ತುಮಕೂರು: ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಶೌರ್ಯದ ಸಂಕೇತ. ಬ್ರಿಟಿಷರ ವಿರುದ್ಧ ಹೋರಾಡಿದ ಕರ್ನಾಟಕದ ಮೊದಲ ಮಹಿಳಾ ಯೋಧೆ ಎಂದು ತುಮಕೂರು ಉಪವಿಭಾಗಾಧಿಕಾರಿ ನಹೀದಾ ಜಮ್ ಜಮ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ನಗರದ ಕನ್ನಡ ಭವನದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಮೊದಲ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ. ಅವರ ಶೌರ್ಯ, ತ್ಯಾಗ ಮತ್ತು ದೇಶಪ್ರೇಮ ನಮ್ಮೆಲ್ಲರಿಗೂ ಪ್ರೇರಣೆಯ ದೀಪ. ದೇಶದ ಪ್ರತಿಯೊಬ್ಬ ಮಹಿಳೆಯಲ್ಲೂ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಒನಕೆ ಓಬವ್ವ ಇದ್ದಾಳೆ ಎಂಬ ಶಕ್ತಿ ಅರಿವಾದಾಗ ಸಮಾಜ ಪರಿವರ್ತನೆ ಖಚಿತ ಎಂದು ಹೇಳಿದರು.
ಕಿತ್ತೂರು ರಾಣಿ ಚೆನ್ನಮ್ಮ ಅವರು ಭಾರತದ ಸ್ವಾತಂತ್ರ‍್ಯ ಹೋರಾಟದ ಇತಿಹಾಸದಲ್ಲಿ ಅಜರಾಮರ. ಚೆನ್ನಮ್ಮ ಅವರ ಕಾಲದಲ್ಲಿ ಅನೇಕ ಸವಾಲುಗಳನ್ನು ಸ್ವೀಕರಿಸಿ, ಮಹಿಳೆಯರು ಕೇವಲ ಗೃಹಪರಿಧಿಯೊಳಗೆ ಸೀಮಿತವಾಗದೆ ದೇಶ ಮತ್ತು ಸಮಾಜದ ಹಿತಕ್ಕಾಗಿ ಹೋರಾಡಬಹುದೆಂಬುದನ್ನು ಸಾಬೀತುಪ ಡಿಸಿದ ಧೈರ್ಯವಂತೆ ರಾಣಿ ಚನ್ನಮ್ಮ ಎಂದು ಹೇಳಿದರು.
ಇಂದಿನ ಮಹಿಳಾ ಸಬಲೀಕರಣ, ಸಾಮಾಜಿಕ ಸಮಾನತೆ ಹಾಗೂ ರಾಷ್ಟçಭಕ್ತಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಆದರ್ಶಗಳಲ್ಲಿ ಅಡಗಿದೆ ಎಂದು ಹೇಳಿದರಲ್ಲದೆ, ಮುಂದಿನ ಪೀಳಿಗೆಯವರೆಗೆ ಅವರ ತ್ಯಾಗದ ಸ್ಫೂರ್ತಿಯನ್ನು ತಲುಪಿಸುವ ಕಾರ್ಯಕ್ರಮಗಳು ನಡೆಯಬೇಕು ಎಂದರು.
ತಹಸೀಲ್ದಾರ್ ರಾಜೇಶ್ವರಿ ಮಾತನಾಡಿ, ಇಂದಿನ ಸಮಾ ಜದಲ್ಲಿ ಮಹಿಳೆಯರು ಶಿಕ್ಷಣ, ಆಡಳಿತ, ರಾಜಕೀಯ, ವಿಜ್ಞಾನ, ಕಲೆ, ಕ್ರೀಡೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಪ್ರತಿಯೊಬ್ಬರೂ ಕಿತ್ತೂರು ರಾಣಿ ಚೆನ್ನಮ್ಮ ಅವರ ಶೌರ್ಯ, ತ್ಯಾಗ ಮತ್ತು ದೃಢ ನಿಶ್ಚಯದಿಂದ ಪ್ರೇರಣೆ ಪಡೆಯಬೇಕು ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ಮಾತನಾಡಿ, ದೇಶಭಕ್ತರ ಹಾಗೂ ಸಾಧಕರ ಚರಿತ್ರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಯಂತಿ ಅಂಗವಾಗಿ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆ, ದೇಶಭಕ್ತಿ ಗೀತೆ ಹಾಗೂ ವೇಷಭೂಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ ಕು ಮಿರ್ಜಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಾ.ಹ.ರಮಾಕುಮಾರಿ, ಜಿಲ್ಲಾ ಮಹಿಳಾ ಸಂಘಟನೆ ಅಧ್ಯಕ್ಷ ಡಾ: ಬಿ.ಸಿ. ಶೈಲಾ ನಾಗರಾಜ್, ಮಹಿಳಾ ಸ್ವ ಸಹಾಯ ಸಂಘದ ವಿವಿಧ ಸದಸ್ಯರು ಸೇರಿದಂತೆ ಮತ್ತಿತರರು ಹಾಜರಿದ್ದರು.
(Visited 1 times, 1 visits today)