾಜ್ ಎಂ., ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ವಿ. ಅಶ್ವಿಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಪಾಲಿಕೆ ಆಯುಕ್ತೆ ಶುಭಾ, ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಸೇರಿದಂತೆ ಉಪವಿಭಾಗಾಧಿಕಾರಿ ನಾಹಿದಾ ಜûಂ ಜûಂ, ಸೇರಿದಂತೆ ಹಲವು ಗಣ್ಯರು ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
(Visited 1 times, 1 visits today)



