ಮಧುಗಿರಿ :

      ಕ್ಷೇತ್ರದಲ್ಲಿ ಶಾಸಕರ ಅಧಿಕಾರವೇನು ಎಂಬುದರ ಬಗ್ಗೆ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆದು ತಾ.ಪಂ.ಅಧ್ಯಕ್ಷರಾದಿಯಾಗಿ ಬಹುತೇಕ ಸದಸ್ಯರು ಒಕ್ಕೂರಲಿನ ತಮ್ಮ ಕಾರ್ಯ ವ್ಯಾಪ್ತಿಯ ಕೆಲಸಗಳಿಗೆ ಮೂಗು ತೂರಿಸದಂತೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದಂತಹ ಘಟನೆ ಶುಕ್ರವಾರ ನಡೆಯಿತು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಇಂದಿರಾ ದೇನಾನಾಯ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಶಾಸಕರ ಅನುದಾನದಲ್ಲಿ ನಾವ್ಯಾರು ಕೆಲಸ ಕೇಳುವುದಿಲ್ಲ ತಾಲೂಕು ಪಂಚಾಯಿತಿಗೆ ಬಂದಿರುವ ಅನುದಾನದಲ್ಲಿ ನಮ್ಮ ಕೆಲಸ ನಾವು ಮಾಡುತ್ತೇವೆ. ನಾವುಗಳು ಸರಕಾರದ ಹಂತದಲ್ಲಿ ಸಚೀವರುಗಳನ್ನು ಭೇಟಿ ಮಾಡಿ ಅನುದಾನ ಬಿಡುಗಡೆ ಮಾಡಿಸಿಕೊಂಡು ಬಂದಿರುತ್ತೇವೆ. ನಮ್ಮ ಕ್ಷೇತ್ರಗಳ ವ್ಯಾಪ್ತಿಯ ಕಾಮಗಾರಿಗಳಿಗೆ ಶಾಸಕರ ನೆಪವೊಡ್ಡಿ ಕೆಲಸ ಬದಲಾವಣೆ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ ತಾಲೂಕು ಪಂಚಾಯಿತಿ ಇರುವುದು ಯಾಕೆ ಎಂದು ಅಧ್ಯಕ್ಷ ಇಂದಿರಾದೇನಾನಾಯ್ಕ ಹಾಗೂ ಕೆಲವು ಸದಸ್ಯರುಗಳು ಒಕ್ಕೂರಲಿನಿಂದ ತಮ್ಮ ಅಧಿಕಾರ ಚಲಾವಣೆಯಾಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ತಾಲೂಕು ಪಂಚಾಯಿತಿ ಆಡಳಿತ ಕಾಂಗ್ರೆಸ್ ನಡೆಸುತ್ತಿದ್ದು. ನಮ್ಮ ವ್ಯಾಪ್ತಿಯ ಅನುದಾನವನ್ನು ನಮ್ಮ ಕಾರ್ಯಕರ್ತರುಗಳಿಗೆ ನೀಡಲಾಗುವುದು. ಶಾಸಕರ ಬೆಂಬಲಿಗರಿಗೆ ಅಧಿಕಾರಿಗಳು ಯಾಕೆ ನೀಡಬೇಕು. ನಮ್ಮ ಕಾರ್ಯಕರ್ತರು ಎಲ್ಲಿಗೆ ಹೋಗಬೇಕೆಂದು ಶಾಸಕರ ಹೆಸರನ್ನು ಪದೆ ಪದೆ ಅಡ್ಡ ತಂದು ಅಧಿಕಾರಿಗಳು ಕಾಮಗಾರಿಗಳ ದಿಕ್ಕನ್ನೇ ಬದಲಾಯಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂಬ ಆರೋಪಗಳು ಕೇಳಿಬಂದವು.

      ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿಯ ಅಧ್ಯಕ್ಷ ಸಿದ್ದಾಪುರ ರಾಮಣ್ಣ ಮಾತನಾಡಿ, ಸಿದ್ದಾಪುರದಲ್ಲಿರುವ ಶುದ್ದ ಕುಡಿಯುವ ನೀರಿನ ಘಟಕದಲ್ಲಿ ಕಳೆದ 3 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಿದ್ದು. ಬೇರೊಬ್ಬರನ್ನು ನೇಮಿಸಿರುವುದರಿಂದ ಗ್ರಾಮದಲ್ಲಿ ಅಶಾಂತಿಗೆ ಕಾರಣವಾಗಿದೆ. ಆದ್ದರಿಂದ ಗ್ರಾಮ ಪಂಚಾಯಿತಿ ವತಿಯಿಂದ ನಿರ್ವಹಣೆ ಮಾಡಿಸಿ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಎಇಇ ರವರಿಗೆ ಸೂಚಿಸಿದರು. ತಾಲೂಕು ಪಂಚಾಯಿತಿಯ ಕಾಮಗಾರಿಗಳಿಗೆ ಹಣ ಬಿಡುಗಡೆಯಾಗಿದ್ದು ಎಸ್ಟಿಮೇಟ್‍ನ್ನೇ ಬದಲಾವಣೆಯು ಶಾಸಕರ ಅಣತಿಯಂತೆ ಅಧಿಕಾರಿಗಳು ಮಾರ್ಪಾಡು ಮಾಡುತ್ತಿದ್ದಾರೆಂದು ದೂರಿದರು.

      ಯಾವುದೇ ಇಲಾಖೆಯ ಅಧಿಕಾರಿಗಳು ಮಾಹಿತಿ ಇದ್ದರೆ ಮಾತ್ರ ಸಭೆಗೆ ಬನ್ನಿ ಇಲ್ಲವಾದರೆ ಸಭೆಗೆ ಬರಬೇಡಿ. ಅಪೂರ್ಣ ಮಾಹಿತಿ ನೀಡುವ ಅಧಿಕಾರಿಯ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಕೃಷಿ ಹೊಂಡ ನಿಯಮ ಮೀರಿ ನಿರ್ಮಿಸಲಾಗಿದ್ದು ನೀರೇ ಬಾರದ ಕಡೆ ನಿರ್ಮಿಸಿದ್ದಾರೆ. ಇಂತವುಗಳ ಸಂಖ್ಯೆ ಹೆಚ್ಚಾಗಿದ್ದು ಈ ಯೋಜನೆ ಹಳ್ಳ ಹಿಡಿಯುತ್ತಿದೆ. ಇನ್ನು ಮುಂದೆ ಇಳಿಜಾರಿನಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿರುವುದರಿಂದ ನೀರನ್ನು ಇಂಗಿಸಬಹುದೆಂದು ತಾ.ಪಂ.ಅಧ್ಯಕ್ಷರು ಸಲಹೆ ನೀಡಿದರು.

ಕುಡಿಯುವ ನೀರಿಗೆ ತೊಂದರೆ :

      ತಾಲ್ಲೂಕಿನಲ್ಲಿ ನವೆಂಬರ್ ತಿಂಗಳಲ್ಲೇ ಕುಡಿಯುವ ನೀರಿನ ಅಭಾವ ಹೆಚ್ಚಾಗಿದ್ದು ಮುಂದಿನ ಬೇಸಿಗೆ ಸಂದರ್ಭದಲ್ಲಿ ನೀರಿಗಾಗಿಯೇ ಜನ ಗುಳೆ ಹೋಗಬೇಕಾಗುತ್ತದೆ ಎಂದು ಸದಸ್ಯ ರಾಜು ಸಭೆಯ ಗಮನ ಸೆಳೆದಿದ್ದು ವಿಶೇಷವಾಗಿತ್ತು. ಶುದ್ದ ಕುಡಿಯುವ ನೀರಿನ ಘಟಕಗಳು ಹಲವು ಕಡೆ ಕಾರ್ಯನಿರ್ವಹಿಸುತ್ತಿಲ್ಲ. ಶೀಘ್ರವಾಗಿ ಸರಿಪಡಿಸುವಂತೆ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ತಿಳಿಸಿದರು.

      ಎತ್ತಿನಹೊಳೆ ಯೋಜನೆಯಡಿ ತಾಲ್ಲೂಕಿನ ಚೆನ್ನಮಲ್ಲೇನಹಳ್ಳಿಯಲ್ಲಿ ನಡೆದ ಇಲಾಖಾ ಕಾಮಗಾರಿಗೆ ತಾ.ಪಂ.ಅಧ್ಯಕ್ಷರನ್ನೇ ಆಹ್ವಾನಿಸದೆ ಅವಮಾನಿಸಿದ್ದು ಈ ಬಗ್ಗೆ ಪತ್ರ ಬರೆದರೆ ಸಮಾರಂಭವೇ ನಡೆದಿಲ್ಲವೆಂದು ಉತ್ತರ ನೀಡಿದ್ದಾರೆ. ಗ್ರಾಮ ವಿಕಾಸ ಯೋಜನೆಯಡಿ ಸೋದೇನಹಳ್ಳಿ ಮಲ್ಲನಾಯಕನಹಳ್ಳಿ ಗ್ರಾಮಗಳಿಗೆ ಮಂಜೂರಾಗಿದ್ದು. ಈ ಯೋಜನೆ ಆಯ್ಕೆಯಾದ ಗ್ರಾಮದಲ್ಲೇ ನಡೆಯಬೇಕೆಂದು ತಾಲೂಕು ಪಂಚಾಯಿತಿ ಸದಸ್ಯೆ ಮಮತ ಮನವಿ ಮಾಡಿದರು.

ಗುರುಭವನದ ಅವ್ಯವಹಾರ ಬೆಳಕಿಗೆ :

      ಪಟ್ಟಣದಲ್ಲಿರುವ ಗುರುಭವನದ ಮುಂಭಾಗ ನಿರ್ಮಾಣವಾಗಿರುವ ವಾಣಿಜ್ಯ ಮಳಿಗೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವುದು ಯಾವ ಕಾರಣಕ್ಕಾಗಿಯೆಂದು ತಾ.ಪಂ.ಸದಸ್ಯ ರಂಗನಾಥ್ ಬೆಸ್ಕಾಂ ಎಇಇ ಯವರನ್ನು ಪ್ರಶ್ನಿಸಿದಾಗ, ಎಇಇ ಉತ್ತರಿಸಿ ವಾಣಿಜ್ಯ ಮಳಿಗೆ ನಿರ್ಮಾಣಕ್ಕಾಗಿ ತಾತ್ಕಲಿಕವಾಗಿ ವಿದ್ಯುತ್ ಸಂಪರ್ಕವನ್ನು 1 ಕೆ.ವಿ.ಯಷ್ಟು ಅನುಮತಿ ನೀಡಲಾಗಿತ್ತು. ಪ್ರಸ್ತುತ 7 ರಿಂದ 8 ಕೆ.ವಿ ಯಷ್ಟು ವಿದ್ಯುತ್ ಬಳಕೆಯಾಗುತ್ತಿದೆ. ಜೊತೆಗೆ 19 ನೇ ವಾರ್ಡಿನ ಪುರಸಭೆ ಸದಸ್ಯ ಎಂ.ಎಸ್.ಚಂದ್ರಶೇಖರ್‍ಬಾಬು ಈ ಕಟ್ಟಡ ಅನಧಿಕೃತ ಕಟ್ಟಡವಾಗಿದ್ದು ಇದಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಲಿಖಿತ ದೂರನ್ನಾಧರಿಸಿ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಪತ್ರ ಬರೆದಾಗ ಈ ಕಟ್ಟಡವು ಅನಧಿಕೃತ ಕಟ್ಟಡವಾಗಿದ್ದು ಪುರಸಭೆಯಿಂದ ವಿದ್ಯುತ್ ಸಂಪರ್ಕಕ್ಕೆ ಎನ್‍ಒಸಿ ನೀಡಲು ಬರುವುದಿಲ್ಲವೆಂದು ಪತ್ರದ ಮುಖೇನ ತಿಳಿಸಿರುವುದರಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಈ ವಿಚಾರ ಪುರಸಭೆಗೆ ಸಂಬಂಧಿಸಿದ್ದು ತಾಲ್ಲೂಕು ಪಂಚಾಯಿತಿಯಲ್ಲಿ ಪ್ರತಿದ್ವನಿಸಿದ್ದರಿಂದ ತಾ.ಪಂ.ಸದಸ್ಯ ರಂಗನಾಥ್‍ಗೆ ಇದರ ಅರಿವಿಲ್ಲದೆ ವಿನಾಕಾರಣ ಚರ್ಚೆ ಮಾಡಿ ಮುಜುಗರಕ್ಕೆ ಒಳಪಟ್ಟಿದ್ದಲ್ಲದೇ ಡಿಡಿಪಿಐ ಕಚೇರಿ, ನೂತನ ಪುರಸಭಾ ಕಚೇರಿಯ ಕಟ್ಟಡ ಹಾಗೂ ನೂರಾರು ಕಟ್ಟಡಗಳು ಪುರಸಭ ವ್ಯಾಪ್ತಿಯಲ್ಲಿ ಪರವಾನಿಗೆ ಪಡೆಯದೆ ನಿರ್ಮಿಸಲಾಗಿದ್ದು ಈ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಹೇಗೆ ಕಲ್ಪಿಸಿದ್ದೀರಿ ಎಂದು ಬಾಲೀಶವಾಗಿ ಮಾತನಾಡಿದರು.

ಜೆಡಿಎಸ್ ಸದಸ್ಯರು ಮೌನ :

     ಸಭೆಯಲ್ಲಿ ಕಾಂಗ್ರೆಸ್ ಸದಸ್ಯರುಗಳು ಅಬ್ಬರಿಸುತ್ತಿದ್ದರು ಜೆಡಿಎಸ್‍ನ ಯಾವೊಬ್ಬ ಸದಸ್ಯರು ತುಟಿ ಬಿಚ್ಚದೆ ತಟಸ್ತವಾಗಿದ್ದು ಶಾಸಕರ ಬಗ್ಗೆ ಅವರ ತೀರ್ಮಾನಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು ಕೂಡ ಶಾಸಕರನ್ನು ಸಮರ್ಥಿಸಿಕೊಳ್ಳುವಲ್ಲಿ ಬಲಹೀನರಾಗಿದ್ದರು.
ಉಪಾಧ್ಯಕ್ಷ ಲಕ್ಷ್ಮೀನರಸಪ್ಪ, ಇಒ ಮೋಹನ್ ಕುಮಾರ್ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

(Visited 54 times, 1 visits today)