ತುಮಕೂರು: ಪುಷ್ಕರ ಸೆಂಟರ್ ಫಾರ್ ಪರ್‌ಫಾರ್ಮಿಂಗ್ ಆರ್ಟ್ಸ್ ಟ್ರಸ್ಟ್ ಸ್ಥಾಪಕ ಅಧ್ಯಕ್ಷರೂ ಹೆಸರಾಂತ ನೃತ್ಯ ಶಿಕ್ಷಕಿಯಾದ ಡಾ.ಕೆ.ಆರ್.ಸತ್ಯವತಿ ರಾಮನ್ ಅವರ ಭರತನಾಟ್ಯದ ಶಿಷ್ಯೆ ಕು.ವೃದ್ಧಿ ಕಾಮತ್ ಈ ತಿಂಗಳ ೨೪ರಂದು ರಂಗಪ್ರವೇಶ ಮಾಡಲಿದ್ದಾರೆ. ನೃತ್ಯಗುರು ಡಾ.ಸತ್ಯವತಿ ಅವರ ಮಾರ್ಗದರ್ಶನದಲ್ಲಿ ಶ್ರದ್ಧೆಯಿಂದ ನೃತ್ಯದಲ್ಲಿ ಪರಿಣತಿ ಪಡೆದು ತಮ್ಮ ಪ್ರತಿಭೆ ಪ್ರದರ್ಶನ ಮಾಡಲಿದ್ದಾರೆ.
ಕೆ.ವಿ.ಕಾಮತ್ ಹಾಗೂ ಸುಚಿತ್ರಪ್ರಭು ಅವರ ಪುತ್ರಿ ವೃದ್ಧಿ ಕಾಮತ್ ಅವರು ತಮ್ಮ ೯ನೇ ವಯಸ್ಸಿನಲ್ಲಿ ಅಕ್ಕ ಸೃಷ್ಟಿ ಕಾಮತ್ ಜೊತೆಗೆ ಭರತ ನಾಟ್ಯ ಅಭ್ಯಾಸಕ್ಕಾಗಿ ನೃತ್ಯ ಶಿಕ್ಷಕಿ ಡಾ.ಸತ್ಯವತಿ ಕೆ.ಆರ್. ಅವರಲ್ಲಿ ಭರತ ನಾಟ್ಯ ಕಲಿಯಲು ಸೇರಿಕೊಂಡರು. ಶ್ರದ್ಧೆಯಿಂದ ಕಲಿತು ೨೦೧೪ರಲ್ಲಿ ನೃತ್ಯದಲ್ಲಿ ಜ್ಯೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದು ೫ನೇ ರ‍್ಯಾಂಕ್ ಗಳಿಸಿದರು. ಡಾ.ಸತ್ಯವತಿಯವರ ಗರಡಿಯಲ್ಲಿ ಪಳಗಿ ನೃತ್ಯದ ಆಯಾಮಗಳನ್ನು ಸೂಕ್ಷö್ಮವಾಗಿ ಗ್ರಹಿಸಿ ಕಲಿತು ಅದನ್ನು ಅನೇಕ ವೇದಿಕೆಗಳಲ್ಲಿ ಪ್ರದರ್ಶಿಸಿ ಗಮನ ಸೆಳೆದರು. ಡಾ.ಸತ್ಯವತಿಯವರ ಪುಷ್ಕರ ಪ್ರದರ್ಶನ ಕಲೆಗಳ ಸಂಸ್ಥೆ ಹಾಗೂ ನೃತ್ಯ ಸಾಮ್ರಾಟ್ ಆರ್ಟ್ಸ್ ಅಕಾಡೆಮಿಯ ನೃತ್ಯೋತ್ಸವಗಳಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜನೆಯ ಸಾಂಸ್ಕೃತಿಕ ಉತ್ಸವ, ಲಕ್ಷದ್ವೀಪಗಳು ಸೇರಿದಂತೆ ವಿವಿಧ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿ ವೃದ್ಧಿ ಕಾಮತ್ ಗಮನ ಸೆಳೆದಿದ್ದಾರೆ. ಇಂಜಿನಿಯರಿ0ಗ್ ಪದವಿಧರರಾಗಿರುವ ವೃದ್ಧಿ ಅವರು ಪ್ರಸ್ತುತ ಬೆಂಗಳೂರಿನಲ್ಲಿ ಶೆಲ್ ಐಟಿ ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ನೃತ್ಯ ಕಲೆಯನ್ನೂ ಆರಾಧಿಸುತ್ತಿರುವ ವೃದ್ಧಿ ಕಾಮತ್ ಈ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವ ಕನಸು ಹೊತ್ತಿದ್ದಾರೆ.
ಪ್ರಸಿದ್ಧ ನೃತ್ಯಕಾರರಾದ ತುಮಕೂರಿನ ರಾಜರಾಜೇಶ್ವರಿ ನೃತ್ಯಕಲಾ ಮಂದಿರ ಸಂಸ್ಥಾಪಕರಾದ ನಾಟ್ಯಶ್ರೀ ಕೆ.ಎಂ.ರಾಮನ್ ಅವರು ತಮ್ಮ ಸಂಸ್ಥೆ ಮೂಲಕ ೬೩ ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ನೃತ್ಯ ಕಲೆ ಕಲಿಸಿ ಕಲಾ ಕ್ಷೇತ್ರವನ್ನು ಹಸಿರಾಗಿಸಿದ್ದಾರೆ. ಕೆ.ಎಂ.ರಾಮನ್ ಅವರ ಹಿರಿಯ ಪುತ್ರಿ ಡಾ.ಸತ್ಯವತಿ ಕೆ.ಆರ್. ಅವರು ತಂದೆಯ ಕಲಾ ಹಾದಿಯಲ್ಲೇ ಯಶಸ್ವಿಯಾಗಿ ಸಾಗಿದ್ದಾರೆ. ದೇಶ, ವಿದೇಶಗಳ ಪ್ರಸಿದ್ಧ ನೃತ್ಯೋತ್ಸವಗಳಲ್ಲಿ ಪ್ರದರ್ಶನ ನೀಡಿ ಹೆಸರಾಗಿದ್ದಾರೆ. ಹಲವಾರು ಪ್ರಶಸ್ತಿ-ಪುರಸ್ಕಾರಗಳಿಗೆ ಡಾ.ಸತ್ಯವತಿ ಭಾಜನರಾಗಿದ್ದಾರೆ. ಇವರು ನೃತ್ಯ ಗುರುವಾಗಿ ೪೦ ವರ್ಷಗಳಿಂದ ಎರಡು ಸಾವಿರಕ್ಕೂ ಹೆಚ್ಚು ಜನ ಆಸಕ್ತರಿಗೆ ನೃತ್ಯಕಲೆ ಕಲಿಸಿದ್ದಾರೆ.
ಡಾ.ಸತ್ಯವತಿಯವರ ಶಿಷ್ಯೆ ವೃದ್ಧಿ ಕಾಮತ್ ಅವರ ರಂಗಪ್ರವೇಶ ಕಾರ್ಯಕ್ರಮ ಈ ತಿಂಗಳ ೨೪ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ ೫.೩೦ಕ್ಕೆ ಏರ್ಪಾಟಾಗಿದೆ. ನೃತ್ಯ ಸಾಮ್ರಾಟ್ ಅಕಾಡೆಮಿ, ಪುಷ್ಕರ ಸೆಂಟರ್ ಫಾರ್ ಪರ್‌ಫಾರ್ಮಿಂಗ್ ಆರ್ಟ್ಸ್ ಸಂಸ್ಥೆಗಳ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿ ಅರವಿಂದ್ ಕಾಮತ್, ಇತಿಹಾಸಕಾರ ಡಾ.ಜಿ.ಬಿ.ಹರೀಶ್, ಹಿರಿಯ ಪತ್ರಕರ್ತೆ, ಲೇಖಕಿ ವೈ.ಕೆ.ಸಂಧ್ಯಾ ಶರ್ಮಾ, ವಿದೂಷಿ ಮೀನಾಕ್ಷಿ ಜೆ. ಕಾಮತ್ ಮೊದಲಾದವರು ಭಾಗವಹಿಸುವರು.
(Visited 1 times, 1 visits today)