ಗುಬ್ಬಿ :

      ಅನಾಥಾಲಯದ ಹೆಸರಿನಲ್ಲಿ ಹಣ ದುರ್ಬಳಕೆಯಾಗಿ ವಿದ್ಯಾರ್ಥಿಗಳೇ ಇಲ್ಲದ ಅನಾಥಾಲಯಕ್ಕೆ 2017-18ನೇ ಸಾಲಿನಲ್ಲಿ 93 ವಿದ್ಯಾರ್ಥಿಗಳಿಗೆ 77,13,300 ರೂ.ಗಳನ್ನು ಸಭೆಯ ಅನುಮೋದನೆ ಪಡೆಯದೆ ನೀಡಿರುವುದು ಎಷ್ಟು ಸಮಂಜಸ ಎಂದು ದೇವರಾಜು ಅರಸು ಅಭಿವೃದ್ದಿ ನಿಗಮದ ಅಧಿಕಾರಿಗಳನ್ನು ಸಚಿವ ಎಸ್.ಆರ್.ಶ್ರೀನಿವಾಸ್ ತರಾಟೆಗೆ ತೆಗೆದುಕೊಂಡ ಘಟನೆ ಕೆ.ಡಿ.ಪಿ ಸಭೆಯಲ್ಲಿ ನಡೆಯಿತು.

      ಪಟ್ಟಣದ ತಾಲ್ಲೂಕು ಪಂಚಾಯ್ತಿ ಆವರಣದಲ್ಲಿ ಕರೆದಿದ್ದ ಕೆ.ಡಿ.ಪಿ ಸಭೆಯ ಇಲಾಖಾವಾರು ಅಭಿವೃದ್ದಿಯ ಸಭೆಯಲ್ಲಿ ಮಾತನಾಡಿದ ಅವರು ಹಿಂದಿನ ಬಾರಿಯೇ ಈ ಬಗ್ಗೆ ವಿವರಣೆ ಕೇಳಿದ್ದು ಇಲ್ಲಿಯವರೆಗೂ ಯಾವುದೇ ದಾಖಲಾತಿಯನ್ನು ಕೇಳದೆ ಸರ್ಕಾರದ ಹಣವನ್ನು ಪೋಲು ಮಾಡುತ್ತಿರುವ ಅಧಿಕಾರಿಗಳನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ ಅವರು ಸರ್ಕಾರಿ ಶಾಲೆಯ ಮಕ್ಕಳಿಗೆ ಸಮವಸ್ತ್ರ ಹಾಗೂ ಶೂಗಳನ್ನು ನೀಡುವಲ್ಲಿ ಸರಿಯಾದ ಮಾಹಿತಿ ನೀಡದೆ ಇಲಾಖೆಯ ಅನುಮತಿ ಪಡೆಯದೆ ಎಸ್.ಡಿ.ಎಂ.ಸಿ ಸದಸ್ಯರುಗಳೇ ಶೂಗಳನ್ನು ಖರೀದಿಸುವ ಹಕ್ಕನ್ನು ನೀಡಿ ಕಳಪೆ ಕಂಪನಿಯ ಶೂಗಳನ್ನು ನೀಡುತ್ತಿದ್ದು ಇಲ್ಲಿನ ಶಿಕ್ಷಣಾಧಿಕಾರಿಗಳು ಪರಿಶೀಲಿಸದೆ ಇರುವುದು ಇವರ ಕರ್ತವ್ಯಲೋಪಕ್ಕೆ ಕಾರಣವಾಗಿದೆ ಎಂದು ದೂರಿದರು.

      ಕುಡಿಯುವ ನೀರಿನ ಇಲಾಖೆಯ ಬಗ್ಗೆ ತಾಲ್ಲೂಕಿನಲ್ಲಿ 139 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು ಕುಡಿಯುವ ನೀರನ್ನು ಹಾಗೂ ಘಟಕದ ಮೇಲ್ವಿಚಾರಣೆಯನ್ನು 5 ಏಜೆನ್ಸಿಗಳು ನಡೆಸುತ್ತಿದ್ದು ತಾಲ್ಲೂಕಿನಲ್ಲಿ 123 ಘಟಕಗಳ ಸಮಸ್ಯೆಯು ಇದೆ. ಈ ಬಗ್ಗೆ ಏಜೆನ್ಸಿಯ ಮಾಲೀಕರಿಗೆ ನೋಟೀಸ್ ನೀಡಲಾಗಿದೆ ಎಂದು ತಿಳಿಸಿದ ಎ.ಇ.ಇ ರಮೇಶ್‍ರವರು ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯು ಸಾಕಷ್ಟಿದ್ದು ಈಗಾಗಲೇ ಇದಕ್ಕೆ ಸಂಬಂಧಪಟ್ಟ ದೂರನ್ನು ದಾಖಲಿಸಿದ್ದು ಅವಶ್ಯಕತೆ ಇದ್ದಲ್ಲಿ ಟ್ಯಾಂಕರ್ ಮೂಲಕ ನೀರನ್ನು ಬಿಡಿಸುವಂತಹ ಸ್ಥಿತಿ ತಾಲ್ಲೂಕಿನ ಹಳ್ಳಿಗಳಲ್ಲಿ ಇನ್ನೂ ಬಂದಿಲ್ಲ ಮುಂದಿನ ದಿನಗಳಲ್ಲಿ ನೀರಿನ ಕೊರತೆಯನ್ನು ನೀಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

      ಡಾಂಬರೀಕರಣ ನಡೆದ 3 ದಿನಗಳಲ್ಲೇ ರಸ್ತೆಯು ಹದಗೆಟ್ಟಿರಲು ಅಧಿಕಾರಿಗಳ ಹಣದ ದಾಹವೇ ಹೆಚ್ಚಾಗಿದ್ದು ತಾಲ್ಲೂಕಿನ ಗೌರೀಪುರ ರಸ್ತೆಗೆ ಟಾರ್ ರಸ್ತೆಯನ್ನು ನಿರ್ಮಿಸಿ ಕೇವಲ ಮೂರು ದಿನಗಳಲ್ಲೇ ಹಾಳಾಗಿದ್ದು ಇದಕ್ಕೆ ಸಂಬಂಧಪಟ್ಟ ಅಧಿಕಾರಿಯನ್ನು ಹಿಗ್ಗಾಮುಗ್ಗಾ ಬೈದು ಈ ರಸ್ತೆಗೆ ಹಾಕಿರುವ ಹಣವನ್ನು ಸಂಬಂಧಪಟ್ಟ ಅಧಿಕಾರಿಗಳಿಂದಲೇ ವಸೂಲು ಮಾಡುವಂತಾಗಬೇಕು. ಸಂಬಂಧಪಟ್ಟ ಮೇಲಧಿಕಾರಿಗಳು ಸ್ಥಳ ಪರಿಶೀಲಿಸದೆ ಗುತ್ತಿಗೆದಾರನಿಗೆ ಬಿಲ್ ನೀಡಲು ಎಷ್ಟು ಹಣ ಪಡೆದಿದ್ದಿರಾ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

      ಕೆ.ಡಿ.ಪಿ ಸಭೆಯಲ್ಲಿ ಜಿ.ಪಂ.ಸದಸ್ಯರುಗಳಾದ ಡಾ.ನವ್ಯಬಾಬು, ಭಾರತಿ ಹಿತೇಶ್, ಯಶೋಧಮ್ಮ, ಜಿ.ಹೆಚ್.ಜಗನ್ನಾಥ್, ರಾಮಾಂಜೀನಪ್ಪ, ತಾ.ಪಂ. ಅಧ್ಯಕ್ಷೆ ಅನುಸೂಯ ನರಸಿಂಹಮೂರ್ತಿ, ಉಪಾಧ್ಯಕ್ಷೆ ಕಲ್ಪನ, ಸ್ಥಾಯಿ ಸಮಿತಿ ಅಧ್ಯಕ್ಷ ಅ.ನ.ಲಿಂಗಪ್ಪ ಹಾಗೂ ಎಲ್ಲಾ ಇಲಾಖಾಧಿಕಾರಿಗಳು ಭಾಗವಹಿಸಿದ್ದರು.
 
 
 

(Visited 34 times, 1 visits today)