ಹುಳಿಯಾರು: ಸೋಮವಾರ ಬೆಳಗ್ಗೆ ಮತ್ತು ರಾತ್ರಿ ವೇಳೆಗೆ ಹುಳಿಯಾರು ಪಟ್ಟಣದಲ್ಲಿ ಭರ್ಜರಿ ಮಳೆ ಸುರಿದ ಪರಿಣಾಮ ಪಟ್ಟಣದ ಹಲವು ಭಾಗಗಳಲ್ಲಿ ಚರಂಡಿ ನೀರು ರಸ್ತೆಗೆ ಹರಿದು ಸಾರ್ವಜನಿಕರಿಗೆ ಹಾಗೂ ವ್ಯಾಪಾರಸ್ಥರಿಗೆ ತೊಂದರೆ ಉಂಟಾಯಿತು.
ರಾಮಗೋಪಾಲ್ ಸರ್ಕಲ್ ಬಳಿ ಹೆದ್ದಾರಿ ಪಕ್ಕದಲ್ಲಿರುವ ಚರಂಡಿ ಮಳೆ ನೀರಿನಿಂದ ತುಂಬಿ ಹರಿದ ಪರಿಣಾಮ ರಸ್ತೆಯ ಮೇಲೆ ನೀರು ನಿಂತು ಸಂಚಾರಕ್ಕೂ ಸಮಸ್ಯೆ ಉಂಟಾಯಿತು. ಇದೇ ವೇಳೆ ಬೆಂಗಳೂರು ಬೇಕರಿ ಪಕ್ಕದಲ್ಲಿರುವ ಬಟ್ಟೆ ಅಂಗಡಿಯ ಬೇಸ್‌ಮೆಂಟ್‌ನಲ್ಲಿದ್ದ ತರಕಾರಿ ಹಾಗೂ ಬಟ್ಟೆ ಅಂಗಡಿಗಳಿಗೂ ನೀರು ನುಗ್ಗಿ ಹಾನಿಯಾಗಿದೆ.
ಮಳೆಯಿಂದ ಮಾರುತಿ ನಗರದ ಇಮ್ರಾಜ್ ಅವರ ಮನೆ ಸೇರಿದಂತೆ ಸುತ್ತಮುತ್ತಲಿನ ಕೆಲವು ಮನೆಗಳಿಗೆ ಚರಂಡಿಯ ಕಲುಷಿತ ನೀರು ನುಗ್ಗಿದೆ. ಚರಂಡಿಯಲ್ಲಿ ಕಸ ಹಾಗೂ ಹೂಳು ತುಂಬಿಕೊAಡಿರುವುದರಿAದ ನೀರು ಸರಾಗವಾಗಿ ಹರಿಯದೆ ರಸ್ತೆಯುದ್ದಕ್ಕೂ ಕಸ-ತ್ಯಾಜ್ಯ ಹರಿದು ಬಂದು ದುರ್ನಾತ ಬೀರುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಎದುರಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಸಮಸ್ಯೆಯ ಮಾಹಿತಿ ತಿಳಿದ ತಕ್ಷಣ ತಹಶೀಲ್ದಾರ್ ಹಾಗೂ ಹುಳಿಯಾರು ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿಯಾಗಿರುವ ಮಮತಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು. ಕೂಡಲೇ ಚರಂಡಿ ಸ್ವಚ್ಛಗೊಳಿಸಿ ಹೂಳೆತ್ತುವಂತೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್ ಅವರಿಗೆ ಸೂಚಿಸಿದರು.
ತಹಶೀಲ್ದಾರ್ ಅವರ ಸೂಚನೆಯ ಮೇರೆಗೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್ ಹಾಗೂ ಪರಿಸರ ಎಂಜಿನಿಯರ್ ಚಂದ್ರಶೇಖರ್ ಅವರು ಜೆಸಿಬಿ ಹಾಗೂ ಪೌರಕಾರ್ಮಿಕರೊಂದಿಗೆ ಸ್ಥಳಕ್ಕೆ ತೆರಳಿ ರಾಮಗೋಪಾಲ್ ಸರ್ಕಲ್ ಬಳಿ ಚರಂಡಿಯ ಹೂಳೆತ್ತುವ ಕಾರ್ಯ ನಡೆಸಿದರು. ಇದರಿಂದ ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಲಾಯಿತು.
ಈ ಕುರಿತು ಮಾತನಾಡಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್, ಸದ್ಯಕ್ಕೆ ಚರಂಡಿ ಸ್ವಚ್ಛಗೊಳಿಸಲಾಗಿದ್ದು, ಸಂಜೆಯ ನಂತರ ಸುರಿದ ಮಳೆಯಿಂದ ರಸ್ತೆಯಲ್ಲಿ ನೀರು ನಿಂತಿದೆ. ನಾಳೆ ಬೆಳಗ್ಗೆ ೬ ಗಂಟೆಯಿAದಲೇ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕೆಲವು ಅಂಗಡಿಗಳ ಮುಂದೆ ಚರಂಡಿ ಮೇಲೆ ಕಲ್ಲುಗಳನ್ನು ಹಾಕಿರುವುದರಿಂದ ಸ್ವಚ್ಛತಾ ಕಾರ್ಯಕ್ಕೆ ತೊಂದರೆಯಾಗುತ್ತಿದೆ. ಇದರಿಂದ ಸಮಸ್ಯೆ ಉಂಟಾಗಿದೆ. ನಾಳೆ ಮುಂಜಾನೆಯಿAದಲೇ ಚರಂಡಿ ಒತ್ತುವರಿ ತೆರವುಗೊಳಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

(Visited 1 times, 1 visits today)