ತುಮಕೂರು:

      ಮಹದಾಯಿ ಮತ್ತು ಮೇಕೆದಾಟು ಯೋಜನೆಗೆ ಅಡ್ಡಿ ಪಡಿಸುತ್ತಿರುವ ತೆಮಿಳುನಾಡು ಮತ್ತು ಗೋವಾ ಸರಕಾರಗಳ ಕ್ರಮವನ್ನು ಖಂಡಿಸಿ ಹಾಗೂ ಕೇಂದ್ರ ಸರಕಾರದ ಮಧ್ಯಪ್ರವೇಶಕ್ಕೆ ಆಗ್ರಹಿಸಿ ಜಯಕರ್ನಾಟಕ ಸಂಘಟನೆವತಿ ಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

      ನಗರದ ಟೌನ್‍ಹಾಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು, ತಮಿಳುನಾಡು ಮತ್ತು ಗೋವಾ ಸರಕಾರದ ವಿರುದ್ದ ಘೋಷಣೆ ಕೂಗಿದರು.

      ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸಮಾವೇಶಗೊಂಡಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಸಿ.ಪಿ.ಸುಧೀರ್, ಕಾವೇರಿ ಕೊಳ್ಳದಲ್ಲಿ ಬರುವ ಮೇಕೆದಾಟು ಯೋಜನೆಯ ಬಗ್ಗೆ ಕರ್ನಾಟಕ ಸರಕಾರ ಕಳೆದ 15ವರ್ಷಗಳಿಂದ ನಿರಂತರ ಪ್ರಯತ್ನ ನಡೆಸುತ್ತಾ ಬಂದಿದ್ದರೂ,ತಮಿಳುನಾಡು ಸರಕಾರ ಅಡ್ಡಗಾಲು ಹಾಕುತ್ತಲೇ ಬಂದಿದೆ.ಪ್ರಸ್ತುತ ಕೇಂದ್ರ ಸರಕಾರ ಅನುಮತಿ ನೀಡಿದ್ದರೂ, ಅಧಿವೇಶನದಲ್ಲಿ ತಮಿಳುನಾಡು ಸಂಸದರು ವಿರೋಧಿಸುವ ಮೂಲಕ ಯೋಜನೆ ಅನುಷ್ಠಾನಗೊಳ್ಳದಂತೆ ತಡೆಯಲು ಹೊರಟಿರುವುದು ಸರಿಯಲ್ಲ. ಕೂಡಲೇ ಕೇಂದ್ರ ಸರಕಾರ ತಮಿಳುನಾಡು ಸರಕಾರಕ್ಕೆ ಸ್ಪಷ್ಟ ಸೂಚನೆ ನೀಡಿ, ಯೋಜನೆಗೆ ಯಾವುದೇ ಅಡ್ಡಿ ಆತಂಕಗಳು ಬರದಂತೆ ನೋಡಿಕೊಳ್ಳಬೇಕಿದೆ ಎಂದು ಆಗ್ರಹಿಸಿದರು.

      ಕೃಷ್ಣಕೊಳ್ಳದಲ್ಲಿರುವ ಬರುವ ಮಹದಾಯಿ ನದಿಯ ಕಳಸ, ಬಂಡೂರಿ ನಾಲಾ ಯೋಜನೆಗೆ ನೀರು ತೆಗೆದುಕೊಂಡು ಹೋಗಲು ಕೃಷ್ಣಾ ನ್ಯಾಯಾಧೀಕರಣದ ತೀರ್ಪು ನೀಡಿದ್ದರೂ ಗೋವಾ ಸರಕಾರ ಯೋಜನೆಗೆ ಅಡ್ಡಿಪಡಿಸುತ್ತಿದೆ. ಈ ಬಗ್ಗೆ ಹಲವು ಬಾರಿ ಕರ್ನಾಟಕ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಯೋಜನೆಯಿಂದ ಸಾವಿರಾರು ಎಕರೆ ಭೂಮಿಗೆ ನೀರುಣಿಸುವುದರ ಜೊತೆಗೆ, ನೂರಾರು ಹಳ್ಳಿಗಳಿಗೆ ಶುದ್ದ ಕುಡಿಯುವ ನೀರು ಒದಗಿಸಬಹುದಾಗಿದೆ. ಎರಡು ಸರಕಾರಗಳಿಗೆ ಕೇಂದ್ರದಲ್ಲಿರುವ ಬಿಜೆಪಿ ಸರಕಾರ ಸಷ್ಟ ನಿರ್ದೇಶನ ನೀಡಿ ಯೋಜನೆಗಳಿಗೆ ಅಡ್ಡಿಪಡಿಸದಂತೆ ನೋಡಿಕೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

      ಪ್ರತಿಭಟನೆಯಲ್ಲಿ ಜಯಕರ್ನಾಟಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮಾಶಂಕರ್.ಕೆ., ಜಿಲ್ಲಾ ಉಪಾಧ್ಯಕ್ಷ ಹೆಚ್.ಎ.ಸುರೇಶ್, ಯುವಘಟಕದ ಅಧ್ಯಕ್ಷ ಸಚ್ಚಿನ್, ಮಹಿಳಾ ಘಟಕದ ಅಧ್ಯಕ್ಷೆ ಯಾಸ್ಮಿನ್ ತಾಜ್, ಮಹಿಳಾ ನಗರ ಘಟಕದ ಅಧ್ಯಕ್ಷೆ ರಾಧ.ಕೆ., ಆಟೋ ಘಟಕದ ಗಿರೀಶ್‍ಗೌಡ, ರುದ್ರೇಶ್, ನಾಗರಾಜು, ಜಾಕೀರ್, ರಂಗನಾಥ ಮತ್ತಿತರರು ಪಾಲ್ಗೊಂಡಿದ್ದರು.

(Visited 22 times, 1 visits today)