
ತುಮಕೂರು: ಸಮಾಜದಲ್ಲಿ ವಿಕಲಚೇತನರಿಗೆ ಬೇಕಾದುದು ಕೇವಲ ಸಹಾನುಭೂತಿ ಅಲ್ಲ. ಬದಲಾಗಿ ಎಲ್ಲ ಸಮಾನ ಅವಕಾಶಗಳು ಸಿಗಬೇಕು. ಅವಕಾಶಗಳು ನೀಡಿದರೆ ಅವರಲ್ಲಿರುವ ಪ್ರತಿಭೆಯನ್ನು ಹೊರತರಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ನೂರುನ್ನಿಸ ಅಭಿಪ್ರಾಯ ವ್ಯಕ್ತಪಡಿಸಿದರು.
ಬುಧವಾರ ನಗರದ ಬಾಲ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾ ಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರ ಯದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾ ಟಿಸಿ ಮಾತನಾಡಿದ ಅವರು, ವಿಕಲಚೇತನರು ವಿಶೇಷ ಚೇತನರು. ಸಮಾಜ ದಲ್ಲಿ ಅವರಿಗೆ ಸಮಾನವಾಗಿ ಅವಕಾಶಗಳು ತಲುಪಿದ್ದಲ್ಲಿ, ಅವರು ಇನ್ನಷ್ಟು ಉನ್ನತ ಮಟ್ಟಕ್ಕೆ ತಲುಪಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮನೆ, ದೇವಸ್ಥಾನ, ಮಸೀದಿ, ಚರ್ಚುಗಳಲ್ಲಿ ವಿಕಲಚೇತನರು ಅಥವಾ ಬುದ್ಧಿಮಾಂದ್ಯತೆ ಹೊಂದಿರುವವರನ್ನು ಮೂಢನಂಬಿಕೆಗಳ ಕಾರಣದಿಂದ ಸಂಕೋಲೆಗಳಲ್ಲಿ ಸಿಲುಕಿಸಿ ಹಿಂಸೆ ನೀಡುವುದು ಗಂಭೀರ ಅಪರಾಧ. ಇಂತಹ ಕೃತ್ಯ ಎಸಗುವವರಿಗೆ ಕಠಿಣ ಶಿಕ್ಷೆಯ ಜೊತೆಗೆ ದಂಡವನ್ನೂ ವಿಧಿಸಲಾಗುವುದು ಎಂದು ಅವರು ಎಚ್ಚರಿಸಿದರು. ಸಂವಿಧಾನದಡಿ ವಿಕಲಚೇತನರು ಘನತೆ-ಗೌರವದಿಂದ ಬದುಕುವ ಹಕ್ಕನ್ನು ಹೊಂದಿದ್ದಾರೆ ಮತ್ತು ಅವರ ಹಕ್ಕುಗಳಿಗೆ ಧಕ್ಕೆ ಉಂಟಾಗದAತೆ ನೋಡಿಕೊಳ್ಳಬೇಕು ಎಂದರು.
ವಿಕಲಚೇತರ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ನಟರಾಜು ಮಾತನಾಡಿ ವಿಶ್ವ ವಿಕಲಚೇತನರ ದಿನಾಚರಣೆಯ ಇತಿಹಾಸ ಮತ್ತು ಉದ್ದೇಶವನ್ನು ವಿವರಿಸಿದರು. ವಿಕಲಚೇತನರೂ ಸಹ ಸಮಾಜದ ಅವಿಭಾಜ್ಯ ಅಂಗವಾಗಿದ್ದು, ಸಂವಿಧಾನಾತ್ಮಕವಾಗಿ ಅವರಿಗೂ ಸಹ ಎಲ್ಲ ರಂತೆ ಸಮಾಜದಲ್ಲಿ ಬದುಕುವ ಹಕ್ಕನ್ನು ನೀಡಲಾಗಿದೆ ಎಂದು ತಿಳಿಸಿದರು.
ವಿಕಲಚೇತನರನ್ನು ಎಲ್ಲಾ ಕೆಲಸಗಳಲ್ಲಿ ತೊಡಗುವಂತೆ ಮಾಡಬೇಕು. ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳು ಅವರಿಗೆ ಸಮರ್ಪಕವಾಗಿ ತಲುಪಬೇಕು. ವಿಕಲಚೇತನರು ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಬಲ್ಲರು ಎಂಬುದನ್ನು ಈಗಾಗಲೇ ತೋರಿಸಿಕೊಟ್ಟಿದ್ದಾರೆ. ಇತ್ತೀಚೆಗೆ ಅಂಗವಿಕಲ ಮಹಿಳೆಯರ ವಿಶ್ವ ವರ್ಲ್ಡ್ ಕಪ್ ಕ್ರಿಕೆಟ್‌ನಲ್ಲಿ ನಮ್ಮ ದೇಶ ವಿಜಯಶಾಲಿಯಾಗಿದ್ದು, ಈ ತಂಡದಲ್ಲಿ ತುಮಕೂರು ಜಿಲ್ಲೆಯವರಾದ ದೀಪಿಕಾ ಹಾಗೂ ಕಾವ್ಯ ಅವರು ಭಾಗವಹಿಸಿ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಈಶ್ವರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಸಿದ್ರಾಮಣ್ಣ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪವಿತ್ರ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.





