ತುಮಕೂರು:

      ಜಿಲ್ಲೆಯಲ್ಲಿರುವ ಎಲ್ಲ ಆಟೋ ರಿಕ್ಷಾಗಳಿಗೆ ಕಡ್ಡಾಯವಾಗಿ ಸಂಚಾರಿ ಪೊಲೀಸ್ ಠಾಣೆಯಿಂದ ನೀಡಲಾಗುವ ಟಿಟಿಪಿ(ತುಮಕೂರು ಟ್ರಾಫಿಕ್ ಪೊಲೀಸ್) ಸಂಖ್ಯೆಯನ್ನು ಅಳವಡಿಸಬೇಕೆಂದು ಜಿಲ್ಲಾಧಿಕಾರಿ ಡಾ|| ಕೆ. ರಾಕೇಶ್ ಕುಮಾರ್ ಅವರು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

      ತಮ್ಮ ಕಚೇರಿಯಲ್ಲಿಂದು ಜರುಗಿದ ಇ-ಆಟೋ ರಿಕ್ಷಾ ವಿತರಣೆ ಕುರಿತ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಟಿಟಿಪಿ ಸಂಖ್ಯೆ ಅಳವಡಿಸದ ಆಟೋ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದ ಅವರು ಟಿಟಿಪಿ ಸಂಖ್ಯೆಯನ್ನು ಅಳವಡಿಸುವುದರಿಂದ ಜಿಲ್ಲೆಯಲ್ಲಿ ಚಾಲನೆಯಲ್ಲಿರುವ ಆಟೋರಿಕ್ಷಾಗಳ ನಿಖರ ಅಂಕಿ-ಅಂಶ ದೊರೆಯಲಿದೆ ಎಂದು ತಿಳಿಸಿದರು.

      ಜಿಲ್ಲೆಯ ಎಲ್ಲ ಆಟೋ ರಿಕ್ಷಾ ಚಾಲಕರ ಚಾಲನಾ ಪರವಾನಗಿಯನ್ನು ಕೂಡಲೇ ಆಧಾರ್‍ಲಿಂಕ್ ಮಾಡಬೇಕೆಂದು ಆರ್‍ಟಿಓಗೆ ಸೂಚಿಸಿದರು. ಪ್ರಾದೇಶಿಕ ಸಾರಿಗೆ ಇಲಾಖೆಗೆ ನಿಗಧಿತ ಶುಲ್ಕ ಪಾವತಿಸಿ ಆಟೋಗಳ ಹಿಂದೆ ವಿವಿಧ ಕಂಪನಿಗಳ ಎಲ್‍ಇಡಿ ಜಾಹೀರಾತು ಫಲಕಗಳನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಡುವ ಬಗ್ಗೆ ಚಿಂತಿಸಲಾಗಿದೆ. ಜಾಹೀರಾತು ನೀಡಿದ ಕಂಪನಿಗಳು ಜಾಹೀರಾತು ಫಲಕ ಅಳವಡಿಕೆಗಾಗಿ ಹಣ ಪಾವತಿ ಮಾಡುವುದರಿಂದ ಆಟೋ ಚಾಲಕರ ಆದಾಯ ಹೆಚ್ಚಾಗುತ್ತದೆ. ಜಾಹೀರಾತು ಅಳವಡಿಕೆಗೂ ಮುನ್ನ ಆಟೋ ಮಾಲೀಕರ/ಚಾಲಕರ ಚಾಲನಾ ಪರವಾನಗಿ, ವಾಹನದ ದಾಖಲೆಗಳು, ಮಾಲೀಕರ ಆಧಾರ್ ಕಾರ್ಡನ್ನು ತಪ್ಪದೇ ಪರಿಶೀಲಿಸಬೇಕೆಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಜು ಅವರಿಗೆ ನಿರ್ದೇಶನ ನೀಡಿದರು.

      ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಸಹಾಯಧನ ಆಧಾರದ ಮೇಲೆ 20 ಇ-ರಿಕ್ಷಾಗಳನ್ನು ವಿತರಿಸಲು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ನಿಯಮಗಳನ್ನು ಪಾಲಿಸಬೇಕು. ಇ-ರಿಕ್ಷಾ ವಿತರಣೆಯಲ್ಲಿ ಮಹಿಳೆಯರಿಗೆ ಮೊದಲ ಆದ್ಯತೆ ನೀಡಬೇಕು.

      ನಿರುದ್ಯೋಗಿ ಫಲಾನುಭವಿಗಳಿಗೆ ಮಾತ್ರ ಇ-ರಿಕ್ಷಾ ವಿತರಣೆಯಾಗಬೇಕು. ಫಲಾನುಭವಿಗಳ ಆಯ್ಕೆಯಲ್ಲಿ ಲೋಪದೋಷಗಳಾಗಬಾರದು ಎಂದು ಸ್ಮಾರ್ಟ್ ಸಿಟಿ ಜಂಟಿ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದರು.

      ಸ್ಮಾರ್ಟ್ ಸಿಟಿ ಜಂಟಿ ವ್ಯವಸ್ಥಾಪಕ ನಿರ್ದೇಶಕ ವಿ. ಅಜಯ್ ಮಾತನಾಡಿ ಇ-ರಿಕ್ಷಾ ಕೋರಿ ಇಬ್ಬರು ಮಹಿಳೆಯರು ಸೇರಿದಂತೆ 45 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಫಲಾನುಭವಿಗಳ ಆಯ್ಕೆ ಸಂದರ್ಭದಲ್ಲಿ ತ್ರಿಚಕ್ರ ವಾಹನ ನಡೆಸುವ ಸಾಮಥ್ರ್ಯವುಳ್ಳ ಚಾಲನಾ ಪರವಾನಗಿ(ಡಿಎಲ್) ಹೊಂದಿರುವ, ಕನಿಷ್ಠ 21 ರಿಂದ 45 ವರ್ಷ ವಯೋಮಿತಿಯೊಳಗಿನ, 8ನೇ ತರಗತಿಯಲ್ಲಿ ಉತ್ತೀರ್ಣರಾಗಿರುವವರನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುವುದು. ವಿಳಾಸ ದೃಢೀಕರಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬಿ.ಪಿ.ಎಲ್ ಕಾರ್ಡ್, ಜನನ ಪ್ರಮಾಣ ಪತ್ರ ಹಾಗೂ ಎರಡು ಭಾವಚಿತ್ರ, ಮತ್ತಿತರ ದಾಖಲೆಗಳನ್ನು ಪರಿಶೀಲಿಸಿದ ನಂತರವೇ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು ಎಂದರು.

      ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಆಯ್ಕೆಯಾದ ಸಾಮಾನ್ಯ ವರ್ಗದ ಫಲಾನುಭವಿಗೆ ಇ-ರಿಕ್ಷಾ ದರದಲ್ಲಿ ಶೇ. 50ರಷ್ಟು ಹಾಗೂ ಮಹಿಳೆ/ತೃತೀಯ ಲಿಂಗತ್ವ ಅಲ್ಪಸಂಖ್ಯಾತರು/ ಪರಿಶಿಷ್ಟ ಜಾತಿ /ಪರಿಶಿಷ್ಟ ವರ್ಗದವರಿಗೆ ಶೇ. 25ರಷ್ಟು ದರವನ್ನು ಮಾತ್ರ ಭರಿಸುವ ಅವಕಾಶವನ್ನು ಕಲ್ಪಿಸಲಾಗಿದೆ.

      ಫಲಾನುಭವಿಗಳಿಗೆ ಇ-ರಿಕ್ಷಾ ಪಡೆದ ನಂತರ ಸ್ವತಃ ತಾವೇ ಚಾಲನೆ ಮಾಡಬೇಕು ಹಾಗೂ ಪರಭಾರ/ವರ್ಗಾವಣೆಗೆ ಅವಕಾಶವಿರುವುದಿಲ್ಲವೆಂಬ ನಿಯಮವನ್ನು ವಿಧಿಸಲಾಗುವುದು ಎಂದರಲ್ಲದೆ ಇ-ರಿಕ್ಷಾ ವಿತರಣೆ ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವರ್ಗದವರಿಗೆ ಶೇ. 24ರಷ್ಟು, ಅಲ್ಪಸಂಖ್ಯಾತರಿಗೆ ಶೇ. 15ರಷ್ಟು, ಮಹಿಳೆಯರಿಗೆ ಶೇ.30ರ ಪ್ರಮಾಣದಲ್ಲಿ ಹಾಗೂ 3 ಇ-ರಿಕ್ಷಾಗಳನ್ನು ತೃತೀಯ ಲಿಂಗತ್ವ ಅಲ್ಪಸಂಖ್ಯಾತರಿಗೆ ಮೀಸಲಿಡಲಾಗುವುದು.

     ಮೀಸಲಿರಿಸಿದ ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಾಗ ಇತರೆ ವರ್ಗದ ಫಲಾನುಭವಿಗಳನ್ನು ಪರಿಗಣಿಸಲಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್, ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕ ಬಿ.ಟಿ. ರಂಗಸ್ವಾಮಿ, ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ಅಧಿಕಾರಿಗಳು, ವಿವಿಧ ಆಟೋ ಚಾಲಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

(Visited 219 times, 1 visits today)