ಹುಳಿಯಾರು: ಹುಳಿಯಾರಿನ ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಲಾಗಿದ್ದ ಹೋಬಳಿ ಮಟ್ಟದ ’ಪ್ರಜಾ ಸೇವಾ ಅಭಿಯಾನ’ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಜಿಲ್ಲಾ ಪಂಚಾಯತಿ ಸಿಇಒ ಅಶ್ವಿಜ ಅವರು ಮಾತನಾಡಿ ಪ್ರಜಾ ಸೇವಾ ಅಭಿಯಾನದಡಿ ಸ್ವೀಕರಿಸಲಾಗುವ ಅಹವಾಲುಗಳನ್ನು ತಕ್ಷಣ ಪರಿಹರಿಸಬಹುದಾದ ಮತ್ತು ದೀರ್ಘಾವಧಿಯಲ್ಲಿ ಪರಿಹರಿಸಬೇಕಾದ ಸಮಸ್ಯೆಗಳೆಂದು ಎರಡು ವಿಭಾಗಗಳಾಗಿ ವಿಂಗಡಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರತಿ ಬುಧವಾರ ಅರ್ಜಿಗಳ ಪರಿಶೀಲನೆ ನಡೆಸಿ ವಿಲೇವಾರಿಗೆ ಆದ್ಯತೆ ನೀಡಲಾಗುತ್ತಿದೆ ಎಂದರು.
ಆಧಾರ್ ಕಾರ್ಡ್ ತಿದ್ದುಪಡಿ, ಜನನ-ಮರಣ ಪ್ರಮಾಣಪತ್ರಗಳಂತಹ ತುರ್ತು ಸೇವೆಗಳನ್ನು ತ್ವರಿತವಾಗಿ ಪರಿಹರಿಸಲು ಕ್ರಮ ವಹಿಸಲಾಗುತ್ತಿದೆ. ರಸ್ತೆ, ಶಾಲಾ ಕಟ್ಟಡ, ಅಂಗನವಾಡಿ ನಿರ್ಮಾಣ ದಂತಹ ದೀರ್ಘಾವಧಿ ಬೇಡಿಕೆಗಳನ್ನು ಸಂಬAಧಪಟ್ಟ ಇಲಾಖೆಗೆ ಕಳುಹಿಸಿ ಪರಿಶೀಲಿಸಲಾಗುತ್ತಿದೆ. ಶಾಲೆಗಳ ಸಣ್ಣಪುಟ್ಟ ದುರಸ್ತಿ ಕಾರ್ಯಗಳನ್ನು ಜಿಲ್ಲಾ ಪಂಚಾಯತಿ ಹಂತದ ಅನುದಾನದಲ್ಲೇ ನಿರ್ವಹಿಸಲಾಗುತ್ತಿದೆ. ಪ್ರಸ್ತುತ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ನೇರ ಸೌಲಭ್ಯ ವಿತರಣೆಗೆ ತೊಡಕಿದ್ದರೂ, ದಾಖಲೆಗಳ ಪರಿಶೀಲನೆ ನಿರಂತರವಾಗಿ ನಡೆಯಲಿದೆ ಎಂದು ತಿಳಿಸಿದರು.
ಚಿಕ್ಕನಾಯಕನಹಳ್ಳಿ ತಹಸಿಲ್ದಾರ್ ಮಮತಾ ಅವರು ಮಾತನಾಡಿ ಹೋಬಳಿ ಮಟ್ಟದ ಪ್ರಜಾ ಸೇವಾ ಅಭಿಯಾನದ ಮೂಲಕ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಒಂದೇ ವೇದಿಕೆಯಲ್ಲಿ ಲಭ್ಯವಿದ್ದು, ಸಾರ್ವಜನಿಕರು ತಮ್ಮ ಸಮಸ್ಯೆಗಳಿಗೆ ಸಂಬAಧಿಸಿದ ಅರ್ಜಿಗಳನ್ನು ಸಲ್ಲಿಸಬೇಕು ಎಂದು ಕರೆ ನೀಡಿದರು.
ಸಾರ್ವಜನಿಕರ ಮನಸ್ಸಿನಲ್ಲಿ ಅರ್ಜಿ ನೀಡಿದರೆ ವಿಲೇವಾರಿಯಾಗುವುದಿಲ್ಲವೇನೋ ಅಥವಾ ನೆಪ ಹೇಳಿ ಬಾಕಿ ಉಳಿಸಿಕೊಳ್ಳುತ್ತಾರೆ ಎನ್ನುವ ಅನುಮಾನಗಳಿದ್ದರೆ ಅದನ್ನು ಬಿಡಬೇಕು. ಈ ಕಾರ್ಯಕ್ರಮದಲ್ಲಿ ಸ್ವೀಕರಿಸುವ ಪ್ರತಿಯೊಂದು ಅರ್ಜಿಯನ್ನು ಐಪಿಎಚ್‌ಆರ್‌ಎಸ್ ತಂತ್ರಾAಶದ ಮೂಲಕ ದಾಖಲಿಸಿ, ಮೇಲ್ವಿಚಾರಣೆ ಮಾಡಲಾಗುತ್ತದೆ. ಮೇಲಧಿಕಾರಿಗಳು ಹಾಗೂ ಸರ್ಕಾರದ ಹಂತದಲ್ಲಿ ಪ್ರತಿ ಬುಧವಾರ ಈ ಕುರಿತು ಪ್ರಗತಿ ಪರಿಶೀಲನೆ ನಡಿಯುತ್ತದೆ ಎಂದರು.
ಸಣ್ಣಪುಟ್ಟ ಅಥವಾ ಸ್ಥಳದಲ್ಲೇ ಪರಿಹರಿಸಬಹುದಾದ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಲಾಗುತ್ತದೆ. ಕಾನೂನು ತೊಡಕುಗಳಿದ್ದರೆ ಅಥವಾ ಕೆಲಸ ಮಾಡಲು ಸಾಧ್ಯವಿಲ್ಲದಿದ್ದರೆ ಸೂಕ್ತ ವಿವರಣೆ ನೀಡಲಾಗುವುದು, ಉಳಿದಂತೆ ಶೀಘ್ರವಾಗಿ ವಿಲೇವಾರಿ ಮಾಡಲಾಗುವುದು ಎಂದು ಭರವಸೆ ನೀಡಿದರು. ಸಾರ್ವಜನಿಕರು ಹಾಗೂ ರೈತರು ಈ ಅಭಿಯಾನದ ಸದುಪಯೋಗ ಪಡೆದುಕೊಳ್ಳಬೇಕೆಂದು ಕೋರಿದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ಶಿವರಾಜೇಗೌಡ, ಬೆಸ್ಕಾಂ ಎಇಇ ಗವೀರಂಗಯ್ಯ, ಪಿಡಬ್ಲೂ÷್ಯಡಿ ಇಲಾಖೆಯ ತಿಮ್ಮೇಗೌಡ, ಪಪಂ ಮುಖ್ಯಾಧಿಕಾರಿ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ಕಾಂತರಾಜು, ಸಹಾಯಕ ಕೃಷಿ ನಿರ್ದೇಶಕ ಶಿವರಾಜ್, ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಕಾಂತರಾಜು, ಹುಳಿಯಾರಿನ ಆರೋಗ್ಯ ವೈದ್ಯಾಧಿಕಾರಿ ಡಾ.ಕೃಷ್ಣ ಸೇರಿದಂತೆ ಕಂದಾಯ, ಅರಣ್ಯ, ಸಾರಿಗೆ, ಶಾಲಾ ಶಿಕ್ಷಣ, ಆಹಾರ ಮತ್ತು ನಾಗರಿಕ ಸರಬರಾಜು, ಆರೋಗ್ಯ ಹಾಗೂ ಎನ್‌ಸಿಡಿ ವಿಭಾಗದ ತಾಲೂಕು ಮಟ್ಟದ ಹಲವು ಅಧಿಕಾರಿಗಳು ಭಾಗವಹಿಸಿದ್ದರು.
(Visited 1 times, 1 visits today)



