
ತುಮಕೂರು: ರಾಜ್ಯ ಗೃಹ ಸಚಿವರಾಗಿರುವ ಡಾ.ಜಿ.ಪರಮೇಶ್ವರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಒತ್ತಾಯಿಸಿ ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವ ಸೇನೆ ವತಿಯಿಂದ ನಗರದಲ್ಲಿ ರಕ್ತದಲ್ಲಿ ನೂರಾರು ಸಹಿ ಸಂಗ್ರಹಿಸಿ ಎಐಸಿಸಿಗೆ ಕಳುಹಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಒತ್ತಾಯಿಸಿದ್ದಾರೆ.
ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್‌ಯುವ ಸೇನೆ(ರಿ),ಇದರ ರಾಜ್ಯಾಧ್ಯಕ್ಷ ನಗುತಾರಂಗನಾಥ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳು, ಹಿತೈಷಿಗಳು ನಗರದ ಟೌನ್‌ಹಾಲ್ ಬಳಿ ಇರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯ ಮುಂಭಾಗದಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಿ, ಬಿಜಿಎಸ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ತದ ನಂತರರಕ್ತದಲ್ಲಿ ಸಹಿ ಸಂಗ್ರಹಿಸುವ ಮೂಲಕ ಎಐಸಿಸಿಗೆ ಮನವಿ ಪತ್ರವನ್ನು ರವಾನಿಸಿದರು.
ಈ ವೇಳೆ ಮಾತನಾಡಿದ ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್‌ಯುವ ಸೇನೆಯ ರಾಜ್ಯಾಧ್ಯಕ್ಷ ನಗುತಾರಂಗನಾಥ್, ಪ್ರಸ್ತುತ ಗೃಹ ಸಚಿವರಾಗಿರುವ ಡಾ.ಜಿ.ಪರಮೇಶ್ವರ್ ೮ ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿಎರಡು ಬಾರಿಯೂ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತಂದಿದ್ದಾರೆ. ಅಲ್ಲದೆ ಉಪಮುಖ್ಯಮಂತ್ರಿ ಯಾಗಿ, ಗೃಹ, ಉನ್ನತ ಶಿಕ್ಷಣ, ವೈದ್ಯಕೀಯ ಶಿಕ್ಷಣ, ರೇಷ್ಮೆ ಇನ್ನಿತರ ಇಲಾಖೆಗಳಲ್ಲಿ ಅತ್ಯಂತ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ, ಸಜ್ಜನ ರಾಜಕಾರಣಿಯಾಗಿದ್ದಾರೆ. ಎಐಸಿಸಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಅವರ ಪಕ್ಷ ನಿಷ್ಠೆ ಮತ್ತು ಕಾರ್ಯವೈಖರಿಯನ್ನು ಹಾಗೂ ಪಕ್ಷಕ್ಕಾಗಿ ಸಲ್ಲಿಸಿದ ಸೇವೆಯನ್ನು ಗುರುತಿಸಿ, ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು.
ನಗರಸಭೆಯ ಮಾಜಿ ಉಪಾಧ್ಯಕ್ಷ ವಾಲೆ ಚಂದ್ರಯ್ಯ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಕಳೆದ ನಲವತ್ತು ವರ್ಷಗಳಿಂದ ಡಾ.ಜಿ.ಪರಮೇಶ್ವರ್ ರಾಜಕಾರಣದಲ್ಲಿ, ಅದರಲ್ಲಿಯೂ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದು, ತನು, ಮನ, ಧನ ಎಲ್ಲವೂ ಪಕ್ಷಕ್ಕೆ ಅರ್ಪಿಸಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವ ಸೇನೆ ಉಪಾಧ್ಯಕ್ಷ ಭೀಮಸಂದ್ರ ಮಹೇಶ್, ರಾಜ್ಯಾ ಕಾರ್ಯಾಧ್ಯಕ್ಷ ಆದೇಶ್.ಸಿ.ಎಂ.,ಗುಲ್ಬರ್ಗ ಜಿಲ್ಲಾಧ್ಯಕ್ಷ ಶ್ರೀಧರ್ ಡಿ.ಇಂಗನಕಲ್ಲು, ತುಮಕೂರು ಜಿಲ್ಲಾ ಉಪಾಧ್ಯಕ್ಷ ಗೋವಿಂದರಾಜು, ಕಾಂಗ್ರೆಸ್ ಮುಖಂಡರಾದ ಅರಕೆರೆ ಶಂಕಕರ್,ಕೊರಟಗೆರೆ ಮಲ್ಲಿಕಾರ್ಜುನ್,ಮೋಹನಕುಮಾರ್,ಹೆಗ್ಗೆರೆಕೃಷ್ಣಮೂರ್ತಿ, ಸಿ.ಭಾನುಪ್ರಕಾಶ್, ಛಲವಾದಿ ಶೇಖರ್, ಬಂಡೆಕುಮಾರ್, ನಾಗಮಣಿ, ಗೃಹ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ.ನಾಗಣ್ಣ, ಎನ್.ಕೆ.ನಿಧಿಕುಮಾರ್, ಧರಣೇಂದ್ರ ಕುಮಾರ್ ಸೇರಿದಂತೆ ನೂರಾರುಜನರು ಪಾಲ್ಗೊಂಡಿದ್ದರು.





