ಕೊರಟಗೆರೆ: ಆಧುನಿಕತೆಯ ಭರಾಟೆ, ಸೋಶಿಯಲ್ ಮೀಡಿಯಾದ ಅಬ್ಬರದ ನಡುವೆ ಗ್ರಾಮೀಣ ಭಾಗಗಳಲ್ಲಿನ ನಮ್ಮ ಮಣ್ಣಿನ ಸೊಗಡಿನ ದೇಸಿ ನಾಟಕ ,ಜಾನಪದ ,ಕೋಲಾಟ ಕಲೆಗಳು ನಿಧಾನವಾಗಿ ಮರೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಹಳೆಯ ಸಂಪ್ರದಾಯ, ಜಾನಪದ ಹಾಡುಗಳು ಹಾಗೂ ಸಾಂಪ್ರದಾಯಿಕ ಕೋಲಾಟ ಕಲೆಯನ್ನು ಇಂದಿಗೂ ಉಳಿಸಿ ಬೆಳೆಸುತ್ತಿರುವ ಕಲಾವಿದರು ನಮ್ಮ ಗ್ರಾಮೀಣ ಭಾಗಗಳಲ್ಲಿ ಇರುವುದು ಹೆಮ್ಮೆಯ ಸಂಗತಿಯಾಗಿದೆ.
ಇಂದಿನ ಯುವಜನತೆ ಮೊಬೈಲ್ ಮತ್ತು ಸೋಶಿಯಲ್ ಮೀಡಿಯಾದಲ್ಲೇ ಹೆಚ್ಚಿನ ಸಮಯ ಕಳೆಯುತ್ತಿರುವ ಸಂದರ್ಭದಲ್ಲಿ, ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಹೊಸಕೋಟೆ ಗೊಲ್ಲರಹಟ್ಟಿಯ ಕಲಾವಿದರು ಮಾತ್ರ ತಮ್ಮ ಪೂರ್ವಜರಿಂದ ಬಂದ ದೇಸಿ ಕಲೆಯನ್ನು ಇಂದಿಗೂ ಜೀವಂತವಾಗಿರಿಸಿದ್ದಾರೆ. ಕೋಲಾಟದ ಹೆಜ್ಜೆ, ಜಾನಪದ ಪದಗಳ ಗಾಯನ ಹಾಗೂ ಗ್ರಾಮೀಣ ಸಂಸ್ಕೃತಿಯ ಸೊಗಡಿನ ಮೂಲಕ ನಮ್ಮ ನಾಡಿನ ಕಲಾ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ.
ಇನ್ನು ಹೊಸಕೋಟೆ ಗ್ರಾಮದ ಕೋಲಾಟ ಕಲಾವಿದರಾದ ಎಚ್.ಎಸ್. ಶಿವಣ್ಣ ಅವರು ಹಲವು ವರ್ಷಗಳಿಂದ ದೇಸಿ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇವರಲ್ಲಿರುವ ಕಲಾ ಪ್ರತಿಭೆ ಹಾಗೂ ಜಾನಪದ ಕಲೆಯ ಮೇಲಿನ ಆಸಕ್ತಿಯನ್ನು ಗುರುತಿಸಿದ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷರಾದ ಪುಟ್ಟಣ್ಣ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷರಾದ ಈರಣ್ಣ ಅವರು ಶಿವಣ್ಣನವರ ಸಾಧನೆಯನ್ನು ತಾಲೂಕು ಆಡಳಿತದ ಗಮನಕ್ಕೆ ತಂದಿದ್ದರು.
ಇದರ ಫಲವಾಗಿ ನವೆಂಬರ್ 1ರಂದು ನಡೆದ ತಾಲ್ಲೂಕು ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಎಚ್.ಎಸ್. ಶಿವಣ್ಣ ಅವರಿಗೆ ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಯಾವುದೇ ನಿರೀಕ್ಷೆಯಿಲ್ಲದೆ ತಮ್ಮ ಕಲೆಯನ್ನು ಉಳಿಸಿಕೊಂಡು ಬರುತ್ತಿರುವ ರಂಗಭೂಮಿ ಕಲಾವಿದನಿಗೆ ಪ್ರಶಸ್ತಿಯ ಗೌರವ ದೊರೆತಿರುವುದು ಹೊಸಕೋಟೆ ಗ್ರಾಮಸ್ಥರು ಹಾಗೂ ಕಲಾಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ಇನ್ನು ಕೋಲಾಟವು ಜಗಳೂರು ತಾಲ್ಲೂಕಿನ ಕಲ್ದೇವಪುರದಲ್ಲಿ ಹುಟ್ಟಿಕೊಂಡಿದೆ ಎನ್ನಲಾಗುತ್ತದೆ. ಇಂತಹ ಸಾಂಪ್ರದಾಯಿಕ ಕಲೆಗೆ ತನ್ನದೇ ಆದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವವಿದೆ. ಆದರೆ, ಕಾಲ ಬದಲಾದಂತೆ ಇಂತಹ ಕಲೆಗಳನ್ನು ಅಭ್ಯಾಸ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.
ಹಾಗಾಗಿ, ಕೇವಲ ಪ್ರಶಸ್ತಿ ಮತ್ತು ಸನ್ಮಾನಗಳಿಗೆ ಸೀಮಿತವಾಗದೆ, ಇಂತಹ ಕಲಾವಿದರಿಗೆ ಸೂಕ್ತ ಪೆÇ್ರೀತ್ಸಾಹ ನೀಡಬೇಕು. ಅವರಲ್ಲಿರುವ ಕಲಾ ಪ್ರತಿಭೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು. ನಮ್ಮ ಪೂರ್ವಜರು ನಮಗೆ ಕೊಡುಗೆಯಾಗಿ ನೀಡಿರುವ ಈ ದೇಸಿ ಕಲೆಯನ್ನು ನಾವೇ ಉಳಿಸಿ ಬೆಳೆಸಬೇಕಿದೆ ಎಂಬುದು ಕಲಾಭಿಮಾನಿಗಳ ಆಶಯವಾಗಿದೆ.
ಇನ್ನು ಎಚ್.ಎಸ್. ಶಿವಣ್ಣ ಅವರಿಗೆ ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ, ಅವರ ಕಲಾ ಪ್ರತಿಭೆಯನ್ನು ಗುರುತಿಸಿ ತಾಲೂಕು ಆಡಳಿತದ ಗಮನಕ್ಕೆ ತಂದ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಪುಟ್ಟಣ್ಣ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಈರಣ್ಣ ಅವರನ್ನು ಕೋಲಾಟ ಕಲಾವಿದರು ಮತ್ತು ಹೊಸಕೋಟೆ ಗ್ರಾಮಸ್ಥರ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ವೆಂಕಟೇಶ್, ಕೃಷ್ಣಪ್ಪ, ಕಾಡುಗೊಲ್ಲರ ತಾಲ್ಲೂಕು ಅಧ್ಯಕ್ಷ ಮುತ್ತುರಾಜ್, ಮಂಜುನಾಥ್, ಶಿವರಾಜು, ಶಿವಲಿಂಗಯ್ಯ, ರಾಜಣ್ಣ, ನಾಗರಾಜು, ಚಿತ್ತಯ್ಯ, ಈರಲಿಂಗಪ್ಪ, ಹನುಮಂತರಾಜು ಸೇರಿದಂತೆ ಕೋಲಾಟದ ಪ್ರತಿಭೆಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
(Visited 1 times, 1 visits today)



